ಬೆಂಗಳೂರಿಗೆ ಕನಕಪುರ ಸೇರ್ಪಡೆ ಹಿಂದೆ ರಿಯಲ್ ಎಸ್ಟೇಟ್ ಕೈವಾಡ: ಆರ್.ಅಶೋಕ್
ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿ.ಕೆ.ಶಿವಕುಮಾರ್ ಹೇಳಿಕೆಯು ಡೆವಲಪರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ದಂಧೆ ಮಾಡಲು ಅನುಕೂಲ ಕಲ್ಪಿಸುವ ಹುನ್ನಾರವಾಗಿದೆ. ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಮಾಜಿ ಸಚಿವ ಆರ್.ಅಶೋಕ್ ಎಚ್ಚರಿಸಿದ್ದಾರೆ.

ಬೆಂಗಳೂರು (ಅ.26): ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿ.ಕೆ.ಶಿವಕುಮಾರ್ ಹೇಳಿಕೆಯು ಡೆವಲಪರ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ದಂಧೆ ಮಾಡಲು ಅನುಕೂಲ ಕಲ್ಪಿಸುವ ಹುನ್ನಾರವಾಗಿದೆ. ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಮಾಜಿ ಸಚಿವ ಆರ್.ಅಶೋಕ್ ಎಚ್ಚರಿಸಿದ್ದಾರೆ. ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಂದಲ್ಲ, ನೂರಾರು ಬಾರಿ ನಾನು ಮೊದಲು ಬಿಸಿನೆಸ್‍ಮ್ಯಾನ್, ರಾಜಕಾರಣ ನನ್ನ ಹವ್ಯಾಸ ಎಂದಿದ್ದಾರೆ. ಅವರು ಏನೇ ಮಾಡಿದರೂ ಬಿಜಿನೆಸ್‌ಗೆ ಮೊದಲ ಸ್ಥಾನ. ಬೆಂಗಳೂರಿಗೆ ಕನಕಪುರವನ್ನು ಸೇರ್ಪಡೆ ಮಾಡುವ ಹೇಳಿಕೆಯ ಉದ್ದೇಶವೂ ಬಿಜಿನೆಸ್ ಆಗಿದೆ ಎಂದು ಟೀಕಿಸಿದರು.
ಬೆಂಗಳೂರಿನಿಂದ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದವರು ಈ ಕುರಿತು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, 110 ಹಳ್ಳಿಗಳನ್ನು ಸುಮಾರು 15 ವರ್ಷಗಳ ಹಿಂದೆ ಬಿಬಿಎಂಪಿಗೆ ಸೇರಿಸಿದ್ದು ಇನ್ನೂ ಶೇ.30ರಷ್ಟು ಅಭಿವೃದ್ಧಿ ಸಾಧಿಸಲಾಗಿಲ್ಲ. ಈ ಪ್ರದೇಶಗಳಿಗೆ ಕಾವೇರಿ ಕುಡಿಯುವ ನೀರು ರಸ್ತೆ, ಬೀದಿದೀಪ ಸೌಕರ್ಯ ಒದಗಿಸಿಲ್ಲ. ಈಗ ಕನಕಪುರವನ್ನು ಸೇರಿಸುತ್ತೇನೆ ಎನ್ನುತ್ತಾರೆ. ಹಾರೋಹಳ್ಳಿ ದಾಟಿ 10 ಕಿಮೀ ಬಳಿಕ ಕನಕಪುರ ಸಿಗುತ್ತದೆ. ಹಾಗಿದ್ದರೆ ಹಾರೋಹಳ್ಳಿ, ರಾಮನಗರದ ಕಥೆ ಏನು ಎಂದು ಪ್ರಶ್ನಿಸಿದರು.
ಸಂಸದರಿಗಿಂತಲೂ ಬಿಜೆಪಿಯಲ್ಲಿ ನಾನು ಹಿರಿಯ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಿಡಿಪಿ 10 ವರ್ಷದಿಂದ ಬಾಕಿ ಇದೆ. ಆ ಸಿಡಿಪಿಯಡಿ ಇದೆಲ್ಲವನ್ನೂ ಸೇರಿಸಿ ಯಾವ್ಯಾವುದು ಹೇಗೆ ಬೇಕೋ ಯೆಲ್ಲೊ, ಗ್ರೀನ್, ಕಮರ್ಷಿಯಲ್, ವಸತಿ ಪ್ರದೇಶ- ಹೀಗೆ ಡೆವಲಪರ್‌ಗಳಿಗೆ ದಂಧೆ ಮಾಡುವ ಹುನ್ನಾರ ಎಂದು ಆರೋಪಿಸಿದರು. ಹೊಸೂರು, ಕನಕಪುರ, ರಾಮನಗರ, ಮಾಗಡಿ ಏನೇನಿದೆಯೋ ಎಲ್ಲ ಸೇರಿಸಿದರೆ ರಿಯಲ್ ಎಸ್ಟೇಟ್ ದಂಧೆ ಮಾಡಲು ಅವಕಾಶ ಆಗಲಿದೆ. ಬೆಂಗಳೂರಿನ ಜನರು ನರಕ ನೋಡುವಂತೆ ಮಾಡುವ ಪ್ರಯತ್ನ ಕಾಂಗ್ರೆಸ್ಸಿನವರದ್ದು. ಜನರು ಮೌನ ವಹಿಸದೇ ಪ್ರತಿಕ್ರಿಯಿಸಬೇಕೆಂದು ಅಶೋಕ್ ಮನವಿ ಮಾಡಿದರು.