ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ, ನಿರಂಕುಶ ಪ್ರಭುತ್ವ: ಕಾಂಗ್ರೆಸ್
ಸಂಸತ್ತು ಪ್ರಜಾಪ್ರಭುತ್ವದ ಆತ್ಮ. ಸಂಸತ್ತಿನ ಒಳಗೆ ನಿರಾಯಾಸವಾಗಿ ಅಪರಿಚಿತರು ಪ್ರವೇಶ ಮಾಡಿ ಹೊಗೆ ಬಾಂಬೆ ಸ್ಫೋಟಿಸಿರುವುದು ಮೋದಿ ಸರ್ಕಾರದ ವೈಫಲ್ಯ: ಬಿ.ಕೆ.ರವಿಕುಮಾರ್
ಚಾಮರಾಜನಗರ(ಡಿ.24): ವಿಪಕ್ಷದ 143 ಮಂದಿ ಸಂಸತ್ ಸದಸ್ಯರನ್ನು ಅಮಾನತು ಮಾಡುವ ಮೂಲಕ ಪ್ರಧಾನಿ ಮೋದಿ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಸರ್ಕಾರ ನಿರಂಕುಶ ಪ್ರಭುತ್ವದ ಹಾದಿ ಹಿಡಿದಿದೆ ಎಂದು ಆರೋಪಿಸಿ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಭಿತ್ತಿಪತ್ರಗಳನ್ನು ಹಿಡಿದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ಸಂಸದ ಪ್ರತಾಪ್ ಸಿಂಹ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿ ಕೆಲಕಾಲ ಧರಣಿ ನಡೆಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿ, ಶುಗರ್ ಮಾತ್ರೆಗೆ ಬರ: ರೋಗಿಗಳು ಪರದಾಟ..!
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಸಂಸತ್ತು ಪ್ರಜಾಪ್ರಭುತ್ವದ ಆತ್ಮ. ಸಂಸತ್ತಿನ ಒಳಗೆ ನಿರಾಯಾಸವಾಗಿ ಅಪರಿಚಿತರು ಪ್ರವೇಶ ಮಾಡಿ ಹೊಗೆ ಬಾಂಬೆ ಸ್ಫೋಟಿಸಿರುವುದು ಮೋದಿ ಸರ್ಕಾರದ ವೈಫಲ್ಯ. ಇದಕ್ಕೆ ಕಾರಣರಾದ ಸಂಸದ ಪ್ರತಾಪ್ ಸಿಂಹ ಅವರನ್ನು ವಿಚಾರಣೆ ಮಾಡದೆ, ಸಂಸತ್ತಿನಲ್ಲಿ ಫಟನೆಯ ಬಗ್ಗೆ ಹೇಳಿಕೆಯನ್ನು ನೀಡದೆ, ಚರ್ಚೆಗೆ ಅವಕಾಶ ನೀಡದೆ, ವಿಪಕ್ಷದ 143 ಮಂದಿ ಸಂಸತ್ ಸದಸ್ಯರನ್ನು ಅಮಾನತು ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆಉಂಟು ಮಾಡಿ ಐಡಿ, ಸಿಬಿಐಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಮೋದಿ ಮತ್ತು ಅಮಿತ್ ಶಾ ನಿರಂಕುಶ ಪ್ರಭುತ್ವದ ಹಾದಿ ಹಿಡಿದಿದ್ದಾರೆ ಎಂದು ಆರೋಪಿಸಿದರು.
ಇಂದು ದೇಶಾದ್ಯಂತ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿದೆ. ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಖರ್ಗೆರನ್ನು ಸಿಎಂ ಮಾಡಲಿಲ್ಲ, ಇನ್ನು ಪಿಎಂ ಮಾಡ್ತಾರಾ?: ಕೇಂದ್ರ ಸಚಿವ ನಾರಾಯಣಸ್ವಾಮಿ
ವಿಪಕ್ಷದ ಸಂಸದರನ್ನೇ ಅಮಾನತು ಮಾಡುವ ಮೂಲಕ ವಿಪಕ್ಷದ ಬಾಯಿಯನ್ನು ಮಾತ್ರವಲ್ಲ, ಇಡೀ ದೇಶದ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಲಾಗಿದೆ. ಇದರಿಂದ ದೇಶದಲ್ಲಿ ಅಘೋಷಿತ ತುರ್ತುಸ್ಥಿತಿಯ ವಾತಾರಣ ಸೃಷ್ಟಿಯಾಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಪ್ರಧಾನ ಕಾರ್ಯದರ್ಶಿ ಆರ್. ಮಹದೇವ, ಚಿಕ್ಕಮಹದೇವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲತಾ ರಾಜಶೇಖರ್, ನಾಗಶ್ರೀ, ಚಿನ್ನಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಮುಖಂಡರಾದ ಸದಾಶಿವಮೂರ್ತೀ, ಕೆರೆಹಳ್ಳಿ ನವೀನ್, ಮಹದೇವಶೆಟ್ಟಿ, ಸೋಹೆಲ್, ನಾಗರಾಜು, ಉಮೇಶ್, ರೇವಣ್ಣ, ಪ್ರಕಾಶ್, ಆರ್.ಪಿ. ನಂಜುಂಡಸ್ವಾಮಿ, ನಾಗಾರ್ಜುನ ಪೃಥ್ವಿ, ಮಹದೇವಯ್ಯ, ಚಂದ್ರು, ಚಂದ್ರಶೇಖರ್, ನಟರಾಜು, ನಾಗು, ಚಂಗುಮಣಿ, ಪುಟ್ಟಸ್ವಾಮಿ ಇದ್ದರು.