ಹುಬ್ಬಳ್ಳಿ[ಡಿ.03]: ‘ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುವ ಜಾಯಮಾನ ನಂದಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ್ದ ಮಾಧ್ಯಮ ಪ್ರತಿನಿಧಿಗಳು, ಉಪಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‌ನೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

ಈಗಲೇ ಈ ಬಗ್ಗೆ ಹೇಳುವ ಅವಶ್ಯಕತೆಯಿಲ್ಲ ನೋಡೋಣ. ಉಪಚುನಾವಣೆ ಫಲಿತಾಂಶ ಹೇಗೆ ಬರುತ್ತದೆ. ಏನು ಬರುತ್ತದೆ. ಯಾವ ಪಕ್ಷಕ್ಕೆ ಪ್ಲಸ್‌ ಆಗುತ್ತದೆ ಎಂಬುದನ್ನು ಕಾಯ್ದು ನೋಡೋಣ. ಕಾಂಗ್ರೆಸ್‌ನವರು ಒಬ್ಬೊಬ್ಬರು ತಮ್ಮದೇ ಆದ ಲೆಕ್ಕಾಚಾರದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ನಾನು ಕೂಸು ಹುಟ್ಟುವ ಮೊದಲೇ ಕುಲಾವಿ ಹೋಲಿಸುವ ಜಾಯಮಾನದವನಲ್ಲ. ಫಲಿತಾಂಶ ಬಂದ ಮೇಲೆ ಜನರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳುತ್ತೇವೆ. ಈಗಲೇ ಯಾವುದೇ ನಿರ್ಧಾರ ಕೈಗೊಳ್ಳಲ್ಲ ಎಂದು ನುಡಿದರು.

ಬಿಜೆಪಿಯವರು ನೋಡಿದರೆ 15 ಸ್ಥಾನಗಳನ್ನು ನಾವೇ ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ಕಾಂಗ್ರೆಸ್‌ ಕೂಡ ಅದೇ ರೀತಿ ಹೇಳುತ್ತಿದೆ. ನಮಗೆ ಕನಿಷ್ಠ 6ರಿಂದ 8 ಸ್ಥಾನ ಬರಬಹುದು ಎಂಬ ವಿಶ್ವಾಸವಿದೆ. ಆದರೆ ನಾವು ಹೇಳಿದಂತೆ ಫಲಿತಾಂಶ ಬರಬೇಕಲ್ಲ. ಫಲಿತಾಂಶ ಬಂದ ಬಳಿಕ ಏನು ಮಾಡಬೇಕು ಎಂಬುದರ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ. ಜನರ ಹಿತದೃಷ್ಟಿಮುಖ್ಯವಾಗಿರುತ್ತದೆ ಎಂದು ನುಡಿದರು.