ಬೆಂಗಳೂರು[ಜ.27]: ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ, ವಿಪಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕರ ನೇಮಕ ಕಸರತ್ತಿನ ಫಲವಾಗಿ ಮೂಲ-ವಲಸಿಗ ಕಾಂಗ್ರೆಸ್ಸಿಗರ ನಡುವೆ ಬಣ ರಾಜಕೀಯ ಬಿರುಸು ಪಡೆದಿದ್ದು, ಇದನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಉಪಾಹಾರದ ನೆಪದಲ್ಲಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಕುಳಿತು ಉಪಾಹಾರ ಸೇವಿಸಿದ್ದಾರೆ. ಪರಸ್ಪರ ಆತ್ಮೀಯತೆ ತೋರ್ಪಡಿಸಿ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ನೇರವಾಗಿ ಜನಾರ್ದನ ಹೋಟೆಲ್‌ಗೆ ತೆರಳಿದ ನಾಯಕರು, ಉಪಾಹಾರ ಸೇವಿಸುವ ನೆಪದಲ್ಲಿ ಕಾಂಗ್ರೆಸ್‌ನ ಪ್ರಸಕ್ತ ಬೆಳವಣಿಗೆಗಳ ಬಗ್ಗೆಯೂ ಅನೌಪಚಾರಿಕವಾಗಿ ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಮತ್ತೆ ವಕೀಲಿಕೆ ಆರಂಭಿಸ್ತಾರಾ ಮಾಜಿ ಸಿಎಂ ಸಿದ್ದರಾಮಯ್ಯ?

ಹಲವು ತಿಂಗಳಿನಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಕಾರ್ಯಾಧ್ಯಕ್ಷ ಸ್ಥಾನ, ವಿಪಕ್ಷ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ಸ್ಥಾನ ಬೇರ್ಪಡಿಸುವ ಕುರಿತು ಮೂಲ ಹಾಗೂ ವಲಸಿಗ ಕಾಂಗ್ರೆಸ್ಸಿಗರ ನಡುವೆ ಗೊಂದಲಗಳು ಮುಂದುವರೆದಿವೆ. ಇತ್ತೀಚೆಗೆ ಎರಡೂ ಬಣದ ನಾಯಕರೂ ಬಹಿರಂಗವಾಗಿಯೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಬಣ ರಾಜಕೀಯದ ಬಿಸಿ ತಾರಕಕ್ಕೇರಿತ್ತು.

ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡಿದ್ದ ಹೈಕಮಾಂಡ್‌ ನಾಯಕರು ಒಗ್ಗಟ್ಟು ಪ್ರದರ್ಶಿಸುವಂತೆ ರಾಜ್ಯ ನಾಯಕರಿಗೆ ತಾಕೀತು ಮಾಡಿದ್ದರು. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಜತೆ ಮಾತನಾಡಿದ್ದ ನಾಯಕರು, ಬಣ ರಾಜಕೀಯದಿಂದ ಪಕ್ಷದ ಬಗ್ಗೆ ಜನರಲ್ಲಿ ಕೆಟ್ಟಅಭಿಪ್ರಾಯ ಮೂಡುತ್ತದೆ. ಹೀಗಾಗಿ ಕೂಡಲೇ ಗೊಂದಲಗಳನ್ನು ಬಗೆಹರಿಸಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

KPCC ಹುದ್ದೆ: ವೇಣುಗೋಪಾಲ್-ಡಿಕೆಶಿ ಸಭೆಯ ಮಾತುಕತೆ ಬಹಿರಂಗ