ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಮಾತು, ಸಂಕಷ್ಟಕ್ಕೆ ಸಿಲುಕಿದ ಯತ್ನಾಳ್
* ತೀವ್ರ ಸ್ವರೂಪ ಪಡೆದುಕೊಂಡ 2,500 ಕೋಟಿ ರೂ ಯತ್ನಾಳ್ ಹೇಳಿಕೆ
* ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
* ಶಿಸ್ತು ಸಮಿತಿಯಿಂದ ಅವರ ವಿವರಣೆ ಕೇಳ್ತೇವೆ ಎಂದ ಅಧ್ಯಕ್ಷರು
ತುಮಕೂರು, (ಮೇ.07): ಸಿಎಂ ಆಗಲು 2,500 ಕೋಟಿ ರೂ., ಸಚಿವರಾಗಲು 100 ಕೋಟಿ ರೂ. ಸಿದ್ಧವಿಟ್ಟುಕೊಳ್ಳಬೇಕು ಎಂಬುದಾಗಿ ದಿಲ್ಲಿಯಿಂದ ಬಂದಿದ್ದ ಕೆಲವರು ಹೇಳಿದ್ದರು' ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿಕೆ ಸರಕಾರ ಹಾಗೂ ಬಿಜೆಪಿಗೆ ತೀವ್ರ ಮುಜುಗರಕ್ಕೀಡು ಮಾಡಿದೆ. ನಾನಾ ಆರೋಪ ವಿಚಾರಗಳನ್ನಿಟ್ಟುಕೊಂಡು ಪ್ರತಿಪಕ್ಷದ ನಾಯಕರುಗಳು ಸರಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ಇನ್ನು ಈ ವಿಚಾರವಾಗಿ ತುಮಕೂರಿನಲ್ಲಿ ಇಂದು(ಶನಿವಾರ) ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ಯತ್ನಾಳ್ ಅವರು ಯಾವ ಭಾವನೆಯಿಂದ ಹೇಳಿದ್ದಾರೋ ಗೊತ್ತಿಲ್ಲ. ಶಿಸ್ತು ಸಮಿತಿಯಿಂದ ಅವರ ವಿವರಣೆ ಕೇಳ್ತೇವೆ. ಇಲ್ಲಿಯ ಮಾಹಿತಿಗಳನ್ನ ಕೇಂದ್ರದ ಶಿಸ್ತು ಸಮಿತಿಗೆ ನಾವು ಕಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
2,500 ಕೋಟಿ ರೂ ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಗ್ ಶಾಕ್!
ಕೇಂದ್ರದವರು ಶಿಸ್ತು ಸಮಿತಿ ಅವರಿಂದ ವಿವರಣೆ ಕೇಳುತ್ತಾರೆ. ಬಿಜೆಪಿಯಲ್ಲಿ ದೊಡ್ಡವರು-ಸಣ್ಣವರು ಎಂಬ ಪ್ರಶ್ನೆ ಇಲ್ಲ. ನಾಯಕತ್ವ ಎನ್ನುವಂತದ್ದು ಕಾರ್ಯಕರ್ತರ ಆಧಾರದ ಮೇಲೆ ನಿರ್ಮಾಣ ಆಗುತ್ತೆ. ಈ ಹಿಂದೆ ಎರಡು ಬಾರಿ ಯತ್ನಾಳ್ ಅವರಿಗೆ ನೋಟಿಸ್ ಕೊಡಲಾಗಿತ್ತು, ಅದಕ್ಕೆ ಅವರು ಉತ್ತರಿಸಿದ್ದಾರೆ. ಎರಡು ಬಾರಿಯೂ ಅವರದ್ದೇ ಆದ ಕಾರಣ ಕೊಟ್ಟಿದ್ದರು. ಅವರು ಒಟ್ಟು ರಾಜಕೀಯದ ವ್ಯವಸ್ಥೆ ಬಗ್ಗೆ ಹೇಳಿದ್ದಾರೆ, ಅದು ಅವರ ಭಾವನೆ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
ಯತ್ನಾಳ್ ಹೇಳಿಕೆಗೆ ನಾನು ಈ ಸಂದರ್ಭದಲ್ಲಿ ಏನು ಪ್ರತಿಕ್ರಿಯೆ ನೀಡೋದಿಕ್ಕೆ ಆಗಲ್ಲ. ರಾತ್ರಿಯಿಂದ ಅವರ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದೇವೆ, ಅವರು ಸಿಕ್ತಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ನನ್ನನ್ನು ಮುಖ್ಯಮಂತ್ರಿ ಮಾಡ್ತೇವೆ ಎಂದು 2,500 ಕೋಟಿ ರೂ. ಕೇಳಿದ್ದರು ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಹಜವಾಗಿ ರಾಜಕಾರಣದಲ್ಲಿ ಇಂಥವೆಲ್ಲಾ ಇರುತ್ತದೆ ಎಂದು ಅವರು ಹೇಳಿರಬಹುದು. ನಿರ್ದಿಷ್ಟವಾಗಿ ಇದೇ ಪಕ್ಷ ಎಂದು ಹೇಳಿರಲ್ಲ. ಪಕ್ಷದ ವಿರುದ್ಧವೇ ಅವರು ಹೇಳಿದ್ದಾದರೆ ಖಂಡಿತ ಅದು ಪಕ್ಷಕ್ಕೆ ಮುಜುಗರ ತರುವ ವಿಚಾರ. ಹಾಗೇ ಮಾತಾಡಿದ್ದರೆ ಸಂಘಟನೆ ನೇತಾರರು ಕರೆದು ಅವರನ್ನ ಮಾತಾಡಿಸ್ತಾರೆ ಎಂದು ತಿಳಿಸಿದರು.
ಕೇಂದ್ರ ಶಿಸ್ತು ಸಮಿತಿಗೆ ಮಾಹಿತಿ ರವಾನೆ
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ನೀಡಿದ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ (BJP) ರಾಜ್ಯ ಸಮಿತಿ ಶಿಫಾರಸು ಮಾಡಿದೆ. ಯತ್ನಾಳ್ ಹೇಳಿಕೆ ಬಗ್ಗೆ ಕೇಂದ್ರ ಶಿಸ್ತು ಸಮಿತಿಗೆ ಮಾಹಿತಿ ರವಾನೆ ಮಾಡಲಾಗಿದೆ. ಹಲವು ಬಾರಿ ಮುಜುಗರದ ಹೇಳಿಕೆ ನೀಡಿರುವ ಬಗ್ಗೆ ವರದಿ ನೀಡಲಾಗಿದೆ.
ರಾಜ್ಯ ಸಮಿತಿ, ಯತ್ನಾಳ್ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದೆ. ಆಕ್ಷೇಪಾರ್ಹ ಹೇಳಿಕೆ ಬಗ್ಗೆ ವಿವರಣೆ ಪಡೆಯಲು ಸಮಿತಿ ಯತ್ನಿಸಿದೆ. ಆದರೆ ಶಾಸಕರು ದೂರವಾಣಿ ಕರೆಯನ್ನು ಸ್ವೀಕರಿಸಿಲ್ಲ. ಇಂದು (ಮೇ 7) ಸಂಜೆ ವೇಳೆಗೆ ಕೇಂದ್ರ ಶಿಸ್ತು ಸಮಿತಿ ಕ್ರಮದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.