ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಮತದಾನದ ನಂತರ ಅವರು ಕುಟುಂಬ, ದೇವಸ್ಥಾನ ಮತ್ತು ಕಾರ್ಯಕರ್ತರೊಂದಿಗೆ ಸಮಯ ಕಳೆಯುತ್ತಿದ್ದು, ಮೇ 4ರ ಫಲಿತಾಂಶಕ್ಕೂ ಮುನ್ನ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.
ಬಾಗಲಕೋಟೆ/ ದಾವಣಗೆರೆ (ಏ.11): ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಉಪ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕುಟುಂಬ, ದೇವಸ್ಥಾನ, ಮುಖಂಡರು, ಕಾರ್ಯಕರ್ತರ ಜತೆಗೆ ಸಮಯ ಕಳೆಯುತ್ತಿದ್ದಾರೆ. ಮತದಾನದ ಮರುದಿನವಾದ ಶುಕ್ರವಾರ ಅಭ್ಯರ್ಥಿಗಳು ದಿನನಿತ್ಯದ ಕಾರ್ಯ ಚಟುವಟಿಗಳಲ್ಲಿ ಎಂದಿನಂತೆ ಭಾಗವಹಿಸಿದ್ದರು. ಮೇ 4ರಂದು ಘೋಷಣೆ ಆಗಲಿರುವ ಫಲಿತಾಂಶದ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು ಇದ್ದು, ಫಲಿತಾಂಶ ಬರುವವರಿಗೂ ಚರ್ಚೆ ಮುಂದುವರೆಯಲಿದೆ.
ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಎಂ.ಶಾಮನೂರು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರು ಕಳೆದ ಒಂದು ತಿಂಗಳಿನಿಂದ ಪ್ರಚಾರದಲ್ಲಿ ಭಾಗವಹಿಸಿದ್ದರು. ಚುನಾವಣೆ ನಂತರ ಎಂದಿನಂತೆ ಕೆಲಸಕ್ಕೆ ವಾಪಸಾಗಿದ್ದಾರೆ.
ಚರಂತಿಮಠ ಅವರು, ಬೆಳಗ್ಗೆ 10 ಗಂಟೆಗೆ ಎಪಿಎಂಸಿ ಅಡತಿ ಅಂಗಡಿಯಲ್ಲಿ ವ್ಯವಹಾರದ ಕುರಿತು ಮಾಹಿತಿ ಪಡೆದು ನಂತರ 11 ಗಂಟೆಗೆ ಬಿ.ವಿ.ವಿ ಸಂಘದ ಕಚೇರಿಗೆ ಆಗಮಿಸಿ ದಿನನಿತ್ಯದ ಕಾರ್ಯಚಟುವಟಿಗಳಲ್ಲಿ ಭಾಗವಸಿದ್ದರು. ಮೇಟಿ ಸಹ ಸ್ವ ಗ್ರಾಮವಾದ ತಿಮ್ಮಾಪುರದಲ್ಲಿ ಎಂದಿನಂತೆ ಜನರ ಜೊತೆಯಲ್ಲಿ ಕಾಲ ಕಳೆದರು.
ಸಮರ್ಥ ಬೆಳಗ್ಗೆಯೇ ಎಂದಿನಂತೆ ಪತ್ರಿಕೆಗಳ ಮೇಲೆ ಕಣ್ಣಾಡಿಸಿ, ದೇವಸ್ಥಾನಗಳಿಗೆ ತೆರಳಿದರು. ಮುಖಂಡರು, ಕಾರ್ಯಕರ್ತರೊಂದಿಗೆ ಚುನಾವಣೆ ಬಗ್ಗೆ ಮಾಹಿತಿ ಪಡೆದರು.
ಮತ್ತೊಂದು ಕಡೆ ಶ್ರೀನಿವಾಸ ಅವರು ಬೆಳಗ್ಗೆ ಸ್ನೇಹಿತರು, ಬೆಂಬಲಿಗರು, ಹಿತೈಷಿಗಳೊಂದಿಗೆ ಹಳೆ ಬಸ್ ನಿಲ್ದಾಣ ಸಮೀಪದ ಕಾಫಿ ಬಾರ್ ಬಳಿ ಬಂದು, ‘ಕನ್ನಡಪ್ರಭ’ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಮತದಾನ ಕುರಿತಂತೆ ಸುದ್ದಿಗಳನ್ನು ವೀಕ್ಷಿಸಿದರು.
ಮತ ಹಾಕಿದವರು, ಬೆಂಬಲಿಸಿದವರಿಗೆ ಧನ್ಯವಾದ ತಿಳಿಸಿದ ಶ್ರೀನಿವಾಸ ಮಧ್ಯಾಹ್ನ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಏ.11ರಂದು ಮಂತ್ರಾಲಯಕ್ಕೆ ತೆರಳಿ, ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುವುದಾಗಿ ಶ್ರೀನಿವಾಸ ಹೇಳಿದರು.
ಎಸ್‌ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಸಹ ಕ್ಷೇತ್ರದ ಅಲ್ಪಸಂಖ್ಯಾತರ ಪ್ರದೇಶದಲ್ಲಿ ತಮಗೆ ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಇತರೆ ಅಭ್ಯರ್ಥಿಗಳು ಸಹ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು.

