ಟಿಕೆಟ್ ನಿರಾಕರಣೆಯಿಂದ ಬೇಸತ್ತ ಪಕ್ಷ ತೊರೆಯಲು ಮುಂದಾಗಿದ್ದ ಜಗದೀಶ್ ಶೆಟ್ಟರ್ ಮನವೊಲಿಸುವಲ್ಲಿ ಬಿಜೆಪಿ ಹೈಕಮಾಂಡ್ ವಿಫಲವಾಗಿದೆ. ಇದರ ಬೆನ್ನಲ್ಲೇ ಜಗದೀಶ್ ಶೆಟ್ಟರ್ ರಾಜೀನಾಮೆ ಘೋಷಿಸಿದ್ದಾರೆ.

ಹುಬ್ಬಳ್ಳಿ(ಏ.15): ಕರ್ನಾಟಕ ವಿಧಾಸಭಾ ಚುನಾವಣೆ ಬಿಜೆಪಿ ಸವಾಲಾಗಿ ಪರಿಣಮಿಸಿದೆ. ಟಿಕೆಟ್ ನಿರಾಕರಣೆಯಿಂದ ಕೆರಳಿರುವ ಜಗದೀಶ್ ಶೆಟ್ಟರ್ ಮನವೊಲಿಸುವಲ್ಲಿ ಬಿಜೆಪಿ ಹೈಕಮಾಂಡ್ ವಿಫಲವಾಗಿದೆ. ಹುಬ್ಬಳ್ಳಿಯ ಶೆಟ್ಟರ್ ನಿವಾಸದಲ್ಲಿ ನಡೆದ ಮಹತ್ವದ ಸಂಧಾನ ಸಭೆ ವಿಫಲವಾಗಿದೆ. ಹೀಗಾಗಿ ಜಗದೀಶ್ ಶೆಟ್ಟರ್ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ನಾಳೆ ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಲಿದ್ದಾರೆ.

ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹುಬ್ಬಳ್ಳಿಯ ಶೆಟ್ಟರ್ ನಿವಾಸಕ್ಕೆ ತೆರಳಿ ಮಹತ್ವದ ಸಂಧಾನ ಸಭೆ ನಡೆಸಿದ್ದರು. ಪ್ರಧಾನ್ ಜೊತೆ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು . ಆದರೆ ಈ ಸಂಧಾನ ವಿಫಲವಾಗಿದೆ. ಇದರಿಂದ ನೊಂದಿರುವ ಶೆಟ್ಟರ್ ಸುದ್ದಿಗೋಷ್ಠಿ ಮೂಲಕ ರಾಜಿನಾಮೆ ಘೋಷಿಸಿದ್ದಾರೆ. ಇದೇ ವೇಳೆ ಶೆಟ್ಟರ್, ಕೆಲ ವ್ಯಕ್ತಿಗಳು ಇದರ ಹಿಂದೆ ಕೆಲಸ ಮಾಡಿದ್ದಾರೆ. ಇದರಿಂದ ಬೇಸರವಾಗಿದೆ ಎಂದು ಶೆಟ್ಟರ್ ಹೇಳಿದ್ದಾರೆ. ಇಷ್ಟೇ ಅಲ್ಲ ಈ ಬಾರಿ ಸ್ಪರ್ಧೆ ಖಚಿತ. ಆದರೆ ಯಾವ ಪಕ್ಷದಿಂದ ಅಥವಾ ಪಕ್ಷೇತರರಾಗಿ ಸ್ಪರ್ಧಿಸಬೇಕೆ ಅನ್ನೋ ಕುರಿತು ಚರ್ಚೆ ನಡೆಸಿ ನಿರ್ಧರಿಸುತ್ತೇನೆ ಎಂದು ಶೆಟ್ಟರ್ ಹೇಳಿದ್ದಾರೆ. ಬಿಜೆಪಿಯಲ್ಲಿ ಸದ್ಯ ನಾನು ಹಿರಿಯ ನಾಯಕ, ಬಿಎಸ್ ಯಡಿಯೂರಪ್ಪ, ಈಶ್ವರಪ್ಪ ರಾಜಕೀಯ ನಿವೃತ್ತಿ ಪಡೆದಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಸಿಎಂ ಸ್ಥಾನಕ್ಕೆ ಶೆಟ್ಟರ್ ಕಂಟಕವಾಗಲಿದ್ದಾರೆ ಎಂಬ ಕಾರಣದಿಂದ ನನ್ನನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.

ಸೈಲೆಂಟ್‌ ಸುನೀಲ ನಮ್ಮ ಪಕ್ಷದವನೇ ಅಲ್ಲ: ನಳೀನ್‌ ಕುಮಾರ್‌ ಕಟೀಲ್‌!

40 ವರ್ಷದ ರಾಜಾಕಾರಣದಲ್ಲಿ ಅತ್ಯಂತ ಕೆಟ್ಟ ದಿನಗಳು ಇದಾಗಿದೆ. ರಾಜ್ಯದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಸಚಿವನಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಎಲ್ಲಾ ಸ್ಥಾನಮಾನ ನೀಡಿದೆ. ಇದಕ್ಕೆ ಬಿಜೆಪಿ ಧನ್ಯವಾದ ಹೇಳುತ್ತೇನೆ. ಅಧಿಕಾರ ಅನುಭವಿಸುವ ಕೆಲಸ ಮಾಡಿಲ್ಲ. ಪಕ್ಷವನ್ನು ಕೆಳಮಟ್ಟದಿಂದ ಕಟ್ಟುವ ಕೆಲಸ ಮಾಡಿದ್ದೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಓಡಾಡಿ ಸಂಘಟನೆ ಮಾಡಿ ಪಕ್ಷ ಕಟ್ಟಿದ್ದೇನೆ. ತಾಲೂಕೂ ಪಂಚಾಯಿತ ಚುನಾವಣೆ, ಜಿಲ್ಲಾ ಪಂಚಾಯಿತ್ ಚುನಾವಣೆಯಲ್ಲೂ ಅಭ್ಯರ್ಥಿಗಳನ್ನು ಹುಡುಕಿ ಹುಡುಕಿ ಆಯ್ಕೆ ಮಾಡಿ ಕೆಲಸ ಮಾಡಿದ್ದೇನೆ. ಜನಸಂಘ, ಆರ್‌ಎಸ್‌ಎಸ್‌ನಿಂದ ಬಂದವರು ನಾವು. ನನ್ನ ತಂದೆ ಜನಸಂಘದ ದಕ್ಷಿಣ ಭಾರತದ ಮೊದಲ ಮೇಯರ್ ಆಗಿದ್ದವರು. 

ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲ. ಯಾವುದೇ ಸಿಡಿ ಪ್ರಕರಣವಿಲ್ಲ. ನನ್ನ ವಿರುದ್ದ ಯಾವುದೇ ಆರೋಪವಿಲ್ಲ. ನನಗೆ ಸಿಕ್ಕ ಸೀಮಿತ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದೇನೆ. 23 ಸಾವಿರ ದಿನಗೂಲಿ ನೌಕರರನ್ನು ಖಾಯಂ ಮಾಡಿದ್ದೇನೆ. 6 ಬಾರಿ ಹುಬ್ಬಳ್ಳಿ ಸೆಂಟ್ರಲ್ ಜನ ನಗೆ ಆಶೀರ್ವಾದ ಮಾಡಿದ್ದಾರೆ. ಪ್ರತಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಕನಿಷ್ಠ 25 ಸಾವಿರ ಅಂತರದಿಂದ ಗೆದ್ದಿದ್ದೇನೆ. ಶಿಸ್ತಿನ ಜೀವನ ನಡೆಸಿದ್ದೇನೆ.

ಇತ್ತೀಚೆಗೆ ಬಿಜೆಪಿ ಸರ್ವೆಯಲ್ಲಿ ನನಗೆ ಹೆಚ್ಚಿನ ಮತಗಳು ಬಂದಿದೆ. ನನಗೆ ಅಚ್ಚರಿಯಾಗಿದ್ದು, ಮೊದಲ ಲಿಸ್ಟ್‌ನಲ್ಲಿ ನನ್ನ ಹೆಸರು ಇಲ್ಲದಿದ್ದಾಗ ಆಘಾತವಾಗಿತ್ತು. ಇತ್ತ ಹೈಕಮಾಂಡ್ ಕರೆ ಮಾಡಿ ಟಿಕೆಟ್ ಇಲ್ಲ ಎಂದಾಗ ಮತ್ತಷ್ಟು ನೋವಾಯಿತು. ನನಗೆ ಟಿಕೆಟ್ ನಿರಾರಿಸಲು ಕಾರಣವೇನು ಅನ್ನೋ ಪ್ರಶ್ನೆಗೆ ಉತ್ತರ ನೀಡಿಲ್ಲ. 75 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ನೀಡಿದ್ದಾರೆ. ಆದರೆ ನನಗೆ ನಿರಾಕರಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಕೈಕುಲುಕಿದ್ದ ರೌಡಿಶೀಟರ್‌ ಫೈಟರ್‌ ರವಿ ಬಿಜೆಪಿಗೆ ರಾಜೀನಾಮೆ!

ಒಂದು ಬಾರಿ ಅವಕಾಶ ನೀಡಿ. ನಾನು ಹೋರಾಟದ ಮೂಲಕ ಈ ಮಟ್ಟಕ್ಕೆ ಬೆಳೆದಿದ್ದೇನೆ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಹೋರಾಟದಲ್ಲಿ ಹಲವು ಬಾರಿ ಜೈಲಿಗೆ ಹೋಗಿದ್ದೇನೆ. ಈ ರೀತಿಯ ವ್ಯಕ್ತಿಗೆ ಯಾಕೆ ಟಿಕೆಟ್ ನಿರಾಕರಿಸಿದ್ದಾರೆ? ಇದು ಬೇಸರವಾಗಿದೆ. ನನಗೆ ವೈಯುಕ್ತಿಕವಾಗಿ ಯಾವುದೇ ನಷ್ಟವಿಲ್ಲ. ಆದರೆ ಜಗದೀಶ್ ಶೆಟ್ಟರ್ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಾನು ಅಧಿಕಾರದ ಹಿಂದೆ ಹೋದವನಲ್ಲ. ಜನರ ಪ್ರೀತಿ ವಿಶ್ವಾಸಕ್ಕೆ ನಾನು ಧನ್ಯ ಎಂದು ಶೆಟ್ಟರ್ ಹೇಳಿದ್ದಾರೆ.

ಭಾರತೀಯ ಜನತಾಪಾರ್ಟಿಯಲ್ಲಿ ವ್ಯವಸ್ಥೆ ಬೇಸರ ತರಿಸಿದೆ. ಈ ಹಿಂದಿನ ವ್ಯವಸ್ಥೆ ಈಗ ಉಳಿದಿಲ್ಲ. ನಿಮ್ಮ ಬಗ್ಗೆ ಗೌರವ ಇದೆ. ಪಕ್ಷ ಗೌರವ ನೀಡಲಿದೆ. ಪಕ್ಷ ಉನ್ನತ ಹುದ್ದೆ ಕೊಡಲಿದೆ ಎಂದು ಹೈಕಮಾಂಡ್ ಭರವಸೆ ನೀಡಿದೆ. ಆದರೆ ನನಗೆ ಇದ್ಯಾವುದು ಬೇಡ. ಇದು ನನ್ನ ಕೊನೆಯ ಚುನಾವಣೆ. ಟಿಕೆಟ್ ನೀಡಿ, ಯಾವುದೇ ಬೇಡಿಕೆ ಇಲ್ಲ. ಇಲ್ಲಿನ ಜನರ ಪ್ರೀತಿ ವಿಶ್ವಾಸ ಬಿಟ್ಟು ನನಗೆ ಬೇರೇನು ಇಲ್ಲ. ಕೊನೆಯ ಬಾರಿಗೆ ಟಿಕೆಟ್ ನೀಡಿ ಎಂಬ ಮಾತಿಗೆ ಮತ್ತೊಮ್ಮೆ ಚರ್ಚಿಸಿ ಹೇಳುವುದಾಗಿ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಈಗಾಗಲೇ ಅವಧಿ ಮುಗಿದಿದೆ. ಇನ್ನೂ ಚರ್ಚಿಸಿ ಹೇಳುದೇನಿದೆ ಎಂದು ಶೆಟ್ಟರ್ ಹೇಳಿದ್ದಾರೆ. 

ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಯಾವ ಪಕ್ಷದಿಂದ ಅಥವಾ ಪಕ್ಷೇತರವಾಗಿ ಸ್ಪರ್ಧಿಸಬೇಕಾ ಅನ್ನೋ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಪಕ್ಷವನ್ನು ಕಟ್ಟಿ ಬೆಳೆಸಿದ ನನಗೆ ಈ ರೀತಿ ಅನ್ಯಾಯವಾಗಿದೆ ಅನ್ನೋ ಬೇಸವಿದೆ. ಕೆಲವೇ ಕೆಲವರಿಂದ ಪಕ್ಷ ಹಾಳಾಗುತ್ತಿದೆ ಎಂದು ಶೆಟ್ಟರ್ ಹೇಳಿದ್ದಾರೆ.