ತುಮಕೂರು(ನ.10): ಕಳೆದ ಒಂದು ತಿಂಗಳಿನಿಂದ ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ನಡೆದ ರಾಜಕೀಯ ಚಟುವಟಿಕೆ ಕ್ಲೈಮ್ಯಾಕ್ಸ್‌ ಹಂತ ತಲುಪಿದ್ದು ಯಾವ ಪಕ್ಷಕ್ಕೆ ಶಿರಾ ಕ್ಷೇತ್ರ ಒಲಿಯುತ್ತದೆ ಎಂಬ ಕುತೂಹಲವಷ್ಟೆಬಾಕಿ ಇದೆ.

ಜೆಡಿಎಸ್‌ನ ಬಿ. ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿದ್ದು ಶಿರಾ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆಯಾಗಿ ಮತದಾನ ಆಗುವ ದಿನದ ತನಕ ಒಂದಲ್ಲಾ ಒಂದು ರೋಚಕತೆಗೆ ಈ ಕ್ಷೇತ್ರ ಸಾಕ್ಷಿಯಾಯಿತು. ಜಿಲ್ಲೆಯಲ್ಲಿ ಅತಿ ಹೆಚ್ಚುಬಾರಿ ಗೆದ್ದಿರುವ ಜಯಚಂದ್ರ ಅವರಿಗೆ ಇದು 11 ನೇ ಚುನಾವಣೆ. ಈಗಾಗಲೇ 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಯಚಂದ್ರ ಅವರು 7ನೇ ಬಾರಿಗೆ ಗೆಲುವಿನ ನಗೆ ಬೀರುತ್ತಾರ ಎಂಬ ಕುತೂಹಲಕ್ಕೆ ಮಂಗಳವಾರ ತೆರೆ ಬೀಳಲಿದೆ.

ನಾಲ್ಕು ಬಾರಿ ಕಳ್ಳಂಬೆಳ್ಳದಲ್ಲಿ 2 ಬಾರಿ ಶಿರಾ ಕ್ಷೇತ್ರದಿಂದ ಗೆದ್ದಿರುವ ಜಯಚಂದ್ರ ಅವರು ಕಳೆದ ಬಾರಿ ಬಿ. ಸತ್ಯನಾರಾಯಣ ವಿರುದ್ಧ ಪರಾಭವಗೊಂಡಿದ್ದರು. ಈಗ ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು ಮತ್ತೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇನ್ನು ಜೆಡಿಎಸ್‌ ಅನುಕಂಪದ ಮತವನ್ನು ಸೆಳೆಯಲು ಈ ಬಾರಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸಿದೆ. ಮೊದಲು ಅವರ ಪುತ್ರ ಸತ್ಯಪ್ರಕಾಶ್‌ಗೆ ಟಿಕೆಟ್‌ ನೀಡುವ ಸಂಬಂಧ ಚರ್ಚೆ ನಡೆದಿತ್ತು. ಅಲ್ಲದೇ ಸತ್ಯನಾರಾಯಣ ಕುಟುಂಬದವರಲ್ಲದೆ ಬೇರೆಯವರಿಗೆ ಟಿಕೆಟ್‌ ನೀಡುವ ಸಂಬಂಧ ವ್ಯಾಪಕವಾಗಿ ಚರ್ಚೆ ನಡೆದು ಕಡೆಗೆ ಅವರ ಪತ್ನಿ ಅಮ್ಮಾಜಮ್ಮಗೆ ಟಿಕೆಟ್‌ ನೀಡಲಾಯಿತು.

ಇನ್ನು ಬಿಜೆಪಿಯಿಂದ ಎಸ್‌.ಆರ್‌. ಗೌಡ ಹಾಗೂ ಬೇವಿನಹಳ್ಳಿ ಮಂಜುನಾಥ್‌ ಅವರನ್ನು ಬದಿಗೊತ್ತಿ ಮಾಜಿ ಸಂಸದ ಸಿ.ಪಿ. ಮೂಡಲಗಿರಿಯಪ್ಪ ಅವರ ಪುತ್ರ ಡಾ. ರಾಜೇಶಗೌಡ ಅವರಿಗೆ ಟಿಕೆಟ್‌ ನೀಡಲಾಯಿತು. ಕಳೆದ ಚುನಾವಣೆಯಲ್ಲಿ ಕೇವಲ 16 ಸಾವಿರ ಮತಗಳನ್ನಷ್ಟೆಪಡೆದಿದ್ದ ಬಿಜೆಪಿ ಈ ಬಾರಿ ಸಮಬಲದ ಪ್ರದರ್ಶನ ನೀಡಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಖುದ್ದು ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದರು. ಕ್ಷೇತ್ರದಾದ್ಯಂತ ಕೇಸರಿ ಟವಲ್‌ನ ಟ್ರೆಂಡ್‌ ಸೃಷ್ಟಿಸಿ 3 ವಾರಗಳ ಕಾಲ ಕ್ಯಾಂಪೇನ್‌ ಮಾಡಿದರು. ಖುದ್ದು ಮುಖ್ಯಮಂತ್ರಿಯವರನ್ನೇ ಮದಲೂರಿಗೆ ಕರೆಸಿ ಭಾಷಣ ಮಾಡಿಸಿದ್ದರು. ಜೊತೆಗೆ ರೋಡ್‌ ಶೋ ನಡೆಸಿ ಹವಾ ಸೃಷ್ಟಿಸಿದ್ದರು. ಈಗ ಎಲ್ಲ ರಾಜಕೀಯ ಚಟುವಟಿಕೆಗಳು ಕ್ಲೈಮ್ಯಾಕ್ಸ್‌ ತಲುಪಿದ್ದು ರಾಜಕೀಯ ಮುಖಂಡರ ಭವಿಷ್ಯ ನಿರ್ಧರಿಸುವ ಮತಯಂತ್ರಗಳು ತುಮಕೂರಿನಲ್ಲಿ ಭದ್ರವಾಗಿದೆ. ಮಂಗಳವಾರ ಬೆಳಿಗ್ಗೆ ಮತಎಣಿಕೆ ಕಾರ್ಯ ಆರಂಭವಾಗಿ ಮಧ್ಯಾಹ್ನದೊಳಗೆ ವಿಜಯಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಾಧ್ಯತೆಯಿದೆ.

ಮೂರು ಪಕ್ಷಗಳು ಗೆಲುವು ನಮ್ಮದೇ ಎಂಬ ವಿಶ್ವಾಸದಲ್ಲಿದೆ.ಬಿಜೆಪಿ ಮುಖಂಡರು ಶಿರಾ ಕ್ಷೇತ್ರವನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲುವುದಾಗಿ ಹೇಳಿಕೊಂಡಿದ್ದಾರೆ. ಹಾಗೆಯೇ ಕಾಂಗ್ರೆಸ್‌ ಕೂಡ ಗೆಲುವು ನಮ್ಮದೇ ಎಂಬ ಉಮೇದಿನಲ್ಲಿದೆ. ಇನ್ನು ಜೆಡಿಎಸ್‌ ಕೂಡ ಶತಾಯಗತಾಯ ಗೆದ್ದೇ ತೀರುತ್ತೇವೆಂಬ ಹುಮ್ಮಸ್ಸಿನಲ್ಲಿದ್ದಾರೆ. ಹೀಗಾಗಿ ಯಾರ ಕೊರಳಿಗೆ ಜಯದ ಮಾಲೆ ಬೀಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಶಿರಾ ಕಸಬ, ಕಳ್ಳಂಬೆಳ್ಳ, ಗೌಡಗೆರೆ, ಹುಲಿಕುಂಟೆ ಹೋಬಳಿಗಳನ್ನೊಳಗೊಂಡ ಶಿರಾ ಕ್ಷೇತ್ರದಲ್ಲಿ 2 ಲಕ್ಷ 15 ಸಾವಿರ ಮತದಾರರಿದ್ದು ಸುಮಾರು ಶೇ. 84 ರಷ್ಟುಭರ್ಜರಿ ಮತದಾನವಾಗಿದೆ. ತುಮಕೂರಿನ ಪಾಲಿಟೆಕ್ನಿಕ್‌ನಲ್ಲಿ ಮಂಗಳವಾರ ಬೆಳಿಗ್ಗೆ ಮತಎಣಿಕೆ ಕಾರ್ಯ ನಡೆಯಲಿದ್ದು ಸರ್ವ ರೀತಿಯಲ್ಲೂ ಜಿಲ್ಲಾಡಳಿತ ಸಜ್ಜಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.

ಮುಖ್ಯಾಂಶಗಳು

1. ಇಂದು ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭ

2. 4821 ಅಂಚೆ ಮತ ಸೇರಿ 24 ಸುತ್ತುಗಳಲ್ಲಿ ಮತಎಣಿಕೆ

3. 1 ಲಕ್ಷ 77 ಸಾವಿರದ 645 ಮಂದಿ ಮತ ಚಲಾಯಿಸಿದ್ದಾರೆ

4. ಬೆಳಿಗ್ಗೆ 7 ಗಂಟೆಗೆ ಸ್ಟ್ರಾಂಗ್‌ ರೂಂ ತೆರೆದು ಎಣಿಕೆಗೆ ಚಾಲನೆ