ಬೆಂಗಳೂರು(ಜ.13): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರದ ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಬುಧವಾರ ಅಮಾವಾಸ್ಯೆ ಕಳೆದು ಮಧ್ಯಾಹ್ನ 3.50ರ ಶುಭ ಮುಹೂರ್ತ ನಿಗದಿಯಾಗಿದೆ.

ರಾಜಭವನದ ಗಾಜಿನ ಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಏಳರಿಂದ ಎಂಟು ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದ್ದು, ಅಂತಿಮವಾಗಿ ಯಾರು ಸಂಪುಟ ಸೇರ್ಪಡೆಯಾಗಲಿದ್ದಾರೆ ಎಂಬುದರ ಸ್ಪಷ್ಟಮಾಹಿತಿ ಬುಧವಾರ ಬೆಳಗ್ಗೆಯೇ ಹೊರಬೀಳುವ ಸಾಧ್ಯತೆಯಿದೆ.

ಸದ್ಯ ಏಳು ಸ್ಥಾನಗಳು ಖಾಲಿ ಇದ್ದು, ಅಬಕಾರಿ ಸಚಿವ ಎಚ್‌.ನಾಗೇಶ್‌ ಅವರನ್ನು ಸಂಪುಟದಿಂದ ಕೈಬಿಡುವ ಪ್ರಯತ್ನ ನಡೆದಿದೆ. ಒಬ್ಬರನ್ನು ಕೈಬಿಡಬೇಕಾಗಿ ಬರಬಹುದು ಎಂಬ ಮಾತನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಆದರೆ, ಇದಕ್ಕೆ ನಾಗೇಶ್‌ ಅವರ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ವತಃ ನಾಗೇಶ್‌ ಅವರೂ ತಮ್ಮನ್ನು ಸಂಪುಟದಿಂದ ಕೈಬಿಡದಂತೆ ಮುಖ್ಯಮಂತ್ರಿಗಳಲ್ಲಿ ಪರಿ ಪರಿಯಾಗಿ ಮನವಿ ಮಾಡಿದ್ದಾರೆ. ಇದಕ್ಕೆ ಮಣಿದು ನಾಗೇಶ್‌ ಅವರನ್ನು ಸಂಪುಟದಲ್ಲಿ ಮುಂದುವರೆಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬುಧವಾರ ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆ ಕರೆದಿದ್ದು, ಆ ಸಭೆಯ ಬಳಿಕ ನಾಗೇಶ್‌ ಅಥವಾ ಬೇರೆ ಯಾವುದಾದರೂ ಸಚಿವರ ರಾಜೀನಾಮೆ ಪಡೆಯುವ ನಿರ್ಧಾರ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ಅನ್ಯ ಪಕ್ಷಗಳಿಂದ ವಲಸೆ ಬಂದು ಬಿಜೆಪಿ ಸರ್ಕಾರ ರಚಿಸಲು ನೆರವಾಗಿರುವ ಎಂ.ಟಿ.ಬಿ. ನಾಗರಾಜ್‌ ಮತ್ತು ಆರ್‌. ಶಂಕರ್‌ ಅವರಿಗೆ ಸಚಿವ ಸ್ಥಾನ ನಿಶ್ಚಿತವಾಗಿದೆ. ಇವರಿಬ್ಬರೂ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲೂ ಸಚಿವರಾಗಿದ್ದರು. ಆ ಸ್ಥಾನ ತ್ಯಜಿಸಿ ಬಂದಿದ್ದರು.

ಆದರೆ, ವಲಸೆ ಬಂದಿರುವವರ ಪೈಕಿ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಬಿಜೆಪಿ ವರಿಷ್ಠರು ಸಹಮತ ಸೂಚಿಸಿಲ್ಲ. ಹೀಗಾಗಿ, ಮುನಿರತ್ನ ಅವರು ಮಂಗಳವಾರ ಹೆಚ್ಚೂ ಕಡಮೆ ಇಡೀ ದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸದಲ್ಲೇ ಬೀಡು ಬಿಟ್ಟಿದ್ದರು. ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವಂತೆ ಯಡಿಯೂರಪ್ಪ ಅವರು ವರಿಷ್ಠರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಕೊಟ್ಟಮಾತನ್ನು ಉಳಿಸಿಕೊಳ್ಳುವುದರ ಜೊತೆಗೆ ಮುಂಬರುವ ಬಿಬಿಎಂಪಿ ಚುನಾವಣೆಗೆ ಮುನಿರತ್ನ ಅವರ ನೆರವು ಬೇಕಾಗುತ್ತದೆ ಎಂಬ ಮಾತನ್ನು ಮುಖ್ಯಮಂತ್ರಿಗಳು ವರಿಷ್ಠರಿಗೆ ಹೇಳಿದ್ದಾರೆ. ಇದರ ಫಲಿತಾಂಶ ಬುಧವಾರ ಬೆಳಗ್ಗೆ ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಸರ್ಕಾರ ಅಸ್ತಿತ್ವಕ್ಕೆ ತರಲು ತೆರೆಮರೆಯಲ್ಲಿ ಬಹುವಾಗಿ ಶ್ರಮಿಸಿದ್ದ ಸಿ.ಪಿ.ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿಗಳೂ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಕೆಲದಿನಗಳ ಹಿಂದೆಯೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಅದೇ ರೀತಿ ಹಿರಿಯ ಶಾಸಕ ಉಮೇಶ್‌ ಕತ್ತಿ ಅವರಿಗೂ ಈ ಬಾರಿ ಸಚಿವ ಸ್ಥಾನ ಒಲಿಯುವ ನಿರೀಕ್ಷೆಯಿದೆ. ಅಲ್ಲದೆ, ಮತ್ತೊಬ್ಬ ಹಿರಿಯ ಶಾಸಕ ಎಸ್‌.ಅಂಗಾರ ಅವರಿಗೂ ಸಚಿವ ಸ್ಥಾನ ನೀಡುವ ಸಂಭವವಿದೆ. ಒಂದು ವೇಳೆ ಅವರಿಗೆ ತಪ್ಪಿದಲ್ಲಿ ಕರಾವಳಿ ಭಾಗದಿಂದ ಮತ್ತೊಬ್ಬ ಶಾಸಕ ಸುನೀಲ್‌ಕುಮಾರ್‌ ಅವರ ಪಾಲಾಗಬಹುದು.

ಇನ್ನು ಪಂಚಮಸಾಲಿ ಮೀಸಲಾತಿ ಕುರಿತು ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ಸಮುದಾಯಕ್ಕೆ ಸೇರಿದ ಮುರುಗೇಶ್‌ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಒಲವು ವ್ಯಕ್ತವಾಗಿದೆ. ಈ ಮೂಲಕ ಮೀಸಲಾತಿ ಹೋರಾಟ ಮಣಿಸಬಹುದು ಎಂಬ ಲೆಕ್ಕಾಚಾರವೂ ಅಡಗಿದೆ. ಪಕ್ಷದ ಹಿರಿಯ ಶಾಸಕ ಅರವಿಂದ ಲಿಂಬಾವಳಿ ಅವರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಇವರನ್ನು ಹೊರತುಪಡಿಸಿದರೆ ಹಾಲಪ್ಪ ಆಚಾರ್‌, ಪೂರ್ಣಿಮಾ ಶ್ರೀನಿವಾಸ್‌ ಮೊದಲಾದ ಮೊದಲ ಬಾರಿಗೆ ವಿಧಾನಸಭಾ ಸದಸ್ಯರಾಗಿರುವವರ ಹೆಸರುಗಳೂ ಪ್ರಸ್ತಾಪವಾಗಿವೆ.