ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಜೆಡಿಎಸ್‌ ಕಚೇರಿಯಲ್ಲಿ ಪಕ್ಷದ ನಾಯಕರ ಸಭೆ ನಡೆಯಿತು. 

ಬೆಂಗಳೂರು (ಮಾ.03): ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಜೆಡಿಎಸ್‌ ಕಚೇರಿಯಲ್ಲಿ ಪಕ್ಷದ ನಾಯಕರ ಸಭೆ ನಡೆಯಿತು. ಸಭೆಯಲ್ಲಿ ಪಕ್ಷದ ದ್ವೈವಾರ್ಷಿಕ ಚುನಾವಣೆ, ಸದಸ್ಯತ್ವ ಅಭಿಯಾನ ಹಾಗೂ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ, ವಿಧಾನಮಂಡಲ ಕಲಾಪದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.

ಸದಸ್ಯತ್ವ ನೋಂದಣಿಯನ್ನು ಎಲ್ಲಾ ಮುಖಂಡರು ಗಂಭೀರವಾಗಿ ಪರಿಗಣಿಸಬೇಕು. ಸಂಘಟನೆಯ ಬಗ್ಗೆ ಅಸಡ್ಡೆ ಬೇಡ. ಈ ಹಿಂದೆ 23 ಜಿಲ್ಲೆಗಳು ಇದ್ದವು. ನಾನು ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಪ್ರವಾಸ ಮಾಡಿದ್ದೇನೆ. ಕಷ್ಟಪಟ್ಟು ಪಕ್ಷ ಕಟ್ಟಿದ್ದೇನೆ. ಈಗಲೂ ಓಡಾಟ ಮಾಡುತ್ತಿದ್ದೇನೆ. ಪಕ್ಷ ಕಟ್ಟುವುದು ಸುಲಭದ ಕೆಲಸವಲ್ಲ. ಹೀಗಾಗಿ ಯಾರೊಬ್ಬರೂ ಸಂಘಟನೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ದೇವೇಗೌಡರು ಈ ವೇಳೆ ಮುಖಂಡರಿಗೆ ತಾಕೀತು ಮಾಡಿದರು. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಸಮಾವೇಶಗಳ ಆಯೋಜನೆಯ ಮೂಲಕ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಸಮರ್ಥ ಅಭ್ಯರ್ಥಿಗಳನ್ನು ಹುಡುಕಿ ಪಟ್ಟಿ ಮಾಡಬೇಕು. ನನ್ನನ್ನು ಒಬ್ಬ ಕಾರ್ಯಕರ್ತ ಎಂದು ಕರೆಯಿರಿ. ಎಲ್ಲಿಗೆ ಬೇಕಾದರೂ ಬರುತ್ತೇನೆ. ನಿಮ್ಮ ಜತೆಯಲ್ಲಿ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಬಜೆಟ್‌ ಮೇಲೆ ದೊಡ್ಡ ನಿರೀಕ್ಷೆಯೇನಿಲ್ಲ: ಎಚ್.ಡಿ.ಕುಮಾರಸ್ವಾಮಿ

ಲೋಕಸಭೆ, ವಿಧಾನಸಭೆ ಅಥವಾ ಇನ್ನಾವುದೇ ಚುನಾವಣೆ ಬಂದಾಗ ಮಾತ್ರ ಎಚ್ಚೆತ್ತರೆ ಉಪಯೋಗ ಇಲ್ಲ. ಪಕ್ಷ ಸಂಘಟನೆಗೆ ಶಕ್ತಿ ತುಂಬಿ ಜನರ ಜತೆ ಇದ್ದರೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಬಹುದು. ಇಲ್ಲವಾದರೆ ನಮ್ಮ ಶ್ರಮ ವ್ಯರ್ಥವಾಗುತ್ತದೆ ಎಂದು ಕುಮಾರಸ್ವಾಮಿ ತಿಳಿಸಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಬಿ.ಎಂ.ಫಾರೂಕ್, ಜೆಡಿಎಸ್ ರಾಜ್ಯ ಮಹಿಳಾ ಅಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶೆಂಪೂರ್, ಹೆಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಡಾ. ಕೆ.ಅನ್ನದಾನಿ, ಕೆ.ಎ. ತಿಪ್ಪೇಸ್ವಾಮಿ ಸಭೆಯಲ್ಲಿ ಭಾಗವಹಿಸಿದ್ದರು.