ವಿಜಯಪುರದ್ದು ಐತಿಹಾಸಿಕ ಗೆಲುವು, ಬಿಜೆಪಿ ಪರ ಜನರು ಒಲವು ತೋರುತ್ತಿರುವ ಧ್ಯೋತಕ: ನಿರ್ಮಲ್ ಕುಮಾರ್ ಸುರಾನ
ಬೆಂಗಳೂರು(ನ.01): ವಿಜಯಪುರ ಮತ್ತು ಕೊಳ್ಳೇಗಾಲದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಮತ್ತು ಕಲಬುರಗಿಯಲ್ಲಿ ನಡೆದ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶದಲ್ಲಿ ಭಾಗವಹಿಸಿದ್ದ ಜನರ ಸಂಖ್ಯೆ ಕಾಂಗ್ರೆಸ್ಸಿನ ಭಾರತ್ ಜೋಡೋ ಯಾತ್ರೆಗೆ ತಕ್ಕ ಉತ್ತರ ಕೊಟ್ಟಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಹೇಳಿದ್ದಾರೆ. ಸೋಮವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸಾಧಿಸಿದ ಗೆಲುವು ಪಕ್ಷದ ಪರ ಜನರು ತೋರಿಸುತ್ತಿರುವ ಒಲವನ್ನು ವ್ಯಕ್ತಪಡಿಸಿದೆ ಎಂದು ಅಭಿಪ್ರಾಯಪಟ್ಟರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಜಯಪುರ ನಗರ ಪಾಲಿಕೆ ಫಲಿತಾಂಶ ಹೊರಬಿದ್ದಿದೆ. ವಿಜಯಪುರ ಪಾಲಿಕೆಯಲ್ಲಿ ಬಿಜೆಪಿ ಗೆಲ್ಲುವುದು ಕಷ್ಟಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ ಪಕ್ಷ ಸುಲಭವಾಗಿ ಗೆದ್ದಿದೆ. ಆ ಪಾಲಿಕೆಯ ಒಟ್ಟು 35 ಸೀಟುಗಳಲ್ಲಿ 17 ಸೀಟನ್ನು ಬಿಜೆಪಿ ಗೆದ್ದಿದೆ. ಇಲ್ಲಿ ಯಾವತ್ತೂ ಬಿಜೆಪಿ ಗೆದ್ದಿರಲಿಲ್ಲ. ಇದೊಂದು ಐತಿಹಾಸಿಕ ಗೆಲುವು ಎಂದು ಹರ್ಷ ವ್ಯಕ್ತಪಡಿಸಿದರು.
ಮೂರು ಕಡೆ ಬಿಜೆಪಿ ಗೆಲುವು ಖಚಿತ : ಬಹುಮತ ಕನ್ಫರ್ಮ್
ವಿಜಯಪುರದಲ್ಲಿ ಮಂಗಳವಾರ ದೊಡ್ಡ ಪ್ರಮಾಣದ ಸಂಭ್ರಮಾಚರಣೆ ನಡೆಯಲಿದೆ. ಕಾರ್ಯಕರ್ತರು ಮತ್ತು ಪ್ರಮುಖರು ಈ ಕುರಿತು ಯೋಜಿಸಿದ್ದಾರೆ. ಕೊಳ್ಳೇಗಾಲದ ನಗರಸಭೆಯ 7 ಸೀಟುಗಳಿಗೆ ಉಪ ಚುನಾವಣೆ ನಡೆದಿದ್ದು, 6 ಸೀಟುಗಳನ್ನು ಬಿಜೆಪಿ ಗೆದ್ದಿದೆ. ಇದು ಬಿಜೆಪಿ ಪರ ವಾತಾವರಣದ ಸಂಕೇತ ಎಂದು ವಿಶ್ಲೇಷಿಸಿದರು.
ಬಳ್ಳಾರಿಯಲ್ಲಿ ನ.20 ರಂದು ಎಸ್‌ಟಿ ಸಮಾವೇಶ ನಡೆಯಲಿದ್ದು, ಅಲ್ಲಿ 8ರಿಂದ 10 ಲಕ್ಷ ಜನರು ಭಾಗವಹಿಸಲಿದ್ದಾರೆ. ಕೇಂದ್ರದ ಪ್ರಮುಖ ನಾಯಕರನ್ನು ಆಹ್ವಾನಿಸಿದ್ದು, ಎರಡರಿಂದ ಮೂರು ದಿನಗಳಲ್ಲಿ ಸ್ಪಷ್ಟತೆ ಲಭಿಸಲಿದೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹಾಗೂ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಉಪಸ್ಥಿತರಿದ್ದರು.
ದೀರ್ಘ ಕಾಲದಿಂದ ಬಾಕಿ ಇದ್ದ ಮೀಸಲಾತಿ ಹೆಚ್ಚಳದ ಬಳಿಕ ಎಸ್‌ಟಿ ಸಮುದಾಯದಲ್ಲಿ ಹೆಚ್ಚಿನ ಉತ್ಸಾಹ ಇದೆ. ಪ್ರಮುಖರ ಭೇಟಿ ವೇಳೆ ಹೆಚ್ಚಿನ ಪ್ರತಿಕ್ರಿಯೆ ಮತ್ತು ಉತ್ಸಾಹವೂ ವ್ಯಕ್ತವಾಗಿದೆ ಎಂದು ವಿವರಿಸಿದರು.
