ನವದೆಹಲಿ/ಭೋಪಾಲ್‌/ದೇವನಹಳ್ಳಿ [ಮಾ.11]: ಮಧ್ಯಪ್ರದೇಶದ ರಾಜಕೀಯ ಮಂಗಳವಾರ ಮತ್ತೊಂದು ರಾಜಕೀಯ ತಿರುವು ಪಡೆದುಕೊಂಡಿದೆ. ಮಧ್ಯಪ್ರದೇಶದ ಕಾಂಗ್ರೆಸ್‌ ಮುಖಂಡರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಂಗಳವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಬಳಿಕ ಕೆಲವೇ ಹೊತ್ತಿನಲ್ಲಿ ಅವರನ್ನು ಕಾಂಗ್ರೆಸ್‌ ಪಕ್ಷ ಉಚ್ಚಾಟಿಸಿದೆ. ಅವರು ಬಿಜೆಪಿ ಸೇರುವುದು ನಿಚ್ಚಳವಾಗಿದೆ.

ಇದರ ಬೆನ್ನಲ್ಲೇ ಬೆಂಗಳೂರಿನ ದೇವನಹಳ್ಳಿಯ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದ ಅವರ ನಿಷ್ಠರು ಸೇರಿದಂತೆ 22 ಕಾಂಗ್ರೆಸ್‌ ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಲ್ಲಿ 6 ಸಚಿವರು ಸೇರಿದ್ದಾರೆ. ಇದರಿಂದಾಗಿ ಕಮಲ್‌ನಾಥ್‌ ಸರ್ಕಾರ ಮೇಲ್ನೋಟಕ್ಕೆ ಅಲ್ಪಮತಕ್ಕೆ ಕುಸಿದಿದ್ದು, ಪತನ ಭೀತಿ ಎದುರಿಸುತ್ತಿದೆ. ಹೀಗಾಗಿ ಸರ್ಕಾರ ರಚನೆ ಮಾಡಲು ಬಿಜೆಪಿ ಮುಂದಾಗಿದೆ.

ಆದರೆ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದನ್ನು ತಡೆಯಲು ಶತಾಯಗತಾಯ ಯತ್ನ ಮುಂದುವರಿಸಿರುವ ಕಮಲ್‌ನಾಥ್‌, ಬೆಂಗಳೂರಿನಲ್ಲಿರುವ ಸಿಂಧಿಯಾ ನಿಷ್ಠ ಅತೃಪ್ತ ಶಾಸಕರ ಮನವೊಲಿಸಲು ದೂತರನ್ನು ಕಳಿಸಲು ತೀರ್ಮಾನಿಸಿದ್ದಾರೆ. ಒಂದು ವೇಳೆ ಇದು ಕೆಲಸ ಮಾಡದೇ ಹೋದರೆ, ‘ವಿಧಾನಸಭೆಯನ್ನು ವಿಸರ್ಜಿಸಲಾಗುವುದು. ಚುನಾವಣೆಗೆ ಹೋಗಲು ಸಿದ್ಧರಿರಿ’ ಎಂದು ತಮ್ಮ ನಿಷ್ಠ ಶಾಸಕರಿಗೆ ಸೂಚಿಸಿದ್ದಾರೆ.

ಮೋದಿ ಶಾ ಭೇಟಿ:

ಕಾಂಗ್ರೆಸ್‌ನಿಂದ ಬಂಡೆದ್ದಿರುವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ನಾಯಕ ಅಮಿತ್‌ ಶಾರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಅವರು ತಾವು ಕಾಂಗ್ರೆಸ್‌ಗೆ ಸಲ್ಲಿಸಿದ್ದ ರಾಜೀನಾಮೆ ಪತ್ರ ಬಹಿರಂಗಪಡಿಸಿದರು. ಅದರ ಬೆನ್ನಲ್ಲೇ ಬೆಂಗಳೂರಿನ ಬಳಿಯ ದೇವನಹಳ್ಳಿಯ ದೇವನಹಳ್ಳಿ ಸಮೀಪದ ಪ್ರೆಸ್ಟೀಜ್‌ ಗಾಲ್‌್ಫಶೈರ್‌ ರೆಸಾ​ರ್ಟ್‌​ನಲ್ಲಿ ಬೀಡುಬಿಟ್ಟಿರುವ ಸಿಂಧಿಯಾ ನಿಷ್ಠ 19 ಕಾಂಗ್ರೆಸ್‌ ಶಾಸಕರು ಸೇರಿದಂತೆ 22 ಕಾಂಗ್ರೆಸ್‌ ಶಾಸಕರು ಶಾಸಕತ್ವಕ್ಕೆ ರಾಜೀನಾಮೆ ಪ್ರಕಟಿಸಿದರು. ಜೊತೆಗೆ ಸಿಂಧಿಯಾ ಜತೆ ತಾವೂ ಬಿಜೆಪಿ ಸೇರುವುದಾಗಿ ರಾಜೀನಾಮೆ ನೀಡಿದವರು ಹೇಳಿದ್ದಾರೆ. ಇವರಲ್ಲಿ 6 ಸಚಿವರೂ ಇದ್ದಾರೆ.

ಆದರೆ 6 ಸಚಿವರ ರಾಜೀನಾಮೆ ಒಪ್ಪಲು ನಿರಾಕರಿಸಿರುವ ಕಮಲ್‌ನಾಥ್‌, ಇವರನ್ನು ಸಂಪುಟದಿಂದ ವಜಾ ಮಾಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ರಾಜ್ಯಪಾಲ ಲಾಲ್‌ಜಿ ಟಂಡನ್‌ ಹೋಳಿ ನಿಮಿತ್ತ ತವರೂರು ಲಖನೌಗೆ ತೆರಳಿದ್ದು, ಮಾ.12ರಂದು ಭೋಪಾಲ್‌ಗೆ ಆಗಮಿಸುವುದಾಗಿ ಹೇಳಿದ್ದಾರೆ. ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ದೇವನಹಳ್ಳಿ ರೆಸಾರ್ಟ್‌ನಲ್ಲಿ ಸಚಿವರಾದ ತುಳಸೀ ಸಿಲ್ವಾತ್‌, ಗೋವಿಂದ ಸಿಂಗ್‌ ರಜಪೂತ್‌, ಪ್ರದ್ಯುಮ್ನ ಸಿಂಗ್‌ ತೋಮರ್‌, ಇಮಾರತಿ ದೇವಿ, ಪ್ರಭುರಾಮ್‌ ಚೌಧರಿ, ಮಹೇಂದರ್‌ ಸಿಸೋಡಿಯ ಹಾಗೂ ಶಾಸಕರಾದ ಹರ್ದೀಪ್‌ ದಂಗ್‌, ರಾಜ್ಯವರ್ಧನ್‌ ಸಿಂಗ್‌, ಬೀರೇಂದ್ರ ಸಿಂಗ್‌ ಯಾದವ್‌, ಜಸ್ಪಾಲ್‌ ಜಜ್ಜಿ, ಸುರೇಶ್‌ ದಖಡ್‌, ಜಸ್ವಂತ್‌ ಜಾಟವ್‌, ರಕ್ಷಾ ಸಂತ್ರಾಮ್‌ ಸಿರೋನಿಯಾ, ಮುನ್ನಾಲಾಲ್‌ ಗೋಯಲ್‌, ರಣವೀರ್‌ ಜಾಟವ್‌, ಒಪಿಎಸ್‌ ಭದೋರಿಯಾ, ಕಮಲೇಶ್‌ ಜಾಟವ್‌, ಗಿರಿರಾಜ್‌ ದಂಡೋತಿಯಾ, ರಘುರಾಜ್‌ ಕನ್ಸಾನಾ, ಐದಾಲ್‌ಸಿಂಗ್‌ ಕನ್ಸಾನಾ ಹಾಗೂ ಬೈಸಾಹುಲಾಲ್‌ ಸಿಂಗ್‌ ಇದ್ದಾರೆ. ಮಧ್ಯಪ್ರದೇಶದಲ್ಲೇ ಇದ್ದ ಕಾಂಗ್ರೆಸ್‌ ಶಾಸಕ ಮನೋಜ್‌ ಚೌಧರಿ ಕೂಡ ತ್ಯಾಗಪತ್ರ ಸಮರ್ಪಿಸಿದ್ದಾರೆ. ದೇವನಹಳ್ಳಿಯಲ್ಲಿರುವ ಶಾಸಕರ ರಾಜೀನಾಮೆ ಪತ್ರವನ್ನು ಬಿಜೆಪಿ ಮುಖಂಡರು ಮಧ್ಯಪ್ರದೇಶ ವಿಧಾನಸಭೆ ಸಭಾಧ್ಯಕ್ಷರಿಗೆ ಮುಟ್ಟಿಸಿದ್ದಾರೆ.

ಬೆಂಗಳೂರಿನಲ್ಲಿರುವ ಶಾಸಕರು ಖುದ್ದು ರಾಜೀನಾಮೆ ನೀಡದ ಕಾರಣ, ‘ಕಾನೂನಿನಲ್ಲಿನ ಅಂಶಗಳನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಸಭಾಧ್ಯಕ್ಷರು ಹೇಳಿದ್ದಾರೆ.

ನಡ್ಡಾ ಭೇಟಿ:

ದೆಹಲಿಯಲ್ಲೇ ಬೀಡುಬಿಟ್ಟಿರುವ ಸಿಂಧಿಯಾ, ಮಂಗಳವಾರ ಸಂಜೆ ವೇಳೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಬಿಜೆಪಿ ಕಸರತ್ತು:

ಕಾಂಗ್ರೆಸ್‌ನ 22 ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮಂಗಳವಾರ ಸಂಜೆ ಶಿವರಾಜ್‌ ಸಿಂಗ್‌ ಚೌಹಾಣ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂದಿನ ವಿದ್ಯಮಾನ ಗಮನಿಸಿಕೊಂಡು ಸರ್ಕಾರ ರಚನೆ ಹಕ್ಕು ಮಂಡಿಸುವ ಇಂಗಿತವನ್ನು ಸಭೆ ವ್ಯಕ್ತಪಡಿಸಿತು. ಶಾಸಕರಲ್ಲಿ ಹಾಗೂ ಬಿಜೆಪಿ ಕಚೇರಿಯಲ್ಲಿ ಹರ್ಷದ ವಾತಾವರಣ ಕಂಡುಬಂತು. ಕಮಲ್‌ನಾಥ್‌ ಜತೆಗಿದ್ದ ಬಿಎಸ್‌ಪಿ ಹಾಗೂ ಎಸ್‌ಪಿಯ 3 ಶಾಸಕರು ಚೌಹಾಣ್‌ರನ್ನು ಭೇಟಿಯಾಗಿದ್ದು ಕುತೂಹಲ ಕೆರಳಿಸಿತು.

ಕುದುರೆ ವ್ಯಾಪಾರ ತಪ್ಪಿಸಲು ಬಿಜೆಪಿ ತ್ನ ಶಾಸಕರನ್ನು ದಿಲ್ಲಿಗೆ ವಿಶೇಷ ವಿಮಾನದಲ್ಲಿ ಸ್ಥಳಾಂತರಿಸಿದೆ.

ಕಾಂಗ್ರೆಸ್‌ ಪ್ರತಿಪಟ್ಟು:

ಇಷ್ಟೆಲ್ಲ ಆದರೂ ಕಾಂಗ್ರೆಸ್‌ ಸುಮ್ಮನಿಲ್ಲ. ಸರ್ಕಾರ ಉಳಿಸಲು ಸರ್ವಯತ್ನ ಮಾಡೋಣ. ಉರುಳುವ ಪರಿಸ್ಥಿತಿ ಬಂದರೆ ವಿಧಾನಸಭೆ ವಿಸರ್ಜಿಸೋಣ ಎಂದು ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಕಮಲ್‌ನಾಥ್‌ ಹೇಳಿದರು ಎಂದು ಮೂಲಗಳು ಹೇಳಿವೆ. ಆದರೆ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್‌ ವೀಕ್ಷಕಿ ಶೋಭಾ ಓಝಾ, ‘ನಮ್ಮ ಬಳಿ ಈಗ ಪಕ್ಷೇತರರು ಸೇರಿ 94 ಶಾಸಕರು ಇದ್ದಾರೆ. ಸರ್ಕಾರ ಸುರಕ್ಷಿತವಾಗಿದೆ. ಬಿಜೆಪಿ ಯತ್ನ ವಿಫಲಗೊಳಿಸುತ್ತೇವೆ’ ಎಂದಿದ್ದಾರೆ.

ಇದಾದ ನಂತರ ಮತ್ತಷ್ಟುಕುದುರೆ ವ್ಯಾಪಾರ ತಪ್ಪಿಸಲು ಭೋಪಾಲ್‌ನ ರೆಸಾರ್ಟ್‌ ಒಂದಕ್ಕೆ ಕಾಂಗ್ರೆಸ್‌ ತನ್ನ ಶಾಸಕರನ್ನು ಬಸ್ಸಿನಲ್ಲಿ ರವಾನಿಸಿತು. ಬುಧವಾರ ಈ ಶಾಸಕರು ಛತ್ತೀಸ್‌ಗಢ ಅಥವಾ ರಾಜಸ್ಥಾನಕ್ಕೆ ರವಾನೆಯಾಗುವ ಸಾಧ್ಯತೆ ಇದೆ.