Asianet Suvarna News Asianet Suvarna News

ಪ್ರಧಾನಿ ಮೋದಿ ಬಂದಾಗ ರಸ್ತೇಲಿ ಬಿಜೆಪಿಗರು: ಕಾಂಗ್ರೆಸ್‌, ಕಮಲ ಫೈಟ್‌

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಬಿಜೆಪಿ ಮುಖಂಡರು ಜನರ ಮಧ್ಯೆ ನಿಂತು ಕೈ ಬೀಸಿರುವ ವಿಚಾರ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. 

Karnataka Congress Slams BJP Leaders Over PM Narendra Modi Bengaluru Road Show gvd
Author
First Published Aug 27, 2023, 8:02 AM IST

ಬೆಂಗಳೂರು (ಆ.27): ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಬಿಜೆಪಿ ಮುಖಂಡರು ಜನರ ಮಧ್ಯೆ ನಿಂತು ಕೈ ಬೀಸಿರುವ ವಿಚಾರ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಜನರ ಮಧ್ಯೆ ನಿಂತ ಬಿಜೆಪಿ ನಾಯಕರನ್ನು ಮೋದಿ ಗುರುತು ಹಿಡಿಯದೇ ಇರುವುದು ಮತದಾನ ಮಾಡಿದ ಮತದಾರಿಗೆ ಅಪಮಾನ ಎಂದು ಕಾಂಗ್ರೆಸ್‌ ನಾಯಕರು ಹೇಳಿದರೆ, ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಜನರ ಮಧ್ಯೆ ನಿಲ್ಲುವ ಮೂಲಕ ಪಕ್ಷದ ನಾಯಕರು ವಿನಮ್ರತೆಯನ್ನು ಪ್ರದರ್ಶಿಸಿದ್ದಾರೆ ಎಂದು ತಿಳಿಸಿದೆ.

ನಾಯಕರು ಬೀದಿಪಾಲು: ‘ನಾಯಕರದ್ದು ಎಂತಹ ದುಸ್ಥಿತಿ.. ರಾಜ್ಯ ಬಿಜೆಪಿಯ ‘ದಂಡ’ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ! ಬಿಜೆಪಿಯ ಹೈಕಮಾಂಡ್‌ ಹಾಗೂ ಮೋದಿ ರಾಜ್ಯದಲ್ಲಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ! ಛೇ, ಮಿನಿಮಮ… ಮರ್ಯಾದೆಯೂ ಇಲ್ಲದಾಯಿತೇ?’ ಎಂದು ಕಾಂಗ್ರೆಸ್‌ ಪಕ್ಷ ಮೋದಿ ಭೇಟಿ ಬೆನ್ನಲ್ಲೇ ಟ್ವೀಟ್‌ ಮಾಡಿತು.

ನನಗೆ ಅಮಿತ್ ಶಾ ಅಥವಾ ಯಾರೂ ಕರೆ ಮಾಡಿಲ್ಲ: ಜಗದೀಶ್ ಶೆಟ್ಟರ್

‘ಬಿಜೆಪಿ ನಾಯಕರು ವಿರೋಧ ಪಕ್ಷದ ನಾಯಕರಾಗಲು ಬ್ಯಾರಿಕೇಡ್‌ ಹಿಂದೆ ನಿಂತು ತಮ್ಮ ನಾಯಕತ್ವ ಗುಣ ಪ್ರದರ್ಶಿಸಿದ್ದಾರೆ. ಪ್ರಧಾನಿಗಳು ಇವರ ಮಾತು ಆಲಿಸುವುದು ಹೋಗಲಿ, ಗುರುತನ್ನೇ ಹಿಡಿಯುತ್ತಿಲ್ಲ ಎನ್ನಿಸುತ್ತಿದೆ. ಬೀದಿಯಲ್ಲಿ ನಿಂತ ಬಿಜೆಪಿ ನಾಯಕರು ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಲ್ಲ, ಇದು ಮತ ನೀಡಿದ ಮತದಾರರಿಗೆ, ಕನ್ನಡಿಗರಿಗೆ ಹಾಗೂ ಕಾರ್ಯಕರ್ತರಿಗೆ ಅವಮಾನ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಟ್ವೀಟ್‌ ಮಾಡಿ ಲೇವಡಿ ಮಾಡಿದರು.

ಬಿಜೆಪಿ ತಿರುಗೇಟು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದು ಚಂದ್ರಯಾನ ಯೋಜನೆಯ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ ಎಂದು ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ. ರಾಜ್ಯ ಬಿಜೆಪಿ ಟ್ವೀಟ್‌ ಮಾಡಿ, ‘ನಮ್ಮ ಪಕ್ಷದ ಪ್ರಮುಖರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಪಾಲ್ಗೊಂಡು ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿರುವುದರಲ್ಲಿ ಹುಳುಕು ಹುಡುಕಲೆತ್ನಿಸಿರುವ ನಿಮಗೆ ಕಾಮಾಲೆಯಂತೆ ಏನೋ ಕಾಯಿಲೆ ಇರಬಹುದು. ಗಾಂಧಿ ಕುಟುಂಬದ ಜೀತಕ್ಕೆ ಬಿದ್ದವರಂತೆ ಸೇವೆ ಮಾಡುವ ಕಾಂಗ್ರೆಸ್ಸಿಗರಿಗೆ ಪ್ರಧಾನಿಗಳ ಅಧಿಕೃತ ಸರ್ಕಾರಿ ಭೇಟಿಗೂ, ಅನೌಪಚಾರಿಕ ಭೇಟಿಗೂ ವ್ಯತ್ಯಾಸ ತಿಳಿದಿಲ್ಲ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ತಮ್ಮ ಮೋಜಿಗಾಗಿ ಲಕ್ಷದ್ವೀಪಕ್ಕೆ ತೆರಳಲು ಸೇನಾ ನೌಕೆ ಬಳಸುತ್ತಿದ್ದವರು ಬಿಟ್ಟು ಹೋದ ಸಂಸ್ಕಾರದಲ್ಲಿ ಬೆಳೆದವರಿಗೆ ಇವು ಅರ್ಥ ಆಗದು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗಾಂಧಿ ಕುಟುಂಬ ಕೊಟ್ಟಿರುವ ಮರ್ಯಾದೆಯನ್ನು ಕರ್ನಾಟಕ ನೋಡಿದೆ ಎಂದು ವ್ಯಂಗ್ಯವಾಡಿದೆ.

ಇಸ್ರೋ ವಿಜ್ಞಾನಿಗಳು ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದು ವಿಪರ್ಯಾಸ: ನಟ ಚೇತನ್‌

ವಿನಮ್ರತೆ ಪ್ರದರ್ಶನ: ‘ರಾಜ್ಯ ಮುಖ್ಯಮಂತ್ರಿ ಸೇರಿದಂತೆ ಇತರೆ ಗಣ್ಯರು ಮುಂಜಾನೆ ವಿಮಾನ ನಿಲ್ದಾಣದಲ್ಲಿ ಹಾಜರಿರದಂತೆ ಪ್ರಧಾನಿ ಕಚೇರಿ ಮನವಿ ಮಾಡಿತ್ತು. ರಾಜ್ಯದ ಬಿಜೆಪಿ ನಾಯಕರಿಗೆ ಅವಕಾಶ ನೀಡಿದ್ದರೆ ಅದು ಹೇಗೆ ನ್ಯಾಯಯುತವಾಗುತ್ತಿತ್ತು. ಆದ್ದರಿಂದ ಬಿಜೆಪಿ ಮುಖಂಡರು ಜನರು ಮತ್ತು ಕಾರ್ಯಕರ್ತರೊಂದಿಗೆ ಉಪಸ್ಥಿತರಿದ್ದರು. ಇದು ಪ್ರಧಾನ ಮಂತ್ರಿಗಳ ಕಚೇರಿ ಮತ್ತು ರಾಜ್ಯ ಬಿಜೆಪಿ ನಾಯಕರ ವಿನಮ್ರತೆಯನ್ನು ತೋರಿಸುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

Follow Us:
Download App:
  • android
  • ios