ಮೇಕೆದಾಟು ಪಾದಯಾತ್ರೆ  ಕನಕಪುರ ಸಮೀಪವಿರುವ ಕಾವೇರಿ ಹಾಗೂ ಅರ್ಕಾವತಿ ನದಿಗಳ ಸಂಗಮ ತಾಣದಲ್ಲಿ ಭಾನುವಾರ ಅದ್ಧೂರಿ ಚಾಲನೆ ಪಡೆದುಕೊಳ್ಳಲಿದೆ

ಶ್ರೀಕಾಂತ್‌ ಎನ್‌. ಗೌಡಸಂದ್ರ

ಕನಕಪುರ (ಜ. 9): ಬೆಂಗಳೂರು ಸೇರಿ ಕಾವೇರಿ ಜಲಾನಯನ ಪ್ರದೇಶದ ಎರಡೂವರೆ ಕೋಟಿ ಜನರಿಗೆ ನೀರುಣಿಸುವ ಮೇಕೆದಾಟು ಯೋಜನೆಗೆ ಚಾಲನೆ ನೀಡಲು ಒತ್ತಡ ಹೇರುವ ಮೂಲಕ ಬಿಜೆಪಿ ಸರ್ಕಾರದ (BJP Goverment) ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್‌ (Congress) ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ (Mekedatu Padayatre), ಕನಕಪುರ ಸಮೀಪವಿರುವ ಕಾವೇರಿ ಹಾಗೂ ಅರ್ಕಾವತಿ ನದಿಗಳ ಸಂಗಮ ತಾಣದಲ್ಲಿ ಭಾನುವಾರ ಅದ್ಧೂರಿ ಚಾಲನೆ ಪಡೆದುಕೊಳ್ಳಲಿದೆ.

1999ರಲ್ಲಿ ಎಸ್‌.ಎಂ.ಕೃಷ್ಣ ಅವರ ಪಾಂಚಜನ್ಯ ಯಾತ್ರೆ ಹಾಗೂ 2010ರಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಬಳ್ಳಾರಿ ಪಾದಯಾತ್ರೆಗಳು ರೂಪಿಸಿದ ಮ್ಯಾಜಿಕ್‌ ಅನ್ನು ಪುನರ್‌ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಆಯೋಜನೆಗೊಂಡಿರುವ 10 ದಿನಗಳ ಈ ನೀರಿಗಾಗಿ ನಡಿಗೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಬೆಳಗ್ಗೆ 8 ಗಂಟೆಗೆ ಚಾಲನೆ ನೀಡಲಿದ್ದಾರೆ.

169 ಕಿ.ಮೀ ಯಾತ್ರೆ:

ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಸೇರಿದಂತೆ ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಗಳ ಮೂಲಕ 169 ಕಿ.ಮೀ ದೂರ ಹಾದುಹೋಗುವ ಈ ಪಾದಯಾತ್ರೆಗೆ ಆಡಳಿತಾರೂಢ ಬಿಜೆಪಿ ಹಾಗೂ ಒಕ್ಕಲಿಗ ಬೆಲ್ಟ್‌ನ ಪ್ರಬಲ ಪಕ್ಷ ಎನಿಸಿದ ಜೆಡಿಎಸ್‌ ತೀವ್ರ ಆಕ್ಷೇಪ ಎತ್ತಿವೆ. ಅಧಿಕಾರದಲ್ಲಿದ್ದಾಗ ಕ್ರಮ ಕೈಗೊಳ್ಳದೆ ಈಗ ನೀರಿಗಾಗಿ ನಡಿಗೆ ಆಂದೋಲನ ನಡೆಸುವುದು ಅರ್ಥಹೀನ ಎಂದೇ ಈ ಪಕ್ಷಗಳ ನಾಯಕರು ಟೀಕಿಸಿದ್ದಾರೆ.

ಇದನ್ನೂ ಓದಿ:Mekedatu Politics: ಪಾದಯಾತ್ರೆ ತಡೆಯಲೆಂದೇ ನಿಷೇಧಾಜ್ಞೆ ಜಾರಿ: ಸಿದ್ದು ಕಿಡಿ

ಯಾತ್ರೆಗೆ ವಿರೋಧ:

ಜೊತೆಗೆ ಕೊರೋನಾ ಹಾವಳಿ ವಿಪರೀತ ಆಗುತ್ತಿರುವ ಕಾರಣಕ್ಕೂ ಪಾದಯಾತ್ರೆ ಕೈಬಿಡುವಂತೆ ಪ್ರತಿಪಕ್ಷ ಕಾಂಗ್ರೆಸ್‌ಗೆ ರಾಜ್ಯ ಸರ್ಕಾರ ನೇರ ಆಗ್ರಹ ಮಾಡಿದೆ. ಅಲ್ಲದೆ, ವಾರಾಂತ್ಯ ಕಫä್ರ್ಯದಂತಹ ಕ್ರಮಗಳ ಮೂಲಕ ತಡೆಯೊಡ್ಡುವ ಪ್ರಯತ್ನವನ್ನೂ ನಡೆಸಿದೆ. ಆದರೆ, ಇದ್ಯಾವುದಕ್ಕೂ ಜಗ್ಗದೆ ಕೋವಿಡ್‌ ನಿಯಮಾವಳಿ ಪಾಲಿಸಿಯೇ ಪಾದಯಾತ್ರೆ ನಡೆಸುವ ವಾಗ್ದಾನದೊಂದಿಗೆ ಕಾಂಗ್ರೆಸ್‌ ನಾಯಕರು ಪಾದಯಾತ್ರೆಗೆ ಮುಂದಾಗಿದ್ದಾರೆ. ಆದರೆ, ರಾಜ್ಯ ಸರ್ಕಾರ ಪಾದಯಾತ್ರೆ ನಡೆಸದಂತೆ ನೋಟಿಸ್‌ ನೀಡುವ ಕೋವಿಡ್‌ ನಿಯಮಾವಳಿ ಮೀರಿದರೆ ಕ್ರಮ ಕೈಗೊಳ್ಳುವ ನಿರ್ದೇಶನದೊಂದಿಗೆ ದೊಡ್ಡ ಸಂಖ್ಯೆಯ ಪೊಲೀಸ್‌ ತುಕಡಿಗಳನ್ನು ಸಂಗಮದಲ್ಲಿ ನಿಯೋಜಿಸಿದೆ.

ಸಂಘರ್ಷದ ಸುಳಿವು:

ಇದಕ್ಕೆ ಜಗ್ಗದ ಕಾಂಗ್ರೆಸ್ಸಿನ ಬಹುತೇಕ ನಾಯಕರು ಕನಕಪುರದಲ್ಲಿ ಸಂಗಮಿಸಿದ್ದರೆ, ರಾಜ್ಯದ ವಿವಿಧೆಡೆಯಿಂದ ನೂರಾರು ಕಾರ್ಯಕರ್ತರು ಹಾಗೂ ಹೋರಾಟಗಾರರು ಸಂಗಮಕ್ಕೆ ಆಗಮಿಸುವ ಮೂಲಕ ಕೋವಿಡ್‌ ನಿಯಮಾವಳಿ ಧೂಳೀಪಟದ ಸೂಚನೆ ನೀಡಿದ್ದಾರೆ. ಇದನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಂಡರೆ ಸಂಘರ್ಷ ಖಚಿತ ಎಂಬ ಲಕ್ಷಣಗಳಿವೆ. ಹೀಗಾಗಿ ರಾಜ್ಯ ಸರ್ಕಾರ ಭಾನುವಾರ ಸಂಗಮದಲ್ಲಿ ಹೈಡ್ರಾಮಾ ನಿರ್ಮಾಣವಾಗವಂತಹ ಕ್ರಮ ಕೈಗೊಳ್ಳುವುದೇ ಅಥವಾ ಜನಜಾತ್ರೆಗೆ ಅವಕಾಶ ನೀಡುವುದೇ ಎಂಬ ಕುತೂಹಲ ನಿರ್ಮಾಣವಾಗಿದೆ.

ಇದನ್ನೂ ಓದಿ:Mekedatu Project: ಪಾದಯಾತ್ರೆಗೆ ಭರ್ಜರಿ ಸಿದ್ಧತೆ: ಇಂದಿನಿಂದ ಆರಂಭ!

ಪಾದಯಾತ್ರೆ ನಡೆಸಿದರೆ ಕ್ರಮ:

ಕೊರೋನಾ ವಾರಾಂತ್ಯದ ಕಫ್ರ್ಯೂ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಸದಂತೆ ರಾಮನಗರ ಜಿಲ್ಲಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಪೊಲೀಸ್‌ ವರಿಷ್ಠಾಧಿಕಾರಿಗಳು ಪಾದಯಾತ್ರೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಎಚ್ಚರಿಕೆ ಹಿನ್ನೆಲೆಯಲ್ಲಿ ಈ ಸಂಬಂಧ ಶನಿವಾರ ಸಂಜೆ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಡಿ.ಕೆ.ಶಿವಕುಮಾರ್‌ ನಿವಾಸದಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಪಾದಯಾತ್ರೆಯ ಲಾಭ-ನಷ್ಟಗಳ ಬಗ್ಗೆ ಚರ್ಚಿಸಿ ಅಂತಿಮವಾಗಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ.

ಉತ್ಸಾಹದಲ್ಲಿ ಕಾಂಗ್ರೆಸ್‌:

ಬೆಂಗಳೂರಿನಿಂದ ಕನಕಪುರದವರೆಗೆ ಕನಕಪುರ ಮುಖ್ಯರಸ್ತೆಯಲ್ಲಿ ಮೇಕೆದಾಟು ಪಾದಯಾತ್ರೆ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಕನಕಪುರ ಪಟ್ಟಣದಲ್ಲಿ ಪಾದಯಾತ್ರೆಯ ವಿವಿಧ ಬಣ್ಣದ ಧ್ವಜಗಳು ರಾರಾಜಿಸುತ್ತಿದ್ದು, ಎಲ್ಲೂ ಕಾಂಗ್ರೆಸ್‌ ಧ್ವಜ ಕಾಣದಂತೆ ಎಚ್ಚರ ವಹಿಸಲಾಗಿದೆ. ತನ್ಮೂಲಕ ಇದೊಂದು ಪಕ್ಷಾತೀತ ಹೋರಾಟ ಎಂದು ಬಿಂಬಿಸಲು ಕಾಂಗ್ರೆಸ್‌ ಹೊರಟಿದೆ.

ಇತ್ತೀಚೆಗೆ ಸೊರಗಿದ್ದ ಕಾಂಗ್ರೆಸ್‌ಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ, ವಿಧಾನ ಪರಿಷತ್‌ ಫಲಿತಾಂಶ ಹೊಸ ಹುಮ್ಮಸ್ಸು ನೀಡಿದೆ. ಕಳೆದ ವರ್ಷದ ಮಾಚ್‌ರ್‍ನಲ್ಲಿ ಕೋಲಾರದ ಕುರುಡುಮಲೆಯಿಂದ ಕಾಂಗ್ರೆಸ್‌ ಸೋತ ಕ್ಷೇತ್ರಗಳಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಗಿತ್ತು. ಆದರೆ, ಕೊರೋನಾದಿಂದಾಗಿ ಅದು ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ಇದೀಗ ಜೆಡಿಎಸ್‌ನ ಮತ ಬ್ಯಾಂಕ್‌ ಇರುವ ರಾಮನಗರ ಹಾಗೂ ಬಿಜೆಪಿ ಪ್ರಾಬಲ್ಯವಿರುವ ಬೆಂಗಳೂರು ನಗರ ಎರಡೂ ಕಡೆ ಪಾದಯಾತ್ರೆ ನಡೆಸುವ ಮೂಲಕ ಮುಂದಿನ ಚುನಾವಣೆಗೆ ಭರ್ಜರಿ ಚಾಲನೆ ನೀಡಲು ಪಕ್ಷ ಮುಂದಾಗಿದೆ.