'ದೇವೇಗೌಡ್ರು ಅನುಮತಿ ಕೊಟ್ರೆ ರಾಜಭವನಕ್ಕೆ ರೈತರ ಪಾದಯಾತ್ರೆ'
ಒಂದೆಡೆ ರೈತರು ಕೃಷಿ ಕಾಯ್ದೆ ವಿರುದ್ಧ ಬೀದಿಗಳಿದು ಹೋರಾಟ ಮಾಡುತ್ತಿದ್ರೆ, ಇತ್ತ ಜೆಡಿಎಸ್ ನೀರಿಗಾಗಿ ಪಾದಯಾತ್ರೆ ಸುಳಿವು ಕೊಟ್ಟಿದೆ.
ರಾಯಚೂರು, (ಫೆ.10): ಸಮುದಾಯದ ಹಿತಕ್ಕಾಗಿ ಪಾದಯಾತ್ರೆ ಮಾಡುವ ಬದಲು ರೈತರ ಹಿತಕ್ಕೆ ಹೋರಾಟ ಮಾಡಬೇಕಿದೆ. ದೇವೇಗೌಡರು ಅನುಮತಿ ನೀಡಿದ್ರೆ ನೀರಾವರಿಗಾಗಿ ಪಾದಯಾತ್ರೆಗೆ ನಾವು ಸಿದ್ದರಿದ್ದೇವೆ ಎಂದು ಜೆಡಿಎಸ್ ಮುಖಂಡ ವೈಎಸ್ ವಿ ದತ್ತಾ ಹೇಳಿದ್ದಾರೆ.
ಜಿಲ್ಲೆಯ ದೇವದುರ್ಗದಲ್ಲಿ ಆಯೋಜಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ವೈಎಸ್ ವಿ ದತ್ತಾ, ರಾಜ್ಯದಲ್ಲಿ ಮೀಸಲಾತಿ ಪಾದಯಾತ್ರೆ ಮಾಡುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ನಾವು ಪಾದಯಾತ್ರೆ ಮಾಡಲು ನಾವು ಸಿದ್ದರಿದ್ದೇವೆ. ಕೃಷ್ಣ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
'ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ದರೆ ಎಲ್ಲವನ್ನು ರೈತರಿಗೆ ಬರೆದು ಕೊಡುತ್ತಿದ್ದೆ'
ಸುಪ್ರೀಂ ಕೋರ್ಟ್ ನಲ್ಲಿ ಎಸ್ ಎಲ್ ಪಿ ಅರ್ಜಿ ವಿಲೆವಾರಿ ಮಾಡಿ ಯೋಜನೆಯ ಲಾಭ ರೈತರಿಗೆ ಸಿಗುವಂತೆ ಮಾಡುವ ಕಡೆ ಕೇಂದ್ರ ಸರ್ಕಾರ ಮುಂದಾಗಬೇಕು ಅನ್ನೋದು ನಮ್ಮ ಆಗ್ರಹ ಎಂದರು.
ರಾಜಭವನದವರೆಗೂ ಪಾದಯಾತ್ರೆ
ಬಸವ ಜಯಂತಿ ದಿನದಿಂದ ಬಸವಕಲ್ಯಾಣದಿಂದ ಬೆಂಗಳೂರಿನ ರಾಜಭವನದವರೆಗೂ ಪಾದಯಾತ್ರೆ ಮಾಡೋಣ. ಕೇಂದ್ರ ಸರ್ಕಾರ ಕೃಷ್ಣ ಮೇಲ್ದಂಡೆ ಯೋಜನೆ ಲಾಭ ರೈತರಿಗೆ ಸಿಗುವಂತೆ ಮಾಡಲು ಆಗ್ರಹಿಸೋಣ. ಪಾದಯಾತ್ರೆಯನ್ನ ಉದ್ಘಾಟಿಸುವ ಅರ್ಹತೆಯಿರುವ ಏಕೈಕ ವ್ಯಕ್ತಿ ಮಾಜಿ ಪ್ರಧಾನಿ ದೇವೇಗೌಡ. ದೇವೇಗೌಡರು ಅನುಮತಿ ನೀಡಿದರೆ ಪಾದಯಾತ್ರೆ ಎಲ್ಲಾ ರೈತರು ಸಿದ್ದರಾಗೋಣ ಎಂದು ತಿಳಿಸಿದರು.
ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಲಾಗಿದೆ. ಜೇನು ತುಪ್ಪದ ಬಾಟಲಿ ಮೇಲೆ ಕಿಡಿಗೇಡಿಗಳು ವಿಷದ ಬಾಟಲಿ ಅಂತ ಸ್ಟಿಕರ್ ಅಂಟಿಸಿದಂತೆ,ಉತ್ತಮ ಕೆಲಸ ಮಾಡಿದ ದೇವೇಗೌಡರಿಗೆ ಲಿಂಗಾಯತ ವಿರೋಧಿ ಪಟ್ಟ ಕಟ್ಟಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇವೇಗೌಡರು ಜಿಲ್ಲೆಗೆ ಎನ್ ಆರ್ ಬಿ ಸಿ ತಂದಿದ್ದಕ್ಕೆ ದೇವದುರ್ಗದ ಗಾಣಧಾಳ ಗ್ರಾಮದ ರೈತ ಪ್ರಭಾಕರ್ ರೆಡ್ಡಿ ದೇವೇಗೌಡರ ಪ್ರತಿಮೆ ಮಾಡಿ ಪೂಜಿಸುತ್ತಿದ್ದಾನೆ. ಆ ರೈತನ ಅಭಿಮಾನವೇ ಇಂದಿನ ಕಾರ್ಯಕ್ರಮ ಆಯೋಜನೆಗೆ ಕಾರಣವಾಗಿದೆ ಎಂದು ಹೇಳಿದರು.