ಬಾಯನ್ನೇ ಬಂಡವಾಳವಾಗಿಸಿ ಸಿದ್ದರಾಮಯ್ಯ ಸಿಎಂ ಆಗಿದ್ದು: ಸಿ.ಎಂ.ಇಬ್ರಾಹಿಂ
ಬಾಯಿಯ ಬಂಡವಾಳ ಇಟ್ಟುಕೊಂಡೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅವರ ಪರ ಭಾಷಣ ಮಾಡಿದಾಗ ನಮ್ಮ ಬಾಯಿಯೇ ಬಂಡವಾಳ ಆಗಿರಲಿಲ್ಲವೇ ಎಂದು ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ನ.09): ಬಾಯಿಯ ಬಂಡವಾಳ ಇಟ್ಟುಕೊಂಡೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಅವರ ಪರ ಭಾಷಣ ಮಾಡಿದಾಗ ನಮ್ಮ ಬಾಯಿಯೇ ಬಂಡವಾಳ ಆಗಿರಲಿಲ್ಲವೇ ಎಂದು ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ತಿರುಗೇಟು ನೀಡಿದ್ದಾರೆ. ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇಬ್ರಾಹಿಂಗೆ ಬಾಯಿಯೇ ಬಂಡವಾಳ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಪಾದಯಾತ್ರೆಯಲ್ಲಿ ನನ್ನ ಕ್ಯಾಸೆಟ್ ಹಾಕಿಕೊಂಡು ಮತ ಕೇಳಲಿಲ್ಲವೇ? ಸುತ್ತೂರು ಮಠದ ಶ್ರೀಗಳ ಸಹಾಯ ಇಲ್ಲದೆ ವರುಣಾದಲ್ಲಿಯೂ ಜಯ ಗಳಿಸುವುದಿಲ್ಲ. ಸಿದ್ದರಾಮಯ್ಯರನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತಿದೆ. ಅವರಿಗೆ ಸ್ಪರ್ಧಿಸಲು ಕ್ಷೇತ್ರ ಸಿಗುತ್ತಿಲ್ಲ. ಕಾಂಗ್ರೆಸ್‌ಗೆ ಹಲವರು ಬರುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂದು ಹರಿಹಾಯ್ದರು. ಸಿದ್ದರಾಮಯ್ಯ ವಿರುದ್ಧ ಹಲವು ಅಪಾದನೆಗಳು ಇವೆ. ರೀಡೂ, ಹೂಬ್ಲೆಟ್ ವಾಚ್ ಸೇರಿದಂತೆ ಬೇರೆ ಬೇರೆ ಆರೋಪಗಳಿವೆ. ನಮ್ಮ ಮೇಲೆ ಯಾವುದೇ ಆರೋಪಗಳಿಲ್ಲ.
ಬಿಜೆಪಿ-ಕಾಂಗ್ರೆಸ್‌ಗೆ ಗೊತ್ತು ಗುರಿ ಇಲ್ಲ: ಸಿ.ಎಂ.ಇಬ್ರಾಹಿಂ
ನಾನೇನೋ ನಮ್ಮ ಸ್ನೇಹಿತರು ಎಂದು ಇತಿಮಿತಿಯಲ್ಲಿ ಮಾತನಾಡುತ್ತಿದ್ದೇನೆ. ಮುಖ್ಯಮಂತ್ರಿಯಾಗಿದ್ದವರು ಮತ್ತು ವಯಸ್ಸಾಗಿದೆ ಎಂದು ಮಾತನಾಡುತ್ತಿದ್ದೇನೆ. ನನ್ನನ್ನು ಪಕ್ಷದ ಅಧ್ಯಕ್ಷನಾಗಿ ಎಲ್ಲರೂ ಸೇರಿ ಆಯ್ಕೆ ಮಾಡಿದ್ದಾರೆ. ಇನ್ನು, ಕಾಂಗ್ರೆಸ್‌ನಿಂದ ಬರುವವರ ಪಟ್ಟಿಯನ್ನು ಈಗ ಬಿಡುಗಡೆ ಮಾಡುವುದಿಲ್ಲ. ಬಿಡುಗಡೆ ಮಾಡಿದರೆ ಅವರ ಮನೆಗೆ ಹೋಗಿ ಇವರೆಲ್ಲಾ ಗೋಗರೆಯುತ್ತಾರೆ. ಅದಕ್ಕೆ ನಮಗೆ ಆತುರವಿಲ್ಲ. ಡಿಸೆಂಬರ್‌ವರೆಗೆ ಆರಾಮಾಗಿ ಇರುತ್ತೇವೆ. ನಾವೇನು ಪಟ್ಟಿನಾ ಹೈಕಮಾಂಡ್‌ಗೆ ನೀಡಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಚ್‌ಡಿಕೆ ಸಿಎಂ: ಸಿಎಂ ಸ್ಥಾನ ದೇವೇಗೌಡರ ಕುಟುಂಬಕ್ಕೆ ಸೀಮಿತ ಆಗಿದೆಯಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಅವರು ಸಿಎಂ ಆಗಬೇಕು ಎಂದು ಅವರ ಮನೆಗೆ ಹೋದವರು ಯಾರು. ಅವರನ್ನು ಕೆಳಗೆ ಇಳಿಸಿದವರು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಅವರ ಅವಧಿಯಲ್ಲಿ ಮಾಡಬೇಕಿದ್ದ ಕೆಲಸ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸಲಿ ಎಂದು ಕುಮಾರಸ್ವಾಮಿ ಅವರನ್ನೇ ನಾವು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಿಎಂ ಸ್ಥಾನ ನನಗೆ ಅಥವಾ ಮತ್ತೆ ಇನ್ನಾರಿಗಾದರೂ ಸಿಗಬಹುದು ಎಂದರು.
ಬಿಜೆಪಿಯವರಿಂದ ಬಸವಣ್ಣನವರಿಗೆ ಅವಮಾನ: ಜಾತಿ ಆಧಾರದ ಮೇಲೆ ಪಕ್ಷಗಳು ರಾಜಕೀಯ ಮಾಡುತ್ತಿವೆಯಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಕತ್ತಿ, ಕೋರೆ, ಲಿಂಗಾಯತರು. ಅವರು ಬಿಜೆಪಿ ಸೇರಿದ ನಂತರ ಬಿಜೆಪಿಗೆ ಬಲ ಬಂದಿದೆ. ಅವರಿಲ್ಲದಿದ್ದರೆ ಬಿಜೆಪಿ ಬೀಜ ಇಲ್ಲದ ಪಕ್ಷವಾಗುತ್ತದೆ ಎಂದು ವ್ಯಂಗ್ಯವಾಡಿದರು. ಬಿಜೆಪಿಯವರು ಲಿಂಗಾಯತರಿಂದಲೇ ಬೆಳೆದವರು. ಈಗ ಬಸವಕೃಪಾದ ಹೆಸರು ಹೇಳಿ ಕೇಶವಕೃಪಾ ಮಾಡಲು ಹೊರಟ್ಟಿದ್ದಾರೆ. ಅದರಿಂದ ಹೊರಗೆ ಬನ್ನಿ ಎಂದು ನಾವು ಲಿಂಗಾಯತರಿಗೆ ಹೇಳಲು ಹೊರಟ್ಟಿದ್ದೇವೆ. ಬಸವಣ್ಣವರಿಗೆ ಪಠ್ಯಪುಸ್ತಕದಲ್ಲಿ ಅವಮಾನ ಮಾಡಿದವರು ಬಿಜೆಪಿಯವರು ಎಂದು ಹರಿಹಾಯ್ದರು.
ಸಿದ್ದು ನೋಡಿದ್ರೆ ಅಯ್ಯೋ ಅನ್ಸುತ್ತೆ, ಕಾಂಗ್ರೆಸ್‌ನಲ್ಲಿ ಅವ್ರು ತಬ್ಬಲಿ: ಸಿ.ಎಂ.ಇಬ್ರಾಹಿಂ
ನಮ್ಮದು ಸ್ಥಳೀಯ ಪಕ್ಷ: ಮರಾಠರು ಮತ್ತು ಲಿಂಗಾಯತ ಸಮಾಜದ ಜನರನ್ನು ನಮ್ಮೊಟ್ಟಿಗೆ ನಾವು ಕರೆದುಕೊಂಡು ಹೋಗುತ್ತೇವೆ. ಟಿಕೆಟ್ ಹಂಚಿಕೆಯಲ್ಲಿ ಮರಾಠಾ, ಲಿಂಗಾಯತ, ಹಿಂದುಳಿದವರಿಗೆ ಪ್ರಾಮುಖ್ಯತೆ ಕೊಡುತ್ತೇವೆ. ನಮ್ಮದು ರಾಷ್ಟ್ರೀಯ ಪಕ್ಷ ಅಲ್ಲ ಸ್ಥಳೀಯ ಪಕ್ಷ. ರಾಜ್ಯದ ಜನರಿಗಾಗಿ ರಾಜ್ಯದ ಜನರಿಂದಲೇ ಹುಟ್ಟಿರುವ ಪಕ್ಷ. ನಾನು ಜೆಡಿಎಸ್ ಅಧ್ಯಕ್ಷ ಆದ ಬಳಿಕ ಸಭೆಗಳಿಗೆ ಜನರನ್ನು ಕರೆತಂದು ಭಾಷಣ ಮಾಡುವುದಿಲ್ಲ. ಜನರು ತಾವಾಗಿಯೇ ಸಭೆಗೆ ಬರುತ್ತಿದ್ದಾರೆ. ಪಂಚರತ್ನ ಕಾರ್ಯಕ್ರಮವನ್ನು ಜೆಡಿಎಸ್ ಪಕ್ಷ ಆರಂಭಿಸಲಿದೆ. ಎಲ್‌ಕೆಜಿಯಿಂದ ಪಿಜಿವರೆಗೂ ಉಚಿತ ಶಿಕ್ಷಣ, ಪ್ರತಿ ಪಂಚಾಯಿತಿಯಲ್ಲಿ ಹೈಟೆಕ್ ಆಸ್ಪತ್ರೆಗಳು, ಪ್ರತಿಯೊಬ್ಬರಿಗೂ ವಾಸಿಸಲು ಮನೆ, ರಾಜ್ಯದ ಎಲ್ಲ ನೀರಾವರಿ ಯೋಜನೆ ಪೂರ್ಣ, ಮಹಿಳಾ ಸಬಲೀಕರಣ ಈ ಐದೂ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಐದು ವರ್ಷದಲ್ಲಿ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.