ವಿಧಾನಸೌಧ(ಮಾ.25): ಪ್ರತಿಪಕ್ಷಗಳಾದ ಕಾಂಗ್ರೆಸ್‌ನ ಬಹಿಷ್ಕಾರ ಹಾಗೂ ಜೆಡಿಎಸ್‌ನ ಸಭಾತ್ಯಾಗದ ನಡುವೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಡಿಸಿದ್ದ 2.44 ಲಕ್ಷ ಕೋಟಿ ರು. ಬಜೆಟ್‌ಗೆ ವಿಧಾನಮಂಡಲದ ಉಭಯ ಸದನಗಳು ಒಪ್ಪಿಗೆ ನೀಡಿವೆ.

ಇದೇ ತಿಂಗಳ 5ರಂದು ಬಜೆಟ್‌ ಮಂಡಿಸಿದ್ದ ಯಡಿಯೂರಪ್ಪ ಅವರು ಕೊರೋನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಅಧಿವೇಶನ ಮೊಟಕುಗೊಳಿಸುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಮಂಗಳವಾರವೇ ಧನವಿನಿಯೋಗ ವಿಧೇಯಕ ಮಂಡಿಸಿ ಅಂಗೀಕಾರ ಪಡೆದುಕೊಂಡರು.

2020-21ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವು ಖರ್ಚುಗಳನ್ನು ವಹಿಸುವುದಕ್ಕಾಗಿ ರಾಜ್ಯದ ಸಂಚಿತ ನಿಧಿಯೊಳಗಿನಿಂದ ವಿನಿಯೋಗಿಸುವ ಸಂಬಂಧ ವಿಧೇಯಕ ಮಂಡಿಸಿ ಅಂಗೀಕರಿಸಲಾಯಿತು. ಇದೇ ವೇಳೆ 2019-20ನೇ ಸಾಲಿನ ಪೂರಕ ಅಂದಾಜು 11,803.72 ಕೋಟಿ ರು.ನ ಧನವಿನಿಯೋಗ ವಿಧೇಯಕಕ್ಕೂ ಅನುಮೋದನೆ ಪಡೆದುಕೊಳ್ಳಲಾಯಿತು.

ಸೋಮವಾರ ನಡೆದ ಕಲಾಪ ಸಲಹಾ ಸಮಿತಿಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ ಪೂರ್ಣ ಪ್ರಮಾಣದ ಬಜೆಟ್‌ಗೆ ಅಂಗೀಕಾರ ಪಡೆದುಕೊಳ್ಳದೆ ಮೂರು ತಿಂಗಳ ಲೇಖಾನುದಾನ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿತ್ತು. ಆದರೆ, ಇದಕ್ಕೆ ಸರ್ಕಾರ ಒಪ್ಪಲಿಲ್ಲ. ಹೀಗಾಗಿ ಮಂಗಳವಾರ ಕಾಂಗ್ರೆಸ್‌ ಹಾಜರಾಗದೆ ಸದನವನ್ನು ಬಹಿಷ್ಕರಿಸಿತು. ಇನ್ನು, ಜೆಡಿಎಸ್‌ ಸದಸ್ಯರು ಸದನಕ್ಕೆ ಹಾಜರಾಗಿದ್ದರು. ಆದರೆ, ಅಪೆಕ್ಸ್‌ ಬ್ಯಾಂಕ್‌ ಅವ್ಯವಹಾರದ ಬಗ್ಗೆ ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿಗಳ ಉತ್ತರದ ಬಳಿಕ ಪ್ರಸ್ತಾಪಿಸಲು ಅವಕಾಶ ನೀಡುವುದಾಗಿ ಸರ್ಕಾರ ಹೇಳಿತು. ಇದಕ್ಕೆ ಒಪ್ಪದ ಜೆಡಿಎಸ್‌ ಸದಸ್ಯರು ಸಭಾತ್ಯಾಗ ನಡೆಸಿದರು. ಕಾಂಗ್ರೆಸ್‌ನ ಬಹಿಷ್ಕಾರ, ಜೆಡಿಎಸ್‌ನ ಸಭಾತ್ಯಾಗದ ನಡುವೆ ಪೂರ್ಣಪ್ರಮಾಣದ ಬಜೆಟ್‌ಗೆ ಅಂಗೀಕಾರ ಪಡೆದುಕೊಳ್ಳಲಾಯಿತು.

ವಿಧೇಯಕ ಅಂಗೀಕಾರಕ್ಕೂ ಮುನ್ನ ವಿಧಾನಮಂಡಲದ ಉಭಯ ಸದನಗಳಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಕೃಷಿ ಮತ್ತು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆರ್ಥಿಕ ಇತಿಮಿತಿಯಲ್ಲಿಯೂ ನೀರಾವರಿಗೆ 21,308 ಕೋಟಿ ರು. ಬಜೆಟ್‌ನಲ್ಲಿ ಒದಗಿಸಲಾಗಿದೆ. ಅಲ್ಲದೇ, ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನಕ್ಕಾಗಿ ಅದರಲ್ಲಿಯೂ ವಿಶೇಷವಾಗಿ 21 ಗ್ರಾಮಗಳ ಪುನರ್‌ವಸತಿ ಕಾರ್ಯ ಕೈಗೊಳ್ಳಲು 10 ಸಾವಿರ ಕೋಟಿ ಮೀಸಲಿಡಲಾಗಿದೆ. ಮಹದಾಯಿ ಯೋಜನೆ ಅನುಷ್ಠಾನಗೊಳಿಸಲು 2020-21ನೇ ಸಾಲಿನಲ್ಲಿ 500 ಕೋಟಿ ರು. ಒದಗಿಸಲಾಗಿದೆ. ಎತ್ತಿನಹೊಳೆ ಯೋಜನೆಗಾಗಿ 1500 ಕೋಟಿ ರು. ಒದಗಿಸಲಾಗಿದೆ ಎಂದರು.

ರಾಜ್ಯದಲ್ಲಿ ಬರ ನಿರೋಧಕ ಬೆಳೆಗಳನ್ನು ಪ್ರೋತ್ಸಾಹಿಸಲು ರೈತ ಸಿರಿ ಯೋಜನೆಯನ್ನು ಘೋಷಿಸಲಾಗಿದೆ. ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಬೆಳೆಗಳನ್ನು ಬೆಳೆಯಲು ಪ್ರತಿ ಹೆಕ್ಟೇರ್‌ಗೆ 10 ಸಾವಿರ ರು.ನಂತೆ ಗರಿಷ್ಠ 20 ಸಾವಿರ ರು.ನಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಯೋಜನೆಯನ್ನು ವಿಸ್ತರಿಸಿ 2020-21ನೇ ಸಾಲಿನಲ್ಲಿ ಟೆಫ್‌, ಚಿಯಾ ಮತ್ತು ಕ್ವಿನೋವಾ ಸಿರಿಧಾನ್ಯಗಳನ್ನು ಸೇರ್ಪಡೆ ಮಾಡಲಾಗುವುದು. ಲೋಕೋಪಯೋಗಿ ಇಲಾಖೆಗೆ 8850 ಕೋಟಿ ರು. ಅನುದಾನ ಕಾಮಗಾರಿಗಳಿಗೆ ನಿಗದಿಪಡಿಸಲಾಗಿದ್ದು, 7529 ಕೋಟಿ ರು. ಪ್ರಗತಿ ಸಾಧಿಸಲಾಗಿದೆ ಎಂದರು.

ಪರಿಶಿಷ್ಟರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ಗಂಗಾ ಕಲ್ಯಾಣ ಯೋಜನೆಗೆ 2018-19ನೇ ಸಾಲಿನಲ್ಲಿ ನಿಗದಿಪಡಿಸಿದ ಗುರಿಯಡಿ ಯಾವುದೇ ಕೊಳವೆಬಾವಿಗಳನ್ನು ಕೊರೆದಿಲ್ಲ. ಆದರೆ, ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ 6167 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ 953 ಕಾರ್ಯಕ್ರಮಗಳನ್ನು ಪ್ರಸ್ತಾಪಿಸಲಾಗಿದೆ. ರಾಜ್ಯದ ಪ್ರಾದೇಶಿಕ ಅಸಮತೋಲನ ನಿವಾರಿಸಲು ಸರ್ಕಾರ ಬದ್ಧವಾಗಿದೆ. ರಾಜ್ಯದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ 3060 ಕೋಟಿ ರು. ಒದಗಿಸಲಾಗಿದೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.

ಕೇಂದ್ರದ ಅನುದಾನ ಕಡಿತ: ಸಿದ್ದುಗೆ ಬಿಎಸ್‌ವೈ ತಿರುಗೇಟು

ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಕಡಿತವಾಗಿರುವ 11,887 ಕೋಟಿ ರು. ಪಡೆಯುವುದು ಮತ್ತು 5,495 ಕೋಟಿ ರು. ವಿಶೇಷ ಅನುದಾನ ಪಡೆಯುವ ವಿಚಾರ ಸಂಬಂಧ ಕೇಂದ್ರ ಹಣಕಾಸು ಸಚಿವರ ಜತೆ ಸಮಾಲೋಚನೆ ನಡೆಸಿದ್ದು, ರಾಜ್ಯಕ್ಕೆ ನ್ಯಾಯ ಒದಗಿಸುವ ಆಶ್ವಾಸನೆ ನೀಡಿದ್ದಾರೆ ಎಂದು ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

15ನೇ ಹಣಕಾಸು ಆಯೋಗದ ವರದಿಯಂತೆ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ 8,887 ಕೋಟಿ ರು., ಜಿಎಸ್‌ಟಿ ಪರಿಹಾರ 3 ಸಾವಿರ ಕೋಟಿ ರು. ಕಡಿತವಾಗಿರುವುದು ಸೇರಿದಂತೆ ಹಲವು ವಿಚಾರಗಳನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಕೇಂದ್ರವು ತೆರಿಗೆ ಹಂಚಿಕೆಯಲ್ಲಿ ಬಿಹಾರ ರಾಜ್ಯಕ್ಕೆ ಶೇ.10, ಉತ್ತರ ಪ್ರದೇಶಕ್ಕೆ ಶೇ.17ರಷ್ಟುತೆರಿಗೆ ಪಾವತಿಸಿದರೆ, ರಾಜ್ಯಕ್ಕೆ ಶೇ.4.ರಷ್ಟುಇದ್ದುದನ್ನು ಶೇ.3.64ರಷ್ಟುಇಳಿಕೆ ಮತ್ತು 5,495 ಕೋಟಿ ರು. ವಿಶೇಷ ಅನುದಾನ ಕಡಿತಗೊಳಿಸಿರುವ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಾಸ್ತವವಾಗಿ 15ನೇ ಹಣಕಾಸು ಆಯೋಗ ರಾಜ್ಯಗಳಿಗೆ ತೆರಿಗೆ ಆದಾಯವನ್ನು ಹಂಚಿಕೆ ಮಾಡಲು ಮಾಡಿಕೊಂಡ ಹೊಸ ನಿಯಮಗಳೇ ಕಾರಣವಾಗಿದೆ. ಕೇಂದ್ರ ಹಣಕಾಸು ಸಚಿವರು ರಾಜ್ಯದ ಪರವಾಗಿದ್ದು, ನ್ಯಾಯ ಒದಗಿಸುವ ಆಶ್ವಾಸನೆ ನೀಡಿದ್ದಾರೆ. ಅದಷ್ಟುಬೇಗ ರಾಜ್ಯದ ಹಣವು ಬಿಡುಗಡೆಯಾಗುವ ವಿಶ್ವಾಸ ಇದೆ ಎಂದು ಹೇಳಿದರು.