ಸಿದ್ದು, ಡಿಕೆಶಿ ಸಮ್ಮುಖದಲ್ಲಿ ಹಲವು ನಾಯಕರು ಕಾಂಗ್ರೆಸ್‌ ಸೇರ್ಪಡೆ, 50 ವರ್ಷದ ನಂತರ ಅನಿವಾರ್ಯವಾಗಿ ಪಕ್ಷ ಬದಲಿಸುತ್ತಿರುವೆ: ವೈಎಸ್‌ವಿ ದತ್ತ

ಬೆಂಗಳೂರು(ಜ.15):  ಜೆಡಿಎಸ್‌ ಹಿರಿಯ ನಾಯಕ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ (ವೈಎಸ್‌ವಿ ದತ್ತ) ಹಾಗೂ ಮುಳಬಾಗಿಲು ಪಕ್ಷೇತರ ಶಾಸಕ, ಮಾಜಿ ಸಚಿವ ಎಚ್‌.ನಾಗೇಶ್‌ ಅವರು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ವೈಎಸ್‌ವಿ ದತ್ತ, ಎಚ್‌.ನಾಗೇಶ್‌, ಮೈಸೂರಿನ ಬಿಜೆಪಿ ಮುಖಂಡ ಹಾಗೂ ಮೂಡಾ ಮಾಜಿ ಅಧ್ಯಕ್ಷ ಮೋಹನ್‌ ಕುಮಾರ್‌, ಕೋಲಾರ ಜೆಡಿಎಸ್‌ ನಾಯಕ ದಯಾನಂದ್‌ ಅವರಿಗೆ ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ನ ಹಿರಿಯ ನಾಯಕ ದತ್ತ, ಮುಳಬಾಗಿಲು ಹಾಲಿ ಶಾಸಕ ಎಚ್‌.ನಾಗೇಶ್‌ ಅವರು ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರ್ಪಡೆಯಾಗಿದ್ದಾರೆ. ರಾಜ್ಯ ಅತಂತ್ರವಾದ ಸ್ಥಿತಿಯಲ್ಲಿ ಇದೆ. ಜನರಿಗೆ ಆಡಳಿತ ಪಕ್ಷದ ಮೇಲೆ ವಿಶ್ವಾಸ ಕಡಿಮೆಯಾಗುತ್ತಿದೆ. ಹೀಗಾಗಿ ಜನ ವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಪ್ರಜಾಪ್ರಭುತ್ವವಾದಿ ನಾಯಕರು ಕೈಜೋಡಿಸುತ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ 25 ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲಲ್ಲ: ಕೆ.ಎಸ್‌.ಈಶ್ವರಪ್ಪ

ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್‌ ಪಕ್ಷ ಮಾತ್ರ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತರಿಗೆ ರಕ್ಷಣೆ ನೀಡಲು ಸಾಧ್ಯ. ಇದನ್ನು ಅರ್ಥ ಮಾಡಿಕೊಂಡು ಯಾವುದೇ ಷರತ್ತು ಇಲ್ಲದೆ ಜೆಡಿಎಸ್‌, ಬಿಜೆಪಿಯಿಂದ ನಾಯಕರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾವೆಲ್ಲರೂ ಸೇರಿ ಕೋಮುವಾದ ಪಕ್ಷವನ್ನು ಸೋಲಿಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

ಐತಿಹಾಸಿಕ ತುರ್ತಿನಿಂದ ವಿದಾಯ-ದತ್ತ:

ವೈಎಸ್‌ವಿ ದತ್ತ ಮಾತನಾಡಿ, ಇದು ಮಾತನಾಡುವ ಸಮಯವಲ್ಲ. ಕೆಲಸ ಮಾಡುವ ಸಮಯ. ನಾನು ಐವತ್ತು ವರ್ಷದಿಂದ ಒಂದೇ ಪರಿವಾರದಲ್ಲಿ ಕೆಲಸ ಮಾಡಿದ್ದೇನೆ. ಅಷ್ಟುವರ್ಷ ಒಂದೇ ಪರಿವಾರದಲ್ಲಿದ್ದವನು ಈಗ ಪಕ್ಷ ಬದಲಿಸುತ್ತಿದ್ದೇನೆ ಎಂದರೆ ಅಂದರೆ ಅಂತಹ ಐತಿಹಾಸಿಕ ತುರ್ತು, ಅನಿವಾರ್ಯತೆ ಇಂದು ಉಂಟಾಗಿದೆ. ಸಂವಿಧಾನ, ಜಾತ್ಯತೀತತೆಯನ್ನು ಬುಡಮೇಲು ಮಾಡಲು ಹೊರಟಿರುವ ಶಕ್ತಿ ಹಾಗೂ ಪಕ್ಷವನ್ನು ನಾವು ಸಂಘಟಿತರಾಗಿ ಹೋರಾಡಿ ಸೋಲಿಸಬೇಕಿದೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಹೆಬ್ಬಾಳ ಶಾಸಕ ಬೈರತಿ ಸುರೇಶ್‌ ಸೇರಿ ಹಲವರು ಹಾಜರಿದ್ದರು.