Asianet Suvarna News Asianet Suvarna News

ತೇರದಾಳ ಟಿಕೆಟ್ ಫೈಟ್, ಉಮಾಶ್ರೀ ವಿರುದ್ದ ಅಸಮಾಧಾನ ಸ್ಫೋಟ

ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಏಳೆಂಟು ತಿಂಗಳು ಬಾಕಿ ಇರುವಾಗಲೇ  ಟಿಕೆಟ್‌ಗಾಗಿ ಪೈಪೋಟಿ ಶುರುವಾಗಿದೆ. ಅದರಲ್ಲೂ ತೇರದಾಳ ಕ್ಷೇತ್ರದಲ್ಲೂ ಟಿಕೆಟ್ ಫೈಟ್ ಜೋರಾಗಿದೆ.

Karnataka Assembly Poll 2023 Terdal Ticket Fight In Congress rbj
Author
Bengaluru, First Published Jul 30, 2022, 8:33 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ ಏಷ್ಯಾನೆಟ್ ​ ಸುವರ್ಣನ್ಯೂಸ್, ಬಾಗಲಕೋಟೆ.


ಬಾಗಲಕೋಟೆ, (ಜುಲೈ.30):  
ರಾಜ್ಯದಲ್ಲಿ ಇನ್ನೇನು ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಯಾ ಕ್ಷೇತ್ರಗಳಲ್ಲಿ ಟಿಕೆಟ್​ ಲಾಬಿ ಶುರುವಾಗಿವೆ. ಇನ್ನು ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್​ ಪಾಳೆಯದಲ್ಲಿ ಪೈಪೋಟಿ ನಡೆದಿದೆ. ಮಾಜಿ ಸಚಿವೆ ಉಮಾಶ್ರೀ ವಿರುದ್ದ ಬಹಿರಂಗವಾಗಿಯೇ ಸ್ಥಳೀಯ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿ ಪಕ್ಷದಲ್ಲಿ ಅಸಮಾಧಾನ ಸ್ಪೋಟಗೊಳ್ಳುವಂತೆ ಮಾಡಿದ್ದಾರೆ. 

ಹೌದು, ಬಾಗಲಕೋಟೆ ಜಿಲ್ಲೆಯ ಏಳು ವಿಧಾನ ಸಭಾ ಮತಕ್ಷೇತ್ರದ ಪೈಕಿ ತೇರದಾಳ ಮತಕ್ಷೇತ್ರ ಕೂಡ ಒಂದಾಗಿದ್ದು, ನೇಕಾರರೇ ಹೆಚ್ಚಿರೋ ಈ ಮತಕ್ಷೇತ್ರದಲ್ಲಿ ಉಮಾಶ್ರೀ ಸ್ಪರ್ಧೆ ಮಾಡಿ ಗೆಲ್ಲುವ ಮೂಲಕ ಸಚಿವೆ ಆಗಿದ್ದರು. ಈ ಮಧ್ಯೆ 2023ರ ವಿಧಾನ ಸಭಾ ಚುನಾವಣೆಗೂ ಸಹ ಉಮಾಶ್ರೀ ಮತ್ತೊಮ್ಮೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇವರೊಂದಿಗೆ ತೇರದಾಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಸಹ ಕ್ಷೇತ್ರದಲ್ಲಿ ಸಮಾಜ ಸೇವೆ ಕಾರ್ಯ ಚಟುವಟಿಕೆ ಕೈಗೊಳ್ಳುವ ಮೂಲಕ ಹೈಕಮಾಂಡ್​ಗೆ ತಾವು ಸಹ ಕಾಂಗ್ರೆಸ್​ ಪಕ್ಷದ ಆಕಾಂಕ್ಷಿಗಳು ಎಂಬ ಸಂದೇಶ ರವಾನಿಸುತ್ತಲೇ ಇದ್ದರು. ಆದರೆ ಯಾರೂ ಸಹ ಬಹಿರಂಗವಾಗಿ ಹೇಳಿಕೆ ನೀಡಿರಲಿಲ್ಲ. ಆದರೆ ಇದೀಗ ಮಾಜಿ ಸಚಿವೆ ಉಮಾಶ್ರೀ ವಿರುದ್ದ ಸ್ಥಳೀಯ ನಾಯಕರು ತಿರುಗಿ ಬಿದ್ದಿದ್ದಾರೆ.

ಬಾಗಲಕೋಟೆ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಮಾಶ್ರೀ ವಿರುದ್ದ ಅಸಮಾಧಾನ ಸ್ಪೋಟ..
Karnataka Assembly Poll 2023 Terdal Ticket Fight In Congress rbj
ತೇರದಾಳ ಮತಕ್ಷೇತ್ರದಲ್ಲಿ ಶಾಸಕಿಯಾಗಿ, ಸಚಿವೆಯಾಗಿ ಕೆಲ್ಸ ಮಾಡಿದ್ದ ಉಮಾಶ್ರೀ ವಿರುದ್ದ ಇದೀಗ ಸ್ಥಳೀಯ ಕೈ ನಾಯಕರು ಸಭೆಯನ್ನ ನಡೆಸುವ ಮೂಲಕ ಟಿಕೆಟ್​ಗಾಗಿ ಇದ್ದ ಭಿನ್ನಮತ ಸ್ಪೋಟಗೊಂಡಂತಾಗಿದೆ. ಕ್ಷೇತ್ರದ ಮಹಾಲಿಂಗಪೂರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸ್ಥಳೀಯ ಕೈ ನಾಯಕರು ದಿಢೀರ್ ಸಭೆ ಕರೆದಿದ್ದರು. ಇದರಲ್ಲಿ ತೇರದಾಳ ಮತಕ್ಷೇತ್ರದಿಂದ ಕೈ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಡಾ.ಪದ್ಮಜೀತ್ ನಾಡಗೌಡ, ಸಿದ್ದು ಕೊಣ್ಣೂರ, ಡಾ. ಬೆಳಗಲಿ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಅಲ್ಲದೆ ಈ ಸಭೆಯಲ್ಲಿ ತಾವು ಸಹ ಟಿಕೆಟ್ ಆಕಾಂಕ್ಷಿಗಳಾಗಿ ಸಮಾನ ಮನಸ್ಕರರೊಂದಿಗೆ ಸಭೆ ಸೇರಿದ ಉದ್ದೇಶ ತಿಳಿಸಿದ ಅವರು, ಯಾವುದೇ ಕಾರಣಕ್ಕೂ ಕ್ಷೇತ್ರದಿಂದ ಹೊರಗಿನಿಂದ ಬಂದವರಿಗೆ ಈ ಬಾರಿ ಕಾಂಗ್ರೆಸ್​ ಪಕ್ಷ ಟಿಕೆಟ್ ಕೊಡೋದು ಬೇಡ ಎಂಬ ಸಂದೇಶವನ್ನ ಹೊತ್ತು ಬಂದಿದ್ದರು. 

 ಲೋಕಲ್​ ಕ್ಯಾಂಡಿಡೇಟ್​ ಗೆ ಟಿಕೆಟ್‌...
ಇನ್ನು ತೆರೆಮರೆಯಲ್ಲಿ ಟಿಕೆಟ್​ಗಾಗಿ ಇನ್ನಿಲ್ಲದ ಕಸರತ್ತು ನಡೆಸಲು ಮುಂದಾಗಿದ್ದವರೆಲ್ಲಾ ಒಂದೇ ಸಭೆಯಲ್ಲಿ ಭಾಗವಹಿಸಿದ್ದರು. ಇವರ ಉದ್ದೇಶ ಒಂದೇಯಾಗಿತ್ತು, ಈ ಬಾರಿ ತೇರದಾಳ ಮತಕ್ಷೇತ್ರದ ಕೈ ಟಿಕೆಟ್​ ಲೋಕಲ್ ಕ್ಯಾಂಡಿಡೇಟ್​ಗೆ ಸಿಗಬೇಕೆನ್ನೋದೇ ಆಗಿತ್ತು. ಈ ಮೊದಲು ಕ್ಷೇತ್ರದ ಹೊರಗಿನಿಂದ ಬಂದ ಉಮಾಶ್ರೀ ಅವರಿಗೆ ನೀಡಲಾಗಿತ್ತು. ಆದರೆ ಅವರಿಂದ ಸ್ಥಳೀಯ ನಾಯಕರ ಕಡೆಗಣಿಸಲಾಯಿತು, ಸಮರ್ಪಕವಾಗಿ ಸ್ಥಳೀಯರಿಗೆ ಸ್ಪಂದಿಸಲಿಲ್ಲ, ಪ್ರಮುಖ ಘಟನಾವಳಿಗಳು ನಡೆದಾಗ ಉಮಾಶ್ರೀ ಬೆಂಗಳೂರಿನಲ್ಲಿ ಇರುತ್ತಿದ್ದರು.

 ಹೀಗಾಗಿ ಸ್ಥಳೀಯವಾಗಿದ್ದ ಕೈ ಪಕ್ಷದ ನಾಯಕರಾದ ನಮಗೆ ಕೆಲವು ಬಾರಿ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಈ ಬಾರಿ ಅಂತಹ ತೊಂದರೆಯಾಗಬಾರದು, ಏನೇ ಆದರೂ ಕ್ಷೇತ್ರದಲ್ಲಿಯೇ ಇರುವ ಅಭ್ಯರ್ಥಿಗೆ ಈ ಬಾರಿ ಪಕ್ಷ ಟಿಕೆಟ್ ನೀಡುವಂತಾಗಬೇಕು, ನಾಲ್ಕೈದು ಜನ ನಾವು ಆಕಾಂಕ್ಷಿಗಳಿದ್ದರೂ ಸಹ ಯಾರಿಗೆ ಕಾಂಗ್ರೆಸ್​ ಪಕ್ಷ ಟಿಕೆಟ್​ ನೀಡಿದರೂ ನಾವು ಒಗ್ಗಟ್ಟಿನಿಂದ ಕೆಲ್ಸ ಮಾಡುತ್ತೇವೆ ಎಂದು ಸ್ಥಳೀಯ ಕೈ ಪಕ್ಷದ ಟಿಕೆಟ್ ಆಕಾಂಕ್ಷಿ ಡಾ.ಪದ್ಮಜೀತ್ ನಾಡಗೌಡ, ಸಿದ್ದು ಕೊಣ್ಣೂರ ಹೇಳಿದರು. 

ಉಮಾಶ್ರೀಗೆ ಬೆಂಬಲ ಇಲ್ಲ ಎಂದ ಕೈ ನಾಯಕರು..
ಇತ್ತ ರಾಜ್ಯಮಟ್ಟದ ನಾಯಕರೊಂದಿಗೆ ರಾಜಕೀಯವಾಗಿ ಉತ್ತಮ ಭಾಂಧವ್ಯವನ್ನ ಹೊಂದಿರುವ ಉಮಾಶ್ರೀ 2023ರ ಚುನಾವಣೆಯಲ್ಲೂ ಸಹ ತೇರದಾಳ ಮತಕ್ಷೇತ್ರದಿಂದ ಕಾಂಗ್ರೆಸ್​​ ಟಿಕೆಟ್ ತರಬಹುದು ಅನ್ನೋ ಲೆಕ್ಕಾಚಾರದಿಂದಲೇ ತೇರದಾಳ ಮತಕ್ಷೇತ್ರದ ಸ್ಥಳೀಯ ಕೈ ನಾಯಕರೆಲ್ಲಾ ಸಭೆ ಸೇರಿದ್ದರು. ಆದರೆ ಈ ಬಾರಿ ಉಮಾಶ್ರೀ ಅವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ತಾವ್ಯಾರು ಅವರನ್ನ ಬೆಂಬಲಿಸಬಾರದು ಅನ್ನೋ ನಿರ್ಧಾರವನ್ನ ಸಹ ಮಾಡಿದರು. 

ಸಭೆ, ಸಮಾರಂಭಗಳಿಗೂ ಸಹ ಹೋಗುವುದು ಬಿಡುವುದನ್ನೂ ಸಹ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋಣ ಒಂದೊಮ್ಮೆ ಪ್ರಸಂಗ ಬಂದರೆ ಸ್ಥಳೀಯ ಅಭ್ಯರ್ಥಿಯನ್ನೇ ಕಣಕ್ಕಿಳಿಸೋಣ ಎನ್ನುವಷ್ಟರ ಮಟ್ಟಿಗೆ ಸಭೆಯಲ್ಲಿ ಚಿಂತನೆಗಳು ನಡೆದವು. ಇನ್ನು ಪ್ರತಿಯೊಬ್ಬ ಸ್ಥಳೀಯ ನಾಯಕರು ಸಹ ನಾವು ಇಲ್ಲಿಯವರೆಗೆ ಲೋಕಲ್​ ಕ್ಯಾಂಡಿಡೇಟ್​ ಬೇಕು ಅಂತ ಕೇಳಿರಲಿಲ್ಲ, ಆದರೆ ಈಗ ಒಗ್ಗಟ್ಟನ್ನು ಪ್ರದರ್ಶನ ಮಾಡಿ ಕೇಳಿದ್ದೇವೆ ಇದಕ್ಕೆ ಪಕ್ಷವೂ ಸಹ ಸ್ಪಂದಿಸಬಹುದೆನ್ನುವ ವಿಶ್ವಾಸ ಇದೆ ಎಂಬ ಲೆಕ್ಕಾಚಾರವನ್ನ ಸ್ಥಳೀಯ ನಾಯಕರು ಇರಿಸಿಕೊಂಡಿದ್ದಾರೆ. 

ಒಟ್ಟಿನಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಟಿಕೆಟ್​ ಆಕಾಂಕ್ಷಿಗಳ ಭರಾಟೆ ಜೋರಾಗಿರುವುದರ ಮಧ್ಯೆಯೇ ಲೋಕಲ್​ ಅಭ್ಯರ್ಥಿ ಬೇಕೆಂಬ ಗಾಳವನ್ನ ಉರುಳಿಸಿ ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದಲ್ಲಿ ಮಾಜಿ ಸಚಿವೆ ಉಮಾಶ್ರೀ ವಿರುದ್ದ ಸ್ಥಳೀಯ ನಾಯಕರು ಸಭೆ ಮೂಲಕ ರಾಜ್ಯ ನಾಯಕರು ಸೇರಿದಂತೆ ಹೈಕಮಾಂಡ್​ಗೆ ಸಂದೇಶವೊಂದನ್ನ ರವಾನಿಸಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷ ಸ್ಪಂದಿಸಿ ಈ ಬಾರಿ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುತ್ತಾ ಅಥವಾ ಸ್ಥಳೀಯ ನಾಯಕರ ಅಸಮಾಧಾನ ಶಮನ ಮಾಡಿ ಮತ್ತೇ ಒಗ್ಗಟ್ಟಿನಿಂದ ಉಮಾಶ್ರೀಗೆ ಟಿಕೆಟ್ ನೀಡುತ್ತಾ ಅಂತ ಕಾದು ನೋಡಬೇಕಿದೆ.

Follow Us:
Download App:
  • android
  • ios