ಸಂಪುಟ ಕಸರತ್ತು: ಸಚಿವಾಕಾಂಕ್ಷಿಗಳಿಗೆ ಬಿಗ್ ಶಾಕ್.!
ರಾಜ್ಯ ಸಂಪುಟ ವಿಸ್ತರಣೆಯೋ? ಅಥವಾ ಸಂಪುಟ ಪುನಾರಚನೆಯೋ ಎನ್ನುವುದು ಗೊಂದಲದಲ್ಲಿದೆ. ಅಲ್ಲದೇ ಸಂಪುಟ ಕಸರತ್ತು ಇನ್ನಷ್ಟು ದಿನಗಳ ವರೆಗೆ ಮುಂದೋಗುವ ಸಾಧ್ಯತೆಗಳಿವೆ.
ಬೆಂಗಳೂರು, (ನ.21): ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದ್ದು, ಇನ್ನು ಹಲವು ದಿನ ಕಾಯಲೇಬೇಕಾದ ಅನಿವಾರ್ಯ ಎದುರಾಗಿದೆ.
ಈಗಾಗಲೇ ಖುದ್ದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನ ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಆದ್ರೆ, ಇದಕ್ಕೆ ನಡ್ಡಾ ಅವರು ಕೂಡಲೇ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ನೀವು ಹೋಗಿ ನಾವೇ ಚರ್ಚೆ ಮಾಡಿ ತಿಳಿಸುತ್ತೇವೆ ಎಂದು ಬಿಎಸ್‌ವೈ ಹೇಳಿ ಕಳುಹಿಸಿದ್ದಾರೆ. ಇದರಿಂದ ಭಾರೀ ನಿರೀಕ್ಷೆ ಇಟ್ಟುಕೊಂಡು ಹೋಗಿದ್ದ ಯಡಿಯೂರಪ್ಪ ಬರಿಗೈಲ್ಲಿ ವಾಪಸ್ ಆಗಿದ್ದಾರೆ.
ಸಂಪುಟ ವಿಸ್ತರಣೆ ಸರ್ಕಸ್: ಬಿಜೆಪಿ ಹೈಕಮಾಂಡ್ ಮನಸ್ಸಿನಲ್ಲಿ ಏನಿದೆ?
ಡಿಸೆಂಬರ್‌ನಲ್ಲಿ ಸ್ಪಷ್ಟ ಚಿತ್ರಣ
ಹೌದು... ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಹೈಕಮಾಂಡ್ ಮತ್ತೊಮ್ಮೆ ಚರ್ಚೆ ನಡೆಸಲಿದ್ದು, ಅಲ್ಲದೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸುವವರೆಗೂ ಸಂಪುಟ ವಿಸ್ತರಣೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ.
ನವೆಂಬರ್ ನಲ್ಲಿ ಸಂಪುಟ ವಿಸ್ತರಣೆ ಅನುಮಾನವಾಗಿದೆ. ಡಿಸೆಂಬರ್‌ನಲ್ಲಿ ಡಿ.4 ಹಾಗೂ 5ರಂದು ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅರುಣ್ ಸಿಂಗ್ ಭಾಗಿಯಾಗುವ ಸಾಧ್ಯತೆಯಿದೆ.
ಸಭೆಯಲ್ಲಿ ಸಂಪುಟ ವಿಸ್ತರಣೆ ಕುರಿತು ಅಂತಿಮ ಚರ್ಚೆ ನಡೆದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಸಂಪುಟ ವಿಸ್ತರಣೆ ನವೆಂಬರ್ ಬದಲಾಗಿ ಡಿಸೆಂಬರ್ ನಲ್ಲಿ ನಡೆಯಬಹುದು ಎಂಬ ಮಾತು ಬಿಜೆಪಿ ಉನ್ನತ ಮೂಲಗಳ ಮಾಹಿತಿ.
ಅಲ್ಲದೇ ಮುಂದಿನ ತಿಂಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಸಹ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಆ ವೇಳೆ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆ ಎನ್ನುವುದು ತಿಳಿಯಲಿದೆ.