Asianet Suvarna News Asianet Suvarna News

ಕುಡುಕರಿಗಿದು ಸುಗ್ಗಿ ಕಾಲವಾದರೆ ಕಾರವಾರದಲ್ಲಿ ಉಲ್ಟಾ: ಹುಬ್ಬಳ್ಳಿಯಲ್ಲಿ ಮನೇಲಿ ಕುಕ್ಕರಿದ್ರೂ ರೇಡ್ ಆಗ್ತಾವು!

  • ಕುಡುಕರಿಗಿದು ಸುಗ್ಗಿಯ ಕಾಲವಾದರೆ ಕಾರವಾರದಲ್ಲಿ ಉಲ್ಟಾ
  • ಹುಬ್ಬಳ್ಳಿಯಲ್ಲಿ ಮನೇಲಿ ಕುಕ್ಕರಿದ್ರೂ ರೇಡ್‌ ಆಗ್ತಾವು
  • ರೆಡ್ಡಿ ಚಿಹ್ನೆ ಕಾಲಲ್ಲಿ ಒದೆಯೋ ಬಾಲ್‌, ಯಾಕೆ?!
karnataka assembly election special reporters dairy article at bengaluru rav
Author
First Published Apr 3, 2023, 8:43 PM IST

ವರದಿಗಾರರ ಡೈರಿ

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯ ಜನತೆಯನ್ನು ಮಿಲಿಯನ್‌ ಡಾಲರ್‌ ಪ್ರಶ್ನೆಯೊಂದು ಕಾಡುತ್ತಿದೆ.ಅದು ಗಣಿ ಧಣಿ ಜನಾರ್ದನ ರೆಡ್ಡಿ ಸ್ಥಾಪಿತ ಕಲ್ಯಾಣರಾಜ್ಯ ಪ್ರಗತಿ ಪಕ್ಷದ (ಕೆಆರ್‌ಪಿಪಿ) ಚುನಾವಣೆ ಚಿಹ್ನೆ ಫುಟ್‌ಬಾಲ… ಆಗಿದ್ದು ಏಕೆ ಎಂಬುದು.

ಇದಕ್ಕೆ ತರಹೇವಾರಿ ಉತ್ತರಗಳು ಜಿಲ್ಲೆಯಾದ್ಯಂತ ಹಾರಾಡುತ್ತಿವೆ!

ರೆಡ್ಡಿ(Janardanareddy) ಸಾಹೇಬರು ಚಿಹ್ನೆ ಬಿಡುಗಡೆ ಮಾಡಿದ ದಿನ ‘ಎಲ್ಲ ಪಕ್ಷದವರು ನನ್ನನ್ನು ಫುಟ್‌ಬಾಲ್‌ನಂತೆ ಆಡಿಸಿದರು. ಹೀಗಾಗಿಯೇ ಫುಟ್‌ಬಾಲ… ಚಿಹ್ನೆ ಆಯ್ಕೆ ಮಾಡಿಕೊಂಡೆ’ ಎಂದು ಹೆಮ್ಮೆಯಿಂದ ಹೇಳಿದ್ದರು. ಆದರೆ, ಅವರ ವಿರೋಧಿಗಳು, ಈ ಹಿಂದೆ ರೆಡ್ಡಿ ಬಲದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಜನಾರ್ದನ ರೆಡ್ಡಿ ರಾಜಕೀಯ ಚದುರಂಗದ ಆಟಕ್ಕಿಂತಲೂ ಗಣಿಗಾರಿಕೆಯ ಫುಟ್‌ಬಾಲ… ಆಡಿದ್ದೇ ಹೆಚ್ಚು. ಹೀಗಾಗಿ ಫುಟ್‌ಬಾಲ… ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡುತ್ತಾರೆ.

ಈ ವಿರೋಧಿಗಳ ಮಾತನ್ನು ಪಕ್ಕಕ್ಕೆ ತಳ್ಳುವ ರೆಡ್ಡಿ ಸಮರ್ಥಕರು, ಆಟ ಎಂದ ಮೇಲೆ ಗೋಲು ಗಳಿಸಬೇಕಲ್ಲ. ಗೋಲು ಗಳಿಸಲು ಫುಟ್‌ಬಾಲ… ಇರಲೇಬೇಕಲ್ಲ. ಹೀಗಾಗಿ ಅವರ ಚಿಹ್ನೆ ಫುಟ್‌ಬಾಲ… ಎಂದು ಸಮರ್ಥಿಸಿಕೊಳ್ಳುತ್ತಾರೆ.

ಇನ್ನು ಬಳ್ಳಾರಿ ಜಿಲ್ಲೆಯ ಕೆಲಸವಿಲ್ಲದ ಸಂ-ಶೋಧಕರು ರೆಡ್ಡಿಗೆ ದಿಢೀರ್‌ ಎಂದು ಫುಟ್‌ಬಾಲ… ಪ್ರೇಮ ಮೂಡಿದ್ದು ಯಾಕೆ? ಹೈಸ್ಕೂಲ… ದಿನಗಳಲ್ಲಿ ರೆಡ್ಡಿಯೇನಾದರೂ ಫುಟ್‌ಬಾಲ… ಆಡುತ್ತಿದ್ದರಾ? ಇಲ್ಲವೇ ಫುಟ್‌ಬಾಲ… ಆಟವನ್ನು ಹೆಚ್ಚು ಇಷ್ಟಪಡುತ್ತಿದ್ದರಾ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ಪಿಎಚ್‌ಡಿಗೆ ಮುಂದಾಗಿದ್ದಾರೆ.

ಈ ಎಲ್ಲ ಚರ್ಚೆಯ ನಂತರ ಇಡೀ ಬಳ್ಳಾರಿ ಜಿಲ್ಲೆಯನ್ನು ಕಾಡುತ್ತಿರುವ ಕಟ್ಟಕಡೆಯ ಪ್ರಶ್ನೆ- ಜಿಲ್ಲೆಯ ಮತದಾರ ಪ್ರಭು ಈ ಫುಟ್‌ಬಾಲನ್ನು ಮತ ಪೆಟ್ಟಿಗೆ ಎಂಬ ಗೋಲಿನೊಳಗೆ ಹಾಕುತ್ತಾನೆಯೇ? ಅಥವಾ ನ್ಯಾಯಾಲಯಗಳು ಮಾಡಿದಂತೆ ಗಡಿಪಾರು ಮಾಡುತ್ತಾನೆಯೇ?

ಇದಕ್ಕೆ ಉತ್ತರ ಸಿಗಲು ಮೇ 13ರವರೆಗೂ ಕಾಯಬೇಕಿದೆ.

ಒಳಮೀಸಲು: ಒಂದೆಡೆ ಚುನಾವಣೆ ಬಹಿಷ್ಕಾರ, ಮತ್ತೊಂದೆಡೆ ಅದ್ಧೂರಿ ಪ್ರಚಾರ!

ಗುಂಡಾಧಿಪತಿಗಳ ಹಿಡಿ ಶಾಪ!

ಕಾರವಾರ: ಚುನಾವಣೆ ಬಂತು ಎಂದರೆ ರಾಜ್ಯದ ಉಳಿದ ಎಲ್ಲ ಕ್ಷೇತ್ರಗಳಲ್ಲಿ ಗುಂಡು ತುಂಡು ಪ್ರಿಯರಿಗೆ ಲಕ್‌ ಕುದುರಿದಂತೆ. ಆಗಾಗ ಬಾಡೂಟ, ಅವಕಾಶ ಸಿಕ್ಕಾಗಲೆಲ್ಲ ಗುಂಡಿನ ಸಮಾರಾಧನೆ ನಡೆದೆ ತೀರುತ್ತದೆ ಎಂಬ ಆಸೆ ನಾಡಿನ ಸಕಲ ಗುಂಡಾಧಿಪತಿಗಳಲ್ಲಿ ಮೂಡುತ್ತದೆ. ಆದರೆ, ನಮ್ಮ ಉತ್ತರ ಕನ್ನಡದ ಗುಂಡು ಪ್ರಿಯರಿಗೆ ಮಾತ್ರ ಲತ್ತೆ (ಬ್ಯಾಡ್‌ ಲಕ್‌) ಹೊಡೆಯುತ್ತದೆ.

ಯಾಕೆ ಅಂತೀರಾ, ಕಾರವಾರದಿಂದ ಕೇವಲ 16 ಕಿ.ಮೀ. ಹೋದರೆ ಸಾಕು ಗೋವಾ ಗಡಿ ಸಿಗುತ್ತದೆ. ಅಲ್ಲಿದೆ ‘ಪೋಳೆಂ’. ಇದು ಕಾರವಾರದ ಗುಂಡಾಧಿಪತಿಗಳ ಪಾಲಿಗೆ ಅಕ್ಷರಶಃ ಸ್ವರ್ಗ. ಸಂಜೆ ಆಯಿತು ಎನ್ನಿ, ವಾರಾಂತ್ಯ ಬಂತು ಎನ್ನಿ, ಕಾರವಾರದ ಗುಂಡುಪ್ರಿಯರ ದಂಡು ಪೋಳೆಂಗೆ ವಲಸೆ ಹೋಗುತ್ತಾರೆ. ಏಕೆಂದರೆ, ಅಲ್ಲಿ ಮದ್ಯ ರಾಜ್ಯಕ್ಕೆ ಹೋಲಿಸಿದರೆ ತೀರಾ ಅಗ್ಗ. ಇಲ್ಲಿ 2000 ರು.ಗೆ ದೊರೆಯುವ ಮದ್ಯದ ಬಾಟಲಿ ಅಲ್ಲಿ 700 ರು.ಗೆ ಸಿಗುತ್ತದೆ. ಸೋ, ನಮ್ಮ ಮದ್ಯಪ್ರಿಯರು ಪೋಳೆಂನಲ್ಲಿ ಮದ್ಯಾರಾಧನೆ ಮಾಡಿ ಬರುವಾಗ ಒಂದಷ್ಟುಬಾಟಲ್‌ಗಳನ್ನು ಹಿಡಿದುಕೊಂಡು ಬರುತ್ತಾರೆ. ಸಾಮಾನ್ಯ ದಿನಗಳಲ್ಲಿ ಈ ಗಡಿ ಭಾಗದಲ್ಲಿ ಅಷ್ಟೇನೂ ಪೊಲೀಸರ ಕಾಟ ಇರುವುದಿಲ್ಲ.

ಆದರೆ, ಚುನಾವಣೆ ಬಂದಿದೆಯಲ್ಲ. ಅದಾಗಿ ಗಡಿಯಲ್ಲಿ ಪೊಲೀಸರ ತಪಾಸಣೆ ತೀವ್ರಗೊಂಡಿದೆ. ಬಾಟಲಿ ಬಿಡಿ, ಅದರ ಮುಚ್ಚಳವನ್ನು ಕೂಡ ತರಲು ಸಾಧ್ಯವಾಗುತ್ತಿಲ್ಲ. ಅಷ್ಟುಬಿಗಿ ಬಂದೋಬಸ್‌್ತ. ಇದೆಲ್ಲ ನೀತಿ ಸಂಹಿತೆ ಪ್ರಭಾವ. ಆದ್ದರಿಂದ ಸುಮಾರು ಒಂದೂವರೆ ತಿಂಗಳ ಕಾಲ ಈ ಸಮಾರಾಧನೆ ಸ್ಥಗಿತಗೊಳ್ಳುತ್ತದೆ.

ಹೀಗಾಗಿ, ಚುನಾವಣೆಯಲ್ಲಿ ಹೆಂಡ ಹಂಚುವುದನ್ನು ತಡೆಯುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದೇನೋ ಸರಿ. ಆದರೆ, ನಮ್ಮದೇ ಹಣದಲ್ಲಿ ನಾವು ಕುಡಿಯಬೇಕೆಂದರೂ ಈ ಚುನಾವಣೆ ಅಡ್ಡಿ ಬಂತಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

ಕುಕ್ಕರ್‌ ಇದ್ದರೆ ಬೇಳೆ ಬೇಯಂಗಿಲ್ರಿ!

ಹುಬ್ಬಳ್ಳಿ: ಈ ಚುನಾವಣೆಗೆ ಕುಕ್ಕರ್‌ ಪಾಲಿಟಿಕ್ಸ್‌ ಬಹುವಾಗಿ ಕಾಡತೊಡಗಿದೆ. ಕುಕ್ಕರ್‌ ಕೊಟ್ಟು ಮತ ಗೆಲ್ಲುವ ತಂತ್ರಕ್ಕೆ ರಾಜಕಾರಣಿಗಳು ಶರಣಾಗಿದ್ದರೆ, ಉಚಿತವಾಗಿ ದೊರೆಯಿತು ಎಂದು ಪಡೆದ ಕುಕ್ಕರ್‌ಗಳು ಬ್ಲಾಸ್ಟ್‌ ಆಗಿ ಹಲವು ಮತದಾರ ಬಾಂಧವರನ್ನು ಕಾಡಿದ್ದೂ ಇದೆ. ಹೀಗಾಗಿ ಕುಕ್ಕರ್‌ ಎಂದರೆ ಜನ ಭಯಬೀಳುವ ಪರಿಸ್ಥಿತಿಯಿದೆ.

ಆದರೆ, ನಮ್ಮ ಹುಬ್ಬಳ್ಳಿಯಲ್ಲಿ ಉಚಿತವಾಗಿ ಕೊಡುವ ಕುಕ್ಕರ್‌ ಬಿಡಿ, ಅಡುಗೆ ಮಾಡಿಕೊಳ್ಳಲು ತಾವೇ ತಂದಿಟ್ಟುಕೊಂಡಿದ್ದ ಕುಕ್ಕರ್‌ಗಳು ಕೂಡ ಇಲ್ಲಿನ ನಿವಾಸಿಗಳನ್ನು ಕಾಡತೊಡಗಿವೆ. ಮೊನ್ನೆ ಏನಾಯಿತು ಎಂದರೆ, ಯಾರೋ ಒಬ್ಬರು ಹುಬ್ಬಳ್ಳಿಯ ನಿರ್ದಿಷ್ಟವ್ಯಕ್ತಿಯೊಬ್ಬರು ಕುಕ್ಕರ್‌ ಹಂಚಾಕತ್ತಾರ. ಅವರ ಮನೆಯಲ್ಲಿ ಲೋಡ್‌ಗಟ್ಟಲೇ ಕುಕ್ಕರ್‌ ಸಿಗ್ತಾವ್‌ ಅಂತ ಅಧಿಕಾರಿಗಳಿಗೆ ವಾಟ್ಸ್‌ಆ್ಯಪ್‌ ಮೆಸೇಜ್‌ ಕೊಟ್ಟುಬಿಟ್ಟಿದ್ದಾರೆ.

ಸೋ, ಕುಕ್ಕರ್‌ ಬೇಟೆಯಾಡಿ ಹೆಸರು ಮಾಡೋಣ ಎಂದು ಅಧಿಕಾರಿಗಳ ತಂಡ ನಾಲ್ಕಾರು ಜೀಪ್‌ಗಳಲ್ಲಿ ದಾಳಿ ನಡೆಸಿಯೇ ಬಿಟ್ಟಿದೆ. ಮನೆಯೊಳಗೆ ಹೋಗಿ ಎಲ್ಲೆಡೆ ತಡಕಾಡಿದರೂ ಸಿಕ್ಕಿದ್ದು ಬರೀ ನಾಲ್ಕು ಕುಕ್ಕರ್‌, ಒಂದಿಪ್ಪತ್ತು ಊಟದ ತಟ್ಟೆಮಾತ್ರ. ಅದರಲ್ಲೂ ಒಂದೆರಡರಲ್ಲಿ ಅನ್ನ ಮಾಡಿದ್ದ ಕುರುಹು ಸಹ ಪತ್ತೆಯಾಗಿದೆ.

ದಾಳಿ ನಡೆಸುತ್ತಿದ್ದ ಅಧಿಕಾರಿಗಳಿಗೆ ಮನೆಯವರು ನಮ್ಮ ಮನೆಯಲ್ಲಿ ನಾಲ್ಕು ಕುಕ್ಕರ್‌ ಅಷ್ಟೇ ಇವೆ ಅಂತ ತಿಳಿಸಿದ್ದಾರೆ. ಆಗ, ಒಂದು ಮನೆಯಲ್ಲಿ ನಾಲ್ಕು ಕುಕ್ಕರ್‌ ಏಕೆ ಎಂದು ಅಧಿಕಾರಿಯೊಬ್ಬರು ಲಾಜಿಕಲ… ಪ್ರಶ್ನೆ ಮಾಡಿದ್ದಾರೆ. ಒಂದು ಹಳೆಯದಾಗಿದೆ ಅಂತ ಮತ್ತೊಂದು ಖರೀದಿಸಿದೆವು. ಇನ್ನೆರಡು ಕಾರ್ಯಕ್ರಮವೊಂದರಲ್ಲಿ ಗಿಫ್‌್ಟಬಂದಿದೆ ಅಂತ ಸಮಜಾಯಿಷಿಯನ್ನು ಆ ಮನೆಯ ಯಜಮಾನ ನೀಡಿದ್ದಾರೆ. ಅಲ್ಲದೇ, ಕುಕ್ಕರ್‌ ಮೇಲೆ ಯಾವುದೇ ಪಕ್ಷದ ಚಿಹ್ನೆಯಾಗಲಿ, ಅಭ್ಯರ್ಥಿಯ ಹೆಸರಾಗಲಿ ಇಲ್ಲ ನೋಡಿ ಅಂತ ತೋರಿಸಿದ್ದಾರೆ. ಲೋಡಗಟ್ಟಲೇ ಕುಕ್ಕರ್‌ ಸಿಗಬಹುದು ಎಂದು ನಿರೀಕ್ಷೆ ಇಟ್ಟುಕೊಂಡು ನಾಲ್ಕಾರು ವಾಹನ ಸಮೇತ ದಾಳಿ ನಡೆಸಿದ್ದ ಅಧಿಕಾರಿಗಳ ತಂಡ ಇದನ್ನೆಲ್ಲ ಕಂಡು ಕಕ್ಕಾಬಿಕ್ಕಿಯಾಗಿದೆ. ಏನ್ಮಾಡಬೇಕೋ ಗೊತ್ತಾಗದೆ ಸಿಕ್ಕ ನಾಲ್ಕು ಕುಕ್ಕರ್‌, ಒಂದಿಷ್ಟುತಟ್ಟೆಎತ್ತುಕೊಂಡು ಠಾಣೆಗೆ ಮರಳಿ ಕೇಸ್‌ ದಾಖಲಿಸಿದ್ದಾರಂತೆ.

ಶಾಸಕ ಗೋಪಾಲಕೃಷ್ಣ ರಾಜೀನಾಮೆ ನೋವು ತಂದಿದೆ: ಸಚಿವ ಶ್ರೀರಾಮುಲು

ಇದೀಗ ಆ ಮನೆಯ ಯಜಮಾನ ಓಣಿಯಲ್ಲೆಲ್ಲ ನಿಮ್ಮ ನಿಮ್ಮ ಮನೆಯಲ್ಲಿ ಒಂದೇ ಕುಕ್ಕರ್‌ ಇಟ್ಕೊಳ್ಳಿ. ಎರಡು ಅಥವಾ ಮೂರು ಇದ್ದರೆ ದಾಳಿಯಾಗುತ್ತದೆ ಎಂದು ಪ್ರಚಾರಕ್ಕೆ ಇಳಿದಿದ್ದಾನಂತೆ.

  • ಕೆ.ಎಂ.ಮಂಜುನಾಥ್‌
  • ವಸಂತಕುಮಾರ್‌ ಕತಗಾಲ
  • ಶಿವಾನಂದ ಗೊಂಬಿ, ಹುಬ್ಬಳ್ಳಿ
Follow Us:
Download App:
  • android
  • ios