ಕರ್ನಾಟಕದಲ್ಲಿ ಬಿಜೆಪಿ-ದಳ ಮೈತ್ರಿ: ಜೆಡಿಎಸ್ ಮುಖಂಡರಲ್ಲಿ ಚಿಗುರೊಡೆದ ಟಿಕೆಟ್ ಆಸೆ..!
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಮತ್ತೆ ಅಸ್ಥಿತ್ವಕ್ಕೆ ತರಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿಯಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಸತ್ವ ಕಳೆದುಕೊಂಡಿದ್ದ ಜೆಡಿಎಸ್‌ಗೆ ಮತ್ತೆ ಜೀವಕಳೆ ತುಂಬಿದಂತಾಗಿದೆ
ಭರತ್‌ರಾಜ್ ಕಲ್ಲಡ್ಕ
ಉತ್ತರಕನ್ನಡ(ನ.20): ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿಯನ್ನು ಕೇಂದ್ರದಲ್ಲಿ ತರುವ ಉದ್ದೇಶದಿಂದ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಇದು ಉತ್ತರಕನ್ನಡ ಜಿಲ್ಲೆಯಲ್ಲಿ ಬರಡಾಗಿದ್ದ ಜೆಡಿಎಸ್ ಪಾಲಿಗೆ ಓಯಸಿಸ್ ದೊರಕಿದಂತಾಗಿದೆ. ಇಷ್ಟು ದಿನಗಳ ಕಾಲ ಸೈಲೆಂಟಾಗಿದ್ದ ಜೆಡಿಎಸ್ ನಾಯಕರು ಇದೀಗ ಲೋಕಸಭೆ ಚುನಾವಣೆಗೆ ತಾವು ಕೂಡಾ ಆಕಾಂಕ್ಷಿಗಳೆಂದು ಬಿಜೆಪಿ ಹೊಲದಲ್ಲಿ ಬೆಳೆಯಲು ಮುಂದಾಗಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ...
ಹೌದು, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಮತ್ತೆ ಅಸ್ಥಿತ್ವಕ್ಕೆ ತರಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿಯಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಸತ್ವ ಕಳೆದುಕೊಂಡಿದ್ದ ಜೆಡಿಎಸ್‌ಗೆ ಮತ್ತೆ ಜೀವಕಳೆ ತುಂಬಿದಂತಾಗಿದೆ. ರಾಜ್ಯದಲ್ಲಿ ಪಕ್ಷಗಳ ಮೈತ್ರಿ ಹಾಗೂ ಸಂಸದ ಅನಂತ ಕುಮಾರ್ ಹೆಗಡೆಯವರು ಅನಾರೋಗ್ಯದ ಕಾರಣ ಮತ್ತೆ ಸ್ಪರ್ಧಿಸಲ್ಲ ಅನ್ನೋ ವಿಚಾರವೇ ಜಿಲ್ಲೆಯ ಲೋಕಸಭೆ ಟಿಕೆಟ್ ಮೇಲೆ ಎಲ್ಲರ ಕಣ್ಣು ಬೀಳುವಂತೆ ಮಾಡಿದೆ. ಅನಂತ ಕುಮಾರ್ ಹೆಗಡೆ ಸ್ಪರ್ಧೆಗೆ ನಿಂತರೆ ಅವರಿಗೆ ಟಕ್ಕರ್ ನೀಡಲು ಯಾರಿಂದಲೂ ಸಾಧ್ಯವಿರದ ಕಾರಣ, ಅವರು ಮತ್ತೆ ಚುನಾವಣೆಗೆ ನಿಲ್ಲಲ್ಲ ಮಾತು ಅವರ ಬಾಯಿಯಿಂದಲೇ ಹೊರ ಬರಲು ಕಾಯುತ್ತಿರುವವರು ಬಹಳ. ಈ ಕಾರಣದಿಂದಲೇ ಆಕಾಂಕ್ಷಿಗಳು ಅನಂತ ಕುಮಾರ್ ಹೆಗಡೆಯವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿ ಹೊರ ಬರುತ್ತಾರೆ ಹೊರತು ತಮಗೆ ಬೆಂಬಲ ನೀಡಿ ಎಂದು ಹೇಳೋ ಧೈರ್ಯ ಯಾರಿಗೂ ಇಲ್ಲ. ಒಂದು ವೇಳೆ ಕೇಂದ್ರದಿಂದ ಅನಂತ ಕುಮಾರ್ ಹೆಗಡೆಯವರೇ ಸ್ಪರ್ಧಿಸಬೇಕೆಂದು ಆದೇಶ ಬಂದ್ರೆ, ಸಂಸದ ಅನಂತ ಕುಮಾರ್ ಹೆಗಡೆ ಮತ್ತೆ ಕಣಕ್ಕಿಳಿಯುವುದರಲ್ಲಿ ಎರಡು ಮಾತಿಲ್ಲ.
ಉತ್ತರ ಕನ್ನಡ: ಯುವತಿಯ ಕಳ್ಳ ಸಾಗಣೆಗೆ ಯತ್ನ, ಮೂವರ ವಿರುದ್ಧ ದೂರು
ಆದರೆ, ರಾಜ್ಯದಲ್ಲಾದ ಮೈತ್ರಿಯಿಂದಾಗಿ ಇಷ್ಟು ದಿನಗಳ ಕಾಲ ಸೈಲೆಂಟಾಗಿದ್ದ ಜೆಡಿಎಸ್ ನಾಯಕರು ಇದೀಗ ಲೋಕಸಭೆ ಚುನಾವಣೆಗೆ ತಾವು ಕೂಡಾ ಆಕಾಂಕ್ಷಿಗಳೆಂದು ಬಿಜೆಪಿ ಹೊಲದಲ್ಲಿ ಬೆಳೆಯಲು ಮುಂದಾಗಿದ್ದಾರೆ. ಬಿಜೆಪಿ- ಜೆಡಿಎಸ್ ಮೈತ್ರಿಯಾದ ಬಳಿಕ ಸಂಪೂರ್ಣ ಬದಲಾದ ಹೇಳಿಕೆ ನೀಡುತ್ತಿರುವ ಆನಂದ್ ಆಸ್ನೋಟಿಕರ್, ನಾನು ಲೋಕಸಭೆ ಚುನಾವಣೆಯ ಆಕಾಂಕ್ಷಿ ಎಂದು ಹಿಂದಿನಿಂದಲೂ ಹೇಳ್ತಾ ಬಂದಿದ್ದೇನೆ. ನಾನು ಮೋದಿಯವರ ಅಭಿಮಾನಿ ಎಂದು ಅಂದಿನಿಂದ ಹೇಳಿದ್ದು, ಅವರ ವಿರುದ್ಧ ಯಾವ ವಿಷಯಾನೂ ಮಾತನಾಡಿಲ್ಲ.
ನಮ್ಮ ರಾಷ್ಟ್ರ ಉಳಿಬೇಕಾದ್ರೆ, ಅಭಿವೃದ್ಧಿಗೆ ಪ್ರಧಾನಿ ಮೋದಿಯವರ ಅವಶ್ಯಕತೆಯಿದೆ ಎಂದಿದ್ದಾರೆ. ಅಂದಹಾಗೆ, ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ ತೊರೆಯುವ ನಿರ್ಧಾರ ಮಾಡಿದ್ದ ಮಾಜಿ ಸಚಿವ ಆನಂದ್ ಆಸ್ನೋಟಿಕರ್, ಬಳಿಕ ಬಿಜೆಪಿ ಕದ ತಟ್ಟಿದ್ದರು. ಆದರೆ, ಯಾವುದೇ ಪ್ರಯೋಜನವಿಲ್ಲ ಎಂದು ತಿಳಿದು ನಂತರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹಾಲಿ ಶಾಸಕ ಸತೀಶ್ ಸೈಲ್ ಅವರಿಗೆ ಬೆಂಬಲ ನೀಡಿ, ಅವರ ಗೆಲುವಿಗೆ ಕಾರಣರಾಗಿದ್ದರು. ಮೊನ್ನೆಯವರೆಗೆ ಕಾಂಗ್ರೆಸ್‌ನಿಂದಲೇ ಆನಂದ್ ಆಸ್ನೋಟಿಕರ್ ಲೋಕಸಭಾ ಚುನಾವಣೆಗೆ ಇಳಿಯುತ್ತಾರೆ ಎಂದು ಹೇಳಲಾಗಿತ್ತಾದರೂ, ಎಲ್ಲಿಯೂ ಕಾಲೂರಲಾಗದೇ ರಾಜಕೀಯ ಭವಿಷ್ಯ ಮುಗಿಯಿತು ಎಂಬ ಅಭಿಪ್ರಾಯಗಳು ಕೇಳಿಬಂದಿತ್ತು.
ಆದರೆ, ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯಾದ ಬಳಿಕ ಉತ್ತರಕನ್ನಡ ಜಿಲ್ಲೆಯ ಬರಡಾದ ಜೆಡಿಎಸ್ ಭೂಮಿಯಲ್ಲಿ ಓಯಸಿಸ್ ಕಂಡ ಆನಂದ್, ಮಾಜಿ ಸಿಎಂ ಕುಮಾರ ಸ್ವಾಮಿಯವರನ್ನು ಮತ್ತೆ ಭೇಟಿಯಾಗಿ ಪಕ್ಷದಲ್ಲಿದ್ದುಕೊಂಡೇ ಜೆಡಿಎಸ್ ಬಲಪಡಿಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ಜಿಲ್ಲೆಯ ಪಾಲಿಗೆ ಜೆಡಿಎಸ್ ಟಿಕೆಟ್ ದೊರಕಿದರೇ ತನ್ನ ಪಾಲಿಗೆ ದೊರೆಯುವುದು ಖಂಡಿತ ಎಂಬ ಪ್ಲ್ಯಾನಿಂಗ್ ಹಾಕಿ ಕುಳಿತಿದ್ದಾರೆ.
ಸಂಸದ ಅನಂತ ಕುಮಾರ್ ಹೆಗಡೆಯವರ ಜತೆ ಉತ್ತಮ ಬಾಂಧವ್ಯವಿದ್ದು, ಅವರು ನನ್ನ ಸಹೋದರರಂತೆ. ಅನಂತ ಕುಮಾರ್ ಹೆಗಡೆಯವರು ಚುನಾವಣೆಗೆ ನಿಲ್ಲೋದಾದ್ರೆ ನಾನು ಆಕಾಂಕ್ಷಿಯಲ್ಲ. ಆದರೆ, ಅನಂತ ಕುಮಾರ್ ಹೆಗಡೆಯವರು ಚುನಾವಣೆಗೆ ನಿಲ್ಲದಿದ್ರೆ ಮಾತ್ರ ನಾನು ಕೂಡಾ ಒಬ್ಬ ಚುನಾವಣಾ ಆಕಾಂಕ್ಷಿ ಎಂದಿದ್ದಾರೆ. ಅಲ್ಲದೇ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಿದ್ದ ಆನಂದ್, ಇದೀಗ ಕಾಂಗ್ರೆಸ್ ವಿರುದ್ಧವಾಗಿಯೇ ಚಾಟಿ ಬೀಸಿದ್ದಾರೆ. ಇನ್ನು ಕಳೆದ ವಿಧಾನಸಭಾ ಚುನಾವಣೆಯ ವೇಳೆ ಜೆಡಿಎಸ್‌ನಲ್ಲಿದ್ದುಕೊಂಡೇ ಮಾಜಿ ಸಿಎಂ ಕುಮಾರಸ್ವಾಮಿ ಜತೆ ಜಿಲ್ಲೆಯಾದ್ಯಂತ ಓಡಾಡಿದ್ದ ಕುಮಟಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ್ ಸೋನಿ ಕೂಡಾ ಟಿಕೆಟ್‌ಗಾಗಿ ತಾನು ಕೂಡಾ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದಾರೆ.
ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ ಮುಸ್ಲಿಂ ಸಂಘಟನೆಗಳಿಂದ ಮೌನ ಪ್ರತಿಭಟನೆ
ಸೂರಜ್ ನಾಯ್ಕ್ ಸೋನಿ ಕುಮಟಾ ಬಿಜೆಪಿ ಶಾಸಕ ದಿನಕರ ಶೆಟ್ಟಿ ವಿರುದ್ಧ ಕೇವಲ 676 ಮತಗಳಿಂದ ಸೋಲು ಕಂಡಿದ್ದರು. ಜಿಲ್ಲೆಯಾದ್ಯಂತ ನಾನು ಓಡಾಡಿದ್ದು, ಜನರು ನನ್ನನ್ನು ಗುರುತಿಸುತ್ತಾರೆ. ಅನಂದ್ ಕೂಡಾ ಪ್ರಯತ್ನಿಸುತ್ತಿದ್ದು, ಅವರಿಗೂ ಆಲ್ ದ ಬೆಸ್ಟ್. ನನಗೂ ಅರ್ಹತೆಯಿದೆ, ಗೆಲ್ಲುವ ಕೆಪಾಸಿಟಿ ಕೂಡಾ ಇದೆ. ನಾನ್ಯಾಕೆ ನಿಲ್ಲಬಾರದು..? ಕುಮಾರಸ್ವಾಮಿಯರು ಯಾವ ನಿರ್ಧಾರ ಅದಕ್ಕೆ ಬದ್ಧವಾಗಿದ್ದೇನೆ ಎಂದು ಸೂರಜ್ ನಾಯ್ಕ್ ಸೋನಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಹೈಕಮಾಂಡ್ ಈ ಬಾರಿ ಮತ್ತೆ ಸಂಸದ ಅನಂತ ಕುಮಾರ್ ಹೆಗಡೆಯವರೇ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಹೇಳುತ್ತಾ ಅಥವಾ ರಾಜ್ಯದ ಮೈತ್ರಿಗೆ ಆದ್ಯತೆ ನೀಡಿ ಉತ್ತರಕನ್ನಡವನ್ನು ಜೆಡಿಎಸ್ ಮಡಿಲಿಗೆ ಹಾಕುತ್ತಾ ಅನ್ನೋದು ಮುಂದಿರುವ ಪ್ರಶ್ನೆ. ಆದರೆ, ರಾಜ್ಯದ ಮೈತ್ರಿಯ ಬೆಳವಣಿಗೆ ಮಾತ್ರ ಜೆಡಿಎಸ್ ಮುಖಂಡರಲ್ಲಿ ಮತ್ತೆ ಆಸೆಯ ಚಿಗುರು ಮೂಡಿಸಿರುವುದರಲ್ಲಿ ಎರಡು ಮಾತಿಲ್ಲ.