Asianet Suvarna News Asianet Suvarna News

Bharat Jodo Yatra: ಮೈಸೂರಿನಿಂದ ಹೆಚ್ಚಿನ ಜನ ಪಾಲ್ಗೊಳ್ಳಿ, ರಾಹುಲ್‌ ಗಾಂಧಿ ಕೈ ಬಲಪಡಿಸಿ - ಸಿದ್ದರಾಮಯ್ಯ ಮನವಿ

ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಪಾದಯಾತ್ರೆ ಮೈಸೂರಿಗೆ ಬಂದ ವೇಳೆ ಹೆಚ್ಚಿನ ಮಂದಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

Join bharat jodo yatra  strengthen Rahul Gandhis hand Siddaramaiah appeals rav
Author
First Published Sep 19, 2022, 12:05 PM IST

ಮೈಸೂರು (ಸೆ.19) : ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಪಾದಯಾತ್ರೆ ಮೈಸೂರಿಗೆ ಬಂದ ವೇಳೆ ಹೆಚ್ಚಿನ ಮಂದಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು. ನಗರದ ಕಾಂಗ್ರೆಸ್‌ ಭವನದ ಆವರಣದಲ್ಲಿ ಭಾನುವಾರ ನಡೆದ ಭಾರತ್‌ ಜೋಡೋ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿ, ಸ್ವಾರ್ಥಕ್ಕಾಗಿ ಅಥವಾ ಅಧಿಕಾರಕ್ಕಾಗಿ ರಾಹುಲ್‌ ಗಾಂಧಿ ಪಾದಯಾತ್ರೆ ಮಾಡುತ್ತಿಲ್ಲ. ಸಾಮಾನ್ಯ ಜನರ ಪರವಾಗಿ ಈ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶವನ್ನು ಹಾಳು ಮಾಡುತ್ತಿದ್ದಾರೆ. ಯುವಕರಿಗೆ ಉದ್ಯೋಗ ಇಲ್ಲದಂತಾಗಿದೆ. ಕೆಲಸಕ್ಕೆ ಲಂಚ ಕೊಡಬೇಕು. ಬೆಲೆ ಏರಿಕೆ. ಸಾಮಾನ್ಯ ಜನರು ಬದುಕಲಾಗದ ಪರಿಸ್ಥಿತಿ ಎದುರಾಗಿದೆ ಎಂಬುದನ್ನು ಅರಿತು ರಾಹುಲ್‌ಗಾಂಧಿ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದರು.

Bharat Jodo Yatra: ಸ್ವಾತಂತ್ರ್ಯ ನಂತರ ನಡೆಯುತ್ತಿರುವ ಅತಿ ದೊಡ್ಡ ಪಾದಯಾತ್ರೆ

ಸ್ವಾತಂತ್ರ್ಯ ನಂತರ ಯಾವುದೇ ಪಕ್ಷ, ನಾಯಕ ಮಾಡದ ಪಾದಯಾತ್ರೆಯನ್ನು ರಾಹುಲ್‌ ಗಾಂಧಿ ಮಾಡುತ್ತಿದ್ದಾರೆ. ಭಾರತ್‌ ಜೋಡೋ ಪಾದಯಾತ್ರೆಯಿಂದ ನಮಗೆ ರಾಜಕೀಯ ಲಾಭ ಇದೆ. ಎಷ್ಟುಜನರನ್ನ ಪಾದಯಾತ್ರೆಗೆ ಕರೆತರುತ್ತಿರೋ ಅಷ್ಟುನಿಮಗೆ ರಾಜಕೀಯವಾಗಿ ಲಾಭ ಆಗುತ್ತದೆ. ಮುಂದಿನ 6 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದೆ. ರಾಹುಲ್‌ ಗಾಂಧಿ ಮೈಸೂರು- ಚಾಮರಾಜನಗರ ಜಿಲ್ಲೆಗಳಿಗೆ ಬಂದಾಗ ಹೆಚ್ಚು ಜನರನ್ನು ಸೇರಿಸಿದರೆ ರಾಜಕೀಯ ಲಾಭ ಆಗುತ್ತದೆ. ಈ ಐತಿಹಾಸಿಕ ಪಾದಯಾತ್ರೆ ಯಶಸ್ವಿಗೊಳಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ಸಾವಿರಕ್ಕಿಂತ ಹೆಚ್ಚಿನ ಜನರನ್ನು ಕರೆತರಬೇಕು ಎಂದು ಹೇಳಿದರು.

ಧರ್ಮ ರಾಜಕಾರಣದಲ್ಲಿ ಹೆಸರಿನಲ್ಲಿ ದೇಶ ಹಾಗೂ ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಎಲ್ಲ ಧರ್ಮವನ್ನು ಸಮಾನವಾಗಿ ಕಾಣಬೇಕು ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರನ್ನು ಮನುಷ್ಯನಾಗಿ ಕಾಣಬೇಕು ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಒಪ್ಪಿಗೆ ಪಡೆದ ಮತಾಂತರ ನಿಷೇಧ ಮಸೂದೆ ಸಂವಿಧಾನ ವಿರೋಧಿ. ಅರ್ಟಿಕಲ್‌ 25 ಯಾವುದೇ ಧರ್ಮ ಪಾಲನೆ ಮಾಡುವ ಹಕ್ಕನ್ನು ಕೊಟ್ಟಿದೆ. ಅದರ ಉಲ್ಲಂಘನೆ ಮಾಡಲಾಗಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಮಾಡಿದ ಕಾನೂನು. ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟಸರ್ಕಾರ ಆಡಳಿತದಲ್ಲಿದೆ. ಭಾರತ ಸರ್ಕಾರದಲ್ಲೂ ಭ್ರಷ್ಟಾಚಾರ ಇದೆ. ಇದು ನಾಚಿಕೆಗೇಡು. ಮಾನ ಮರ್ಯಾದಿ ಗೌರವ ಏನೂ ಇಲ್ಲ. ನಾಚಿಕೆಗೆಟ್ಟಜನ ಎಂದು ಅವರು ಟೀಕಿಸಿದರು.

ರಾಹುಲ್‌ ಗಾಂಧಿ ಅವರ ಪಾದಯಾತ್ರೆಯನ್ನು ಐತಿಹಾಸಿಕವಾಗಿ ಮಾಡಬೇಕು. ಇದು ನಮ್ಮ ಕರ್ತವ್ಯ. ಹಿಂದೆ ನಮ್ಮ ಪಕ್ಷದಿಂದ ಮೇಕೆದಾಟು, ಬಳ್ಳಾರಿ ಪಾದಯಾತ್ರೆ ಸೇರಿದಂತೆ ಸಾಕಷ್ಟುಪಾದಯಾತ್ರೆ ಮಾಡಿದ್ದೇವೆ. ರಾಹುಲ್‌ ಗಾಂಧಿ ಅವರದ್ದು 3500 ಕಿ.ಮೀ ಪಾದಯಾತ್ರೆ. ರಾಜ್ಯದಲ್ಲಿ 510 ಕಿ.ಮೀ ಪಾದಯಾತ್ರೆ ಸಾಗುತ್ತದೆ. ಕಾರ್ಯಕರ್ತರು ಒಂದು ದಿನ ನಡೆಯಲೇ ಬೇಕು ಎಂದು ಅವರು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ವಿಜಯದಶಮಿ ವೇಳೆ ರಾಹುಲ್‌ ಗಾಂಧಿ ನೇತೃತ್ವದ ಪಾದಯಾತ್ರೆ ಮೈಸೂರಿಗೆ ಬರಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ 10 ರಿಂದ 15 ಸಾವಿರ ಜನರನ್ನು ಕರೆತರಬೇಕು. ಕಾರ್ಯಕರ್ತರ ನಡಿಗೆ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.

ಭ್ರಷ್ಟಾಚಾರದ ರಾಜಧಾನಿ ಕರ್ನಾಟಕ ಆಗಿದೆ. ಹೀಗಾಗಿ ರಾಹುಲ್‌ ಗಾಂಧಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪ್ರಸ್ತುತ ಬೆಲೆ ಏರಿಕೆ ಗಗನಕ್ಕೇರಿದೆ. ಆದಾಯ ಪಾತಾಳಕ್ಕೆ ಇಳಿದಿದೆ. ರೈತರ ಬದುಕಿಗೆ ಭದ್ರತೆ ಇಲ್ಲವಾಗಿದೆ. ರಾಹುಲ್‌ ಗಾಂಧಿ ಜೈಲಿಗೆ ಹೋಗಲು ಸಿದ್ಧರಿದ್ದಾರೆ. ಬಿಜೆಪಿಯ ಕಿರುಕುಳಕ್ಕೆ ಅವರು ಹೆದರುವುದಿಲ್ಲ. ಪಿಎಂ ಸ್ಥಾನ ತ್ಯಾಗ ಮಾಡಿದ್ದಾರೆ. ಮುತ್ತಾತ ತಮ್ಮ ಆಸ್ತಿಯನ್ನು ಬರೆದುಕೊಟ್ಟಿದ್ದಾರೆ. ತಾತಾ ಜೈಲಿನಲ್ಲಿದ್ದರು. ಅಜ್ಜಿ ಗುಂಡೇಟಿಗೆ ಬಲಿಯಾದರು. ತಾಯಿ ಪ್ರಧಾನಿ ಸ್ಥಾನ ತ್ಯಾಗ ಮಾಡಿದರು. ಅವರು ಯಾವುದಕ್ಕೂ ಹೆದರುವುದಿಲ್ಲ ಎಂದು ತಿಳಿಸಿದರು.

ಎಲ್ಲರೂ ವಾಕ್‌ ವಿಥ್‌ ರಾಹುಲ್‌ ಗಾಂಧಿ ಎಂದು ಪಾಂಪ್ಲೆಟ್‌ ಹಿಡಿದು ವಾಕ್‌ ಮಾಡಿ. ಅವತ್ತು ಕಾಂಗ್ರೆಸ್‌ ಶಕ್ತಿ ಪ್ರದರ್ಶನ ಮಾಡಬೇಕು. ಯಾರಿಗೂ ನಾನು ನಿದ್ದೆ ಮಾಡಲು ಬಿಡುವುದಿಲ್ಲ. ಪ್ರತಿಯೊಬ್ಬರು ಕೆಲವು ದಿನ ಕಷ್ಟಪಡಿ. ಮುಖ ತೋರಿಸಿ, ತಿಂಡಿ ತಿಂದುಕೊಂಡು ಹೋಗುವುದಲ್ಲ. ಕೊನೆಯವರೆಗೂ ಎಲ್ಲರೂ ಇರಬೇಕು ಎಂದರು.

ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಜಾನ್‌ ರೋಸಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌, ಮಾಜಿ ಸಚಿವರಾದ ವಿನಯ್‌ ಕುಮಾರ್‌ ಸೊರಕೆ, ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್‌, ಶಾಸಕರಾದ ತನ್ವೀರ್‌ ಸೇಠ್‌, ಡಾ. ಯತೀಂದ್ರ ಸಿದ್ದರಾಮಯ್ಯ, ಎಚ್‌.ಪಿ. ಮಂಜುನಾಥ್‌, ಅನಿಲ್‌ ಚಿಕ್ಕಮಾದು, ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್‌, ಕಳಲೆ ಕೇಶವಮೂರ್ತಿ, ಆರ್‌. ಧರ್ಮಸೇನ, ಮುಖಂಡರಾದ ಡಿ. ರವಿಶಂಕರ್‌, ಚಂದ್ರಮೌಳಿ, ಕೆ. ಮರೀಗೌಡ, ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್‌, ಮಂಜುಳಾ ಮಾಸನ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಮೊದಲಾದವರು ಇದ್ದರು.

 

Bharat Jodo Yatra: 18 ಸಮಿತಿಗಳಲ್ಲಿ ದೇಶಪಾಂಡೆಗೆ ಜಾಗವಿಲ್ಲ

ಭಾರತ್‌ ಜೋಡೋಗೆ ತಮಿಳುನಾಡು ಮತ್ತು ಕೇರಳದಲ್ಲಿ ಅಭೂತಪೂರ್ವ ಬೆಂಬಲ ದೊರಕಿದೆ. ಬಹುತ್ವವನ್ನು ರಕ್ಷಿಸಲು, ಬೆಲೆ ಏರಿಕೆ, ತೈಲಬೆಲೆ ಏರಿಕೆ ವಿರುದ್ಧ ರಾಹುಲ್‌ ಗಾಂಧಿ ಪಾದಯಾತ್ರೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ 21 ದಿನ ಪಾದಯಾತ್ರೆ ನಡೆಯಲಿದೆ.

-ಜಾನ್‌ ರೋಸಿ, ಉಸ್ತುವಾರಿ ಕಾರ್ಯದರ್ಶಿ, ಎಐಸಿಸಿ

Follow Us:
Download App:
  • android
  • ios