ಮಹಾನಗರ ಪಾಲಿಕೆಯ 24ನೇ ಅವಧಿಗೆ ಮೇಯರ್ ಆಗಿ 23ನೇ ವಾರ್ಡ್‌ನ ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಸ್ಥಾನದ ಪ್ರಧಾನ ಅರ್ಚಕ, ಪೂಜಾರಿ ಪಿ.ಗಾದೆಪ್ಪ ಹಾಗೂ ಉಪ ಮೇಯರ್ ಆಗಿ 28ನೇ ಬಿ.ಮುಬೀನಾ ಆಯ್ಕೆಗೊಂಡರು.
ಬಳ್ಳಾರಿ (ನ.16): ಮಹಾನಗರ ಪಾಲಿಕೆಯ 24ನೇ ಅವಧಿಗೆ ಮೇಯರ್ ಆಗಿ 23ನೇ ವಾರ್ಡ್‌ನ ಪೂಜಾರಿ ಪಿ.ಗಾದೆಪ್ಪ ಹಾಗೂ ಉಪ ಮೇಯರ್ ಆಗಿ 28ನೇ ಬಿ.ಮುಬೀನಾ ಆಯ್ಕೆಗೊಂಡರು. ನೂತನ ಮೇಯರ್ ಆಗಿ ಆಯ್ಕೆಯಾದ ಪೂಜಾರಿ ಪಿ.ಗಾದೆಪ್ಪ ಅವರು ಬಳ್ಳಾರಿ ನಗರದ ಕನಕ ದುರ್ಗಮ್ಮ ದೇವಸ್ಥಾನದ ಪ್ರಧಾನ ಅರ್ಚಕರೂ ಹೌದು. ಇಲ್ಲಿನ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಾಲಿಕೆ ಸದಸ್ಯರ ನಡುವೆ ನಡೆದ ತೀವ್ರ ಜಿದ್ದಾಜಿದ್ದಿ ಗಮನ ಸೆಳೆಯಿತು. ಕೊನೆಗೂ ಪಕ್ಷದ ನಾಯಕರ ಮನವೊಲಿಕೆ, ನಾನಾ ಕಸರತ್ತುಗಳಿಂದಾಗಿ ಚುನಾವಣೆ ಕೈ ಪಕ್ಷದ ಪಾಲಿಗೆ ಸುಖಾಂತ್ಯ ನೀಡಿತು.
ಕಾಂಗ್ರೆಸ್ ಸ್ಪಷ್ಟ ಬಹುಮತ ಇದ್ದರೂ ಮೇಯರ್ ಸ್ಥಾನದ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಒಮ್ಮತ ಮೂಡದ ಹಿನ್ನೆಲೆ ಕಾಂಗ್ರೆಸ್‌ನಿಂದಲೇ ಆಕಾಂಕ್ಷಿಗಳಾದ ಪಿ.ಗಾದೆಪ್ಪ, ಎಂ.ಪ್ರಭಂಜನಕುಮಾರ್, ಆಸಿಫ್ ನಾಮಪತ್ರ ಸಲ್ಲಿಸಿದ್ದರು. ಉಪಮೇಯರ್ ಸ್ಥಾನಕ್ಕೆ ಬಿ.ಮುಬೀನಾ, ಪಕ್ಷೇತರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕವಿತಾ ಹೊನ್ನಪ್ಪ ಹಾಗೂ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಕೋನಂಕಿ ತಿಲಕ್ ಕುಮಾರ್, ಉಪಮೇಯರ್ ಸ್ಥಾನಕ್ಕೆ ಕಲ್ಪನಾ ಉಮೇದುವಾರಿಕೆ ಸಲ್ಲಿಸಿದ್ದರು.
ಕಲಬುರಗಿ ಪ್ರಾದೇಶಿಕ ಆಯುಕ್ತೆ ಜಾಹೀರಾ ನಾಸೀಮ್ ನೇತೃತ್ವದಲ್ಲಿ ನಡೆದ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಸದಸ್ಯ ಆಸಿಫ್, ಪ್ರಭಂಜನಕುಮಾರ್, ಕವಿತಾ ಹೊನ್ನಪ್ಪ ತಮ್ಮ ಉಮೇದುವಾರಿಕೆ ಹಿಂದೆಗೆದುಕೊಂಡರು. ಬಳಿಕ ನಡೆದ ಚುನಾವಣೆಯಲ್ಲಿ ತಲಾ 28 ಮತಗಳನ್ನು ಪಡೆದ ಕಾಂಗ್ರೆಸ್ ಸದಸ್ಯ ಪಿ.ಗಾದೆಪ್ಪ ಪಾಲಿಕೆ ಮೇಯರ್ ಆಗಿ, ಸದಸ್ಯೆ ಬಿ.ಮುಬೀನಾ ಉಪಮೇಯರ್ ಆಗಿ ಆಯ್ಕೆಯಾದರು. ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ತಿಲಕಕುಮಾರ್, ಉಪಮೇಯರ್‌ಗೆ ಸ್ಪರ್ಧಿಸಿದ ಪಿ.ಕಲ್ಪನಾ ತಲಾ 13 ಮತಗಳನ್ನು ಪಡೆದು ಪರಾಭವಗೊಂಡರು.
ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಹಿನ್ನೆಲೆ ನಗರದ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಮುಖಂಡರು ಸಭೆ ನಡೆಸಿ ಮೇಯರ್ ಅಭ್ಯರ್ಥಿಯನ್ನಾಗಿ ಪಿ.ಗಾದೆಪ್ಪ, ಉಪಮೇಯರ್ ಸ್ಥಾನಕ್ಕೆ ಮುಬೀನಾ ಅವರನ್ನು ಘೋಷಿಸಿ, ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯ ಎಂ.ಪ್ರಭಂಜನಕುಮಾರ್ ಅಂತಿಮ ಕ್ಷಣದವರೆಗೆ ನಾಮಪತ್ರ ಹಿಂಪಡೆಯಲು ಮುಂದಾಗದ ಹಿನ್ನೆಲೆ ಮನವೊಲಿಕೆ ಕೈ ನಾಯಕರು ನಾನಾ ಹರಸಾಹಸ ಪಡುವಂತಾಗಿತ್ತು. ಸತತ ಎರಡನೇ ಬಾರಿಗೆ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿಕೊಂಡು ಸದಸ್ಯರ ಬೆಂಬಲದೊಂದಿಗೆ ಮೇಯರ್ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದ ಪ್ರಭಂಜನ್ ಅವರೊಂದಿಗೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಶಾಸಕರಾದ ಬಿ.ನಾಗೇಂದ್ರ, ನಾರಾ ಭರತ್ ರೆಡ್ಡಿ ಮನವೊಲಿಸುವ ಮೂಲಕ ಅಂತಿಮವಾಗಿ ನಾಮಪತ್ರ ಹಿಂದೆಗೆಸುವಲ್ಲಿ ಯಶಸ್ವಿಯಾದರು.
ಬಿಗಿ ಪೊಲೀಸ್ ಬಂದೋಬಸ್ತ್
ಚುನಾವಣೆಯ ಪ್ರಕ್ರಿಯೆಯಲ್ಲಿ ಎಡಿಸಿ ಮಹ್ಮದ್ ಝುಬೇರಾ, ಪಾಲಿಕೆ ಆಯುಕ್ತ ಮಂಜುನಾಥ ಸೇರಿ ಪಾಲ್ಗೊಂಡಿದ್ದರು. ಚುನಾವಣೆ ಹಿನ್ನೆಲೆ ಪಾಲಿಕೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು. ಪಾಲಿಕೆಯ 39 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 21 ಸ್ಥಾನ, ಬಿಜೆಪಿ 13 ಸ್ಥಾನ ಹಾಗೂ ಪಕ್ಷೇತರವಾಗಿ 5 ಸದಸ್ಯರು ಆಯ್ಕೆಯಾಗಿದ್ದಾರೆ. ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷ ಒಟ್ಟು 26 ಸ್ಥಾನ ಹೊಂದಿದೆ. ಪಾಲಿಕೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದರೂ ಪ್ರತಿ ಬಾರಿ ಎದುರಾಗುವ ಮೇಯರ್, ಉಪಮೇಯರ್ ಸ್ಥಾನದ ಚುನಾವಣೆಯಲ್ಲಿ ಕೈಗೆ ಒಮ್ಮತದ ಕೊರತೆ ಕಾಡಿತು.
