Karnataka Politics: 'ಸಿದ್ದರಾಮಯ್ಯ ಮೌನ ತುಂಬಾ ಅಪಾಯಕಾರಿ, ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಿ'
* ರಾಜ್ಯದಲ್ಲಿ ರಂಗೇರಿದ ವಿಧಾನಪರಿಷತ್ ಚುನಾವಣೆ
* ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಎಚ್ಚರಿಕೆ ಕೊಟ್ಟ ಬಿಜೆಪಿ
* ಸರಣಿ ಟ್ವೀಟ್ ಮೂಲಕ ಡಿಕೆಶಿಗೆ ಸಿದ್ದರಾಮಯ್ಯ ಮೌನ ಬಗ್ಗೆ ತಿಳಿಸಿದ ಬಿಜೆಪಿ
ಬೆಂಗಳೂರು, (ನ.24) : ರಾಜ್ಯದಲ್ಲಿ 25 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆಗೆ(Karnataka Legislative Council polls) ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ (JDS)ಅಭ್ಯರ್ಥಿಗಳು ನಾಮಪತ್ರ (Nomination) ಸಲ್ಲಿಸಿದ್ದು, ಪರಿಷತ್ ಚುನಾವಣೆ ರಂಗೇರಿದೆ. ಇದರ ಮಧ್ಯೆ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಚ್ಚರಿಕೆಯ ಟ್ವೀಟ್ ಮಾಡಿದೆ.
ಹೌದು.. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರೇ, ಸಿದ್ದರಾಮಯ್ಯ (Siddaramaiah) ಅವರ ಮೌನ ತುಂಬಾ ಅಪಾಯಕಾರಿ ಎಂದು ಬಿಜೆಪಿ ಎಚ್ಚರಿಸಿದೆ.
MLC Election: ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ಕುಟುಂಬ ಕಲ್ಯಾಣ
ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ(BJP), ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಒಳಜಗಳ ಬಯಲಾಗಿದೆ. ಅಭ್ಯರ್ಥಿ ಆಯ್ಕೆ, ಪ್ರಚಾರ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳಿಂದಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೂರ ಉಳಿದಿದ್ದಾರೆ ಎಂದಿದೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ಕಾಂಗ್ರೆಸ್ ಪಕ್ಷದ ಎರಡು ಕಣ್ಣು ಇದ್ದಂತೆ ಎಂದು ಪರಮೇಶ್ವರ್ ಅವರು ಇತ್ತೀಚೆಗೆ ಬಣ್ಣಿಸಿದ್ದರು. ಆದರೆ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆಯ ವೇಳೆ ಈ ಎರಡು ಕಣ್ಣುಗಳ ದೃಷ್ಟಿ ಸಾಮರ್ಥ್ಯ ಬಯಲಾಗಿದೆ. ಡಿಕೆಶಿ ನೀಡಿದ ಪಟ್ಟಿಯ ಬಗ್ಗೆ ಸಿದ್ದರಾಮಯ್ಯ ದಿವ್ಯ ಮೌನ ತಳೆದಿರುವುದೇಕೆ? ಎಂದು ಬಿಜೆಪಿ ಪ್ರಶ್ನಿಸಿದೆ.
ಪದಾಧಿಕಾರಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲೂ ಡಿಕೆಶಿ ಹಾಗೂ ಸಿದ್ದರಾಮಯ್ಯ ಮಧ್ಯೆ ಯುದ್ಧ ನಡೆಯುತ್ತಿದೆ. ಆದರೆ ಪರಿಷತ್ ಚುನಾವಣೆ ವಿಚಾರದಲ್ಲಿ ಬೇಸರಗೊಂಡಿರುವ ಸಿದ್ದರಾಮಯ್ಯ ಅವರೀಗ ಬೇರೆಯದೇ ಲೆಕ್ಕಾಚಾರದಲ್ಲಿ ತೊಡಗಿದಂತೆ ಕಾಣುತ್ತಿದೆ. ಸಿದ್ದರಾಮಯ್ಯನವರೇ, ನಿಮ್ಮ ಮೌನವು ಬೇರೇನೋ ಸೂಚಿಸುತ್ತಿರುವುದು ನಿಜವಲ್ಲವೇ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ಸಿದ್ದರಾಮಯ್ಯ ಅವರ ಮೌನ ತುಂಬಾ ಅಪಾಯಕಾರಿ. ಮುನಿಸಿಕೊಂಡಾಗಲೆಲ್ಲ ಪ್ರಕೃತಿ ಚಿಕಿತ್ಸೆಗೆ ತೆರಳುತ್ತಾರೆ. ಅಲ್ಲಿಂದ ಪ್ರಯೋಗಿಸುವ ರಾಜಕೀಯ ದಾಳ ಯಾರ್ಯಾರ ಬುಡ ಅಲ್ಲಾಡಿಸಿದೆ ಎಂಬುದು ನಿಮಗೆ ನೆನಪಿರಬಹುದಲ್ಲವೇ? ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಿ ಎಂದು ಬಿಜೆಪಿ ಕುಟುಕಿದೆ.
ಚುನಾವಣೆ ದಿನಾಂಕ
ರಾಜ್ಯ ಮೇಲ್ಮನೆಯ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಿಲಿದೆ.
ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ನವೆಂಬರ್ 26 ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ. ಡಿಸೆಂಬರ್ 10 ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಕೋಲಾರ, ಕೊಡಗು ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳಿಂದ ಚುನಾವಣೆ ನಡೆಯಲಿದೆ.