ಬೆಂಗಳೂರು[ಡಿ.16]: ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಸೋಲುಂಟಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮಾತ್ರವಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕೆನಿಸಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಗೆ ಆ್ಯಂಜಿಯೋಪ್ಲಾಸ್ಟಿಶಸ್ತ್ರಚಿಕಿತ್ಸೆಗೊಳಗಾಗಿ ವಿಶ್ರಾಂತಿ ಪಡೆಯುವಾಗ ಆರೋಗ್ಯ ವಿಚಾರಿಸಲು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ಬಂದ ತಮ್ಮ ಆಪ್ತ ವಲಯದ ಶಾಸಕರು ಮತ್ತು ಮುಖಂಡರ ಬಳಿ ಸಿದ್ದರಾಮಯ್ಯ ಅವರು ಈ ರೀತಿ ಹೇಳಿಕೊಂಡಿದ್ದಾರೆ.

ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್‌ ಪಡೆಯುವಂತೆ ಆಸ್ಪತ್ರೆ ಭೇಟಿ ವೇಳೆ ಆಪ್ತರು ಮನವಿ ಮಾಡಿದಾಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್‌ ಪಡೆಯುವುದಿಲ್ಲ. ಪಕ್ಷಕ್ಕೆ ದ್ರೋಹ ಮಾಡಿ ಹೋದವರಿಗೆ ಜನರು ಬುದ್ಧಿ ಕಲಿಸುತ್ತಾರೆ ಎಂಬ ನಂಬಿಕೆ ಇತ್ತು. ಆದರೆ, ಅದು ಹುಸಿಯಾಯಿತು. ಪ್ರಜಾಪ್ರಭುತ್ವದಲ್ಲಿ ಕೆಲವು ಮೌಲ್ಯಗಳನ್ನು ಪಾಲಿಸಬೇಕೆಂಬ ನಂಬಿಕೆ ಇಟ್ಟುಕೊಂಡವನು ನಾನು. ಕೇವಲ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮಾತ್ರವಲ್ಲ, ಆ ಕ್ಷಣದಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕೆನಿಸಿತ್ತು ಎಂದು ಹೇಳಿಕೊಂಡರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರ ಮಾತು ಈ ಕೇಳುತ್ತಿದ್ದಂತೆ ಆತಂಕಗೊಂಡ ಅವರ ಆಪ್ತ ಬಳಗ, ದಯಮಾಡಿ ಅಂತಹ ನಿರ್ಧಾರವನ್ನು ಮಾತ್ರ ಮಾಡಬೇಡಿ ಎಂದಾಗ ಸಿದ್ದರಾಮಯ್ಯ ಅವರು, ಬಿಡ್ರಯ್ಯಾ ಒಂದು ಕೋಳಿ ಕೂಗದಿದ್ದರೇನು ಬೆಳಕು ಹರಿಯಲ್ವಾ? ಸೂರ್ಯ ಪ್ರತಿದಿನ ಹುಟ್ಟುತ್ತಾನೆ, ಮುಳುಗುತ್ತಾನೆ. ಯಾರಿಲ್ಲದಿದ್ದರೂ ರಾಜಕಾರಣ ಮುಂದುವರೆಯುತ್ತದೆ ಎಂದು ತೀವ್ರ ಬೇಸರದಿಂದ ನುಡಿದರು ಎನ್ನಲಾಗಿದೆ.