ಉಚಿತ ಅಕ್ಕಿ ಕೊಡದೆ ಜಾರಿಕೊಳ್ಳಲು ಸಿಎಂ ಸಿದ್ದು ಯತ್ನ: ಸಿ.ಟಿ.ರವಿ, ಸುನೀಲ್, ವಿಜಯೇಂದ್ರ ತಿರುಗೇಟು
ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಷಡ್ಯಂತ್ರ ನಡೆಸುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ರಾಜ್ಯ ಬಿಜೆಪಿ ನಾಯಕರು ತಿರುಗೇಟು ನೀಡಿದ್ದು, ತಮ್ಮ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಬೆಂಗಳೂರು (ಜೂ.15): ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಷಡ್ಯಂತ್ರ ನಡೆಸುತ್ತಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ರಾಜ್ಯ ಬಿಜೆಪಿ ನಾಯಕರು ತಿರುಗೇಟು ನೀಡಿದ್ದು, ತಮ್ಮ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. ನುಡಿದಂತೆ ನಡೆಯುತ್ತೇವೆ ಎಂದು ಪುಕ್ಕಟೆ ಪ್ರಚಾರ ತೆಗೆದುಕೊಂಡು ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುವಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಜಾರಿಕೊಳ್ಳುವ ಪ್ರಯತ್ನ ನಡೆಸುತ್ತೀರಾ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ.
ನೀವು ಮತ ರಾಜಕಾರಣಕ್ಕಾಗಿ ಪ್ರಣಾಳಿಕೆ ಸಿದ್ಧಪಡಿಸುವಾಗ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಿದ್ದೀರಾ? ಈ ಹಿಂದೆ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಕೊಟ್ಟಅಕ್ಕಿಯನ್ನೇ ನಾನು ಉಚಿತವಾಗಿ ಕೊಟ್ಟೆಎಂದು ಡೋಂಗಿ ಹೊಡೆದವರು ನೀವಲ್ಲವೇ. ಪ್ರತಿಯೊಬ್ಬರಿಗೂ ಹತ್ತು ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಕೊಟ್ಟ ಭರವಸೆ ಈಡೇರಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಈ ಹೊರೆಯಿಂದ ತಪ್ಪಿಸಿಕೊಳ್ಳಲು ಈಗ ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎಂದು ಸಬೂಬು ಹೇಳುತ್ತಿದ್ದೀರಿ. ಕೇಂದ್ರ ಸರ್ಕಾರ ಕೊಡುತ್ತಿದ್ದ ಐದು ಕೆ.ಜಿ. ಅಕ್ಕಿ ಪೂರೈಕೆಯನ್ನು ಈವರೆಗೆ ನಿಲ್ಲಿಸಿಲ್ಲ. ಹೆಚ್ಚುವರಿ ಐದು ಕೆ.ಜಿ. ಅಕ್ಕಿ ಕೊಡುತ್ತೇನೆಂದು ಹೇಳಿದ್ದು ನಿಮ್ಮ ವಾಗ್ದಾನ. ಅದರಂತೆ ನಡೆದುಕೊಳ್ಳಿ. ಅದನ್ನು ಬಿಟ್ಟು ಅಂಗಳ ಡೊಂಕು ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಕೀಳು ರಾಜಕಾರಣ ನಿಲ್ಲಿಸಿ ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಸಭೆಯಲ್ಲಿ ಸುರ್ಜೇವಾಲ ಪಾಲ್ಗೊಂಡಿದ್ದರಲ್ಲಿ ತಪ್ಪೇನಿಲ್ಲ: ಸಚಿವ ಚಲುವರಾಯಸ್ವಾಮಿ
ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಕೇಂದ್ರವನ್ನು ದೂಷಿಸುವ ಕೆಟ್ಟಚಾಳಿ ನಿಮಗೆ ಹೊಸದಲ್ಲ. ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಪ್ರಧಾನಿ ಗರೀಬ್ ಕಲ್ಯಾಣ ಯೋಜನೆ ಮೂಲಕ ಬಡವರ ಹಸಿವು ನೀಗಿಸಿದ್ದು, ಇದೇ ಕೇಂದ್ರ ಸರ್ಕಾರ ಎಂಬುದನ್ನು ಮರೆಯಬೇಡಿ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
ಜನ ಮುಗ್ಧರಲ್ಲ- ವಿಜಯೇಂದ್ರ: ‘ಹಿಂದೆಯೂ ನಿಮ್ಮ ಆಡಳಿತ ಅವಧಿಯಲ್ಲಿ ಕೇಂದ್ರದಿಂದ ಅಕ್ಕಿ ತರಿಸಿಕೊಂಡು ಅನ್ನರಾಮಯ್ಯ ಎಂದು ಕರೆಸಿಕೊಂಡಿರಿ. ಅಪ್ಪಿತಪ್ಪಿಯೂ ಕೇಂದ್ರ ಸರ್ಕಾರದ ಕೊಡುಗೆ ಕುರಿತು ಎಲ್ಲೂ ಉಲ್ಲೇಖಿಸುವ ಔದಾರ್ಯ ತೋರಲೇ ಇಲ್ಲ. ಇದೀಗ ಅಕ್ಕಿ ಯೋಜನೆ ಜಾರಿಗೆ ತರುವಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿರುವ ನಿಮ್ಮ ಸರ್ಕಾರದ ವೈಫಲ್ಯ ಅನಾವರಣಗೊಳ್ಳುವ ಆತಂಕದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವ ನಿಮ್ಮ ದಿಕ್ಕು ತಪ್ಪಿಸುವ ತಂತ್ರ ಅರ್ಥ ಮಾಡಿಕೊಳ್ಳದೇ ಇರುವಷ್ಟುನಮ್ಮ ಜನ ಮುಗ್ಧರಲ್ಲ’ ಎಂದು ಶಾಸಕ ಹಾಗೂ ಬಿಜೆಪಿ ಉಪ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಿದ್ದರಾಮಯ್ಯ ಅವರ ಹೇಳಿಕೆಗೆ ಟ್ವೀಟ್ ಮೂಲಕ ಲೇವಡಿ ಮಾಡಿದ್ದಾರೆ.
ಅಕ್ಕಿ ಕೊಡುತ್ತಿರುವುದು ಮೋದಿ ಸರ್ಕಾರ- ರವಿ: ‘ರಾಜ್ಯದ ಪ್ರತಿಯೊಬ್ಬ ಬಡವರಿಗೂ ಪ್ರತಿ ತಿಂಗಳು ಐದು ಕೆ.ಜಿ. ಅಕ್ಕಿ ಕೊಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಸಿದ್ದರಾಮಯ್ಯ ಅವರೇ ನಿಮ್ಮ ಪ್ರಣಾಳಿಕೆ ಪ್ರಕಾರ ನೀವು ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ ನೀಡಿ. ಅಕ್ಕಿ ಹೊಂದಿಸಲು ಸಾಧ್ಯವಾಗದಿದ್ದರೆ ಅಲ್ಲಿವರೆಗೆ ಹತ್ತು ಕೆ.ಜಿ. ಅಕ್ಕಿಯ ಮಾರುಕಟ್ಟೆದರವನ್ನು ಪ್ರತಿಯೊಬ್ಬ ಬಡವರ ಖಾತೆಗೆ ಹಾಕಿ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಿ: ಸಚಿವ ಸತೀಶ್ ಜಾರಕಿಹೊಳಿ
ಉಚಿತ ಅಕ್ಕಿ ನೀಡುವುದಾಗಿ ಪ್ರಚಾರ ಪಡೆದಿರಿ. ಪ್ರಣಾಳಿಕೆ ಸಿದ್ಧಪಡಿಸುವಾಗ ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಿದ್ದಿರಾ?
-ಸುನೀಲ್ ಕುಮಾರ್ ಮಾಜಿ ಸಚಿವ
ಪ್ರಣಾಳಿಕೆ ಪ್ರಕಾರ 10 ಕೆ.ಜಿ. ಅಕ್ಕಿ ನೀಡಿ. ಹೊಂದಿಸಲು ಸಾಧ್ಯವಾಗದಿದ್ದರೆ 10 ಕೆ.ಜಿ. ಅಕ್ಕಿಯ ದರವನ್ನು ಬಡವರ ಖಾತೆಗೆ ಹಾಕಿ.
-ಸಿ.ಟಿ.ರವಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ