Karnataka By Elections ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್, ಬೆಳಗಾವಿಯ ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಲಕ್ಷ್ಮಣ ಸವದಿಗೆ ಮಹತ್ವದ ಜವಾಬ್ದಾರಿ ನೀಡಿದೆ.
ಬೆಳಗಾವಿ: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಉಪ ಚುನಾವಣೆಯ ಕಾವು ಜೋರಾಗಿದೆ. ಇದರ ನಡುವೆಯೇ ಕಾಂಗ್ರೆಸ್ ಹೈಕಮಾಂಡ್ ಈಗ ಉಪ ಕದನ ಏರ್ಪಟ್ಟಿರುವ ಬಾಗಲಕೋಟೆ ಮತ್ತು ದಾವಣಗೆರೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಗಡಿ ಜಿಲ್ಲೆಯ ಮೂವರು ಪ್ರಭಾವಿ ನಾಯಕರಿಗೆ ಮಹತ್ವದ ಜವಾಬ್ದಾರಿಗಳನ್ನು ನೀಡಿದೆ.
ಬಾಗಲಕೋಟೆಗೆ ಸಚಿವ ಸತೀಶ್ ಜಾರಕಿಹೊಳಿಗೆ ಸಂಪೂರ್ಣ ಹೊಣೆಗಾರಿಕೆ ನೀಡಲಾಗಿದೆ. ಇನ್ನೊಂದೆಡೆ, ದಾವಣಗೆರೆ ದಕ್ಷಿಣ ಕ್ಷೇತ್ರದ ಜವಾಬ್ದಾರಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಗಲಿಗೆ ಹೊರಿಸಲಾಗಿದೆ. ಇದರ ನಡುವೆ ಇವೆರಡೂ ಕ್ಷೇತ್ರಗಳಲ್ಲಿ ಸ್ಟಾರ್ ಪ್ರಚಾರಕರಾಗಿ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರನ್ನು ನಿಯೋಜಿಸಲಾಗಿದೆ.
ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟವಾಗಿ ಎರಡು ಪ್ರಮುಖ ಸಮೀಕರಣಗಳ ಮೇಲೆ ಗಮನ ಹರಿಸಿದೆ. ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಸವದಿ, ಅಹಿಂದ ಸಮೀಕರಣವನ್ನು ಗಟ್ಟಿಗೊಳಿಸಲು ಜಾರಕಿಹೊಳಿ, ಹೆಬ್ಬಾಳ್ಕರ್ ಕಾರ್ಯತಂತ್ರ ರೂಪಿಸಲಿದ್ದಾರೆ.
ಸಿದ್ದಾರೆ. ಇವೆರಡರ ಸಮನ್ವಯವೇ ಗೆಲುವಿನ ದಿಕ್ಕು ನಿರ್ಧರಿಸುವ ಪ್ರಮುಖ ಅಂಶವಾಗಲಿದೆ ಎನ್ನಲಾಗಿದೆ.
ಆದರೆ, ಕಾಂಗ್ರೆಸ್‌ಗೆ ಬಾಗಲಕೋಟೆಗಿಂದ ದಾವಣಗೆರೆಯೇ ದೊಡ್ಡ ಸವಾಲಾಗಿದೆ. ಸ್ಥಳೀಯ ಮಟ್ಟದಲ್ಲಿ ಗುಂಪು ರಾಜಕೀಯ, ಅಭ್ಯರ್ಥಿ ಆಯ್ಕೆ ಕುರಿತ ಅಸಮಾಧಾನ ಮತ್ತು ವಿರೋಧ ಪಕ್ಷಗಳ ಆಕ್ರಮಣಕಾರಿ ಪ್ರಚಾರ ಈ ಕದನವನ್ನು ಇನ್ನಷ್ಟು ಕಠಿಣಗೊಳಿಸಿದೆ. ವಿಶೇಷವಾಗಿ, ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್‌ನಿಂದ ಬಂಡಾಯವಾಗಿ ಸ್ಪರ್ಧೆ ಮಾಡಿರುವುದೇ ದೊಡ್ಡ ಸವಾಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾಯಕರ ಸಂಘಟನಾ ಸಾಮರ್ಥ್ಯ ಮತ್ತು ಸಮನ್ವಯ ಕೌಶಲ್ಯ ಪ್ರಮುಖ ಅಂಶವಾಗಲಿದೆ.
ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳು ಕೇವಲ ಕ್ಷೇತ್ರಗಳ ಗೆಲುವಿಗೆ ಸೀಮಿತವಾಗದೇ, ಬೆಳಗಾವಿ ಜಿಲ್ಲೆಯ ನಾಯಕರ ರಾಜಕೀಯ ಪ್ರಭಾವವನ್ನು ಪರೀಕ್ಷಿಸುವ ವೇದಿಕೆಯಾಗಿದೆ. ಈ ಕದನದಲ್ಲಿ ಕಾಂಗ್ರೆಸ್ ಸಾಧಿಸುವ ಫಲಿತಾಂಶ ಮುಂದಿನ ರಾಜಕೀಯ ತಂತ್ರಗಳಿಗೆ ದಿಕ್ಸೂಚಿಯಾಗಲಿದೆ.


