Asianet Suvarna News Asianet Suvarna News

ಕಾಂಗ್ರೆಸ್‌ನಿಂದ ದಲಿತರಿಗೆ ಸಾಕಷ್ಟು ಅನ್ಯಾಯ, ಅಂಬೇಡ್ಕರ್‌ಗೆ ಮೋಸ: ಕೆ.ಅನ್ನದಾನಿ

ಕೇವಲ ಮತ ಬ್ಯಾಂಕ್ ಆಗಿ ಮಾಡಿಕೊಂಡಿರುವ ಕಾಂಗ್ರೆಸ್‌ನಿಂದ ದಲಿತರಿಗೆ ಸಾಕಷ್ಟು ಅನ್ಯಾಯವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್‌ಗೂ ಸಾಕಷ್ಟು ಮೋಸವಾಗಿದೆ ಎಂದು ಜೆಡಿಎಸ್ ಎಸ್ಸಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಕೆ.ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು. 

JDS Leader K Annadani Slams On Congress At Mandya gvd
Author
First Published Apr 10, 2024, 7:50 PM IST

ಮಳವಳ್ಳಿ (ಏ.10): ಕೇವಲ ಮತ ಬ್ಯಾಂಕ್ ಆಗಿ ಮಾಡಿಕೊಂಡಿರುವ ಕಾಂಗ್ರೆಸ್‌ನಿಂದ ದಲಿತರಿಗೆ ಸಾಕಷ್ಟು ಅನ್ಯಾಯವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್‌ಗೂ ಸಾಕಷ್ಟು ಮೋಸವಾಗಿದೆ ಎಂದು ಜೆಡಿಎಸ್ ಎಸ್ಸಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಕೆ.ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಕನಕಪುರ ರಸ್ತೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಎಸ್ಸಿ, ಎಸ್ಟಿ ಕಾರ್ಯಕರ್ತರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್‌ನ ವಿರೋಧ ಮಾಡುವುದಕ್ಕೆ ಕಾಂಗ್ರೆಸ್‌ಗೆ ಬೇರೆ ಯಾವುದೇ ವಿಚಾರವಿಲ್ಲದೇ ಯಾರು ಸಂವಿಧಾನ ಬದಲಾವಣೆ ಬಗ್ಗೆ ಹೇಳಿರುವ ಮಾತನ್ನೇ ಜನರಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ದಲಿತ ಸಮುದಾಯ ಅಭಿವೃದ್ಧಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಅನೇಕ ಕೊಡುಗೆ ಅರಿತು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತ ನೀಡಬೇಕು ಎಂದು ಕರೆ ನೀಡಿದರು. ಕಳೆದ ಹತ್ತು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ದಲಿತರಿಗೆ ಒಂದೇ ಒಂದು ವಿಶೇಷ ಯೋಜನೆ ನೀಡಿಲ್ಲ. ಅಲ್ಲದೇ, ದಲಿತರ ಅಭಿವೃದ್ಧಿಗೆ ಇಟ್ಟಿರುವ 11 ಸಾವಿರ ಕೋಟಿ ರು. ಅನುದಾನವನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿಕೊಂಡು ದಲಿತರಿಗೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಯನ್ನು ನಿರ್ಲಕ್ಷ್ಯಿಸಬೇಡಿ: ಸಚಿವ ಚಲುವರಾಯಸ್ವಾಮಿ

ಸಂವಿಧಾನದ ಮೂಲಕ ಸರ್ವರಿಗೂ ಸಮಪಾಲು ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮೋಸ ಮಾಡಿದ್ದು ಕಾಂಗ್ರೆಸ್ಸಿಗರು. ದಲಿತರ ಮತ ಕೇಳುವ ಅಧಿಕಾರ ಕಾಂಗ್ರೆಸ್ ಇಲ್ಲ ಎಂದು ಕಿಡಿಕಾರಿದರು. ಬಾಬಾ ಸಾಹೇಬರ ಪಂಚ ತೀರ್ಥಗಳನ್ನು ಅಭಿವೃದ್ಧಿ ಮಾಡಲು ಪ್ರಧಾನಿ ಮೋದಿ ಅವರೇ ಬರಬೇಕಿತ್ತು. ಆದರೆ, 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ 94 ಬಾರಿ ಸಂವಿಧಾನದ ತಿದ್ದುಪಡಿ ಮಾಡಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಒಮ್ಮೆಯು ಇಂಥ ಕೆಲಸ ಮಾಡಿಲ್ಲ ಎನ್ನುವುದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು ಎಂದರು.

50 ವರ್ಷಗಳಿಂದ ಮೀಸಲು ಕ್ಷೇತ್ರವಾಗಿರುವ ಮಳವಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಮಾಡಿದ್ದು ನಾನು. ದಲಿತರ ಬಗ್ಗೆ ಅಪಾರ ಪ್ರೀತಿ ಇರುವಂತೆ ಮಾತನಾಡುವ ಈಗಿನ ಶಾಸಕರಿಗೆ ಅದನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು. ಮಲ್ಲಿಕಾರ್ಜುನ್ ಖರ್ಗೆ ಹಾಗೂ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದಾಗ ಧ್ವನಿ ಎತ್ತದ ವ್ಯಕ್ತಿ ನಿಜವಾದ ದಲಿತ ವಿರೋಧಿ ಎಂದು ಶಾಸಕರ ಹೆಸರೇಳದೇ ವಾಗ್ದಾಳಿ ನಡೆಸಿದರು. ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ದಲಿತರ ಬೃಹತ್ ಸಮಾವೇಶ ಆಯೋಜನೆ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಬಿಜೆಪಿಯ ಜೊತೆಗೂಡಿ 10 ಸಾವಿರಕ್ಕೂ ಅಧಿಕ ಮಂದಿಯನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮ ಮಾಡಿ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಲಾಗುವುದು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಮಾತನಾಡಿ, ದಲಿತರ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ಗೆದ್ದು ಕೇಂದ್ರದಲ್ಲಿ ಸಚಿವ ಸ್ಥಾನ ಅಲಂಕರಿಸಲಿದ್ದಾರೆ. ಜಿಲ್ಲೆಯ ಎಲ್ಲ ಸಮುದಾಯಗಳ ಜನರು ಮೈತ್ರಿಯ ಪರವಾಗಿದ್ದು, ಸರಳ ವ್ಯಕ್ತಿತ್ವದ ಉತ್ತಮ ಆಡಳಿತಗಾರ ಕುಮಾರಸ್ವಾಮಿ ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ ಮಾತನಾಡಿ, 1947ರಿಂದಲೂ ದಲಿತರನ್ನು ಮತಬ್ಯಾಂಕ್ ಮಾಡಿಕೊಂಡಿರುವ ಕಾಂಗ್ರೆಸ್ ದಲಿತ ಸಮುದಾಯಕ್ಕೆ ಯಾವುದೇ ರೀತಿಯ ಸವಲತ್ತು ನೀಡದೇ, ಯಾವುದೇ ಒಬ್ಬರನ್ನು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಗುರುತಿಸುವಂಥ ನಾಯಕತ್ವವನ್ನು ನೀಡಿಲ್ಲ. ದಲಿತರನ್ನು ಬರೀ ಮತವಾಗಿ ಮಾತ್ರ ಪರಿಗಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಕನಸಿರುವಾಗ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ ಎಂದು ಹೇಳಿದರು.

Lok Sabha Election 2024: ನುಡಿದಂತೆ ನಡೆದಿದ್ದೇವೆ ಮತ ನೀಡಿ: ಶಾಸಕ ಕೊತ್ತೂರು ಮಂಜುನಾಥ್

ಈ ವೇಳೆ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಜೆಡಿಎಸ್ ಎಸ್ಸಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸಾತನೂರು ಜಯರಾಮು, ತಾಲೂಕು ಘಟಕದ ಅಧ್ಯಕ್ಷ ಕಾಂತರಾಜು, ಬಿಜೆಪಿಯ ಚಿಕ್ಕಣ್ಣ, ಮುಖಂಡರಾದ ದೇವರಾಜು, ಸಿ.ಕೆ.ಪಾಪಯ್ಯ, ಸುಹಾಷ್ ಮಹದೇವಯ್ಯ, ದೋರನಹಳ್ಳಿ ಕುಮಾರಸ್ವಾಮಿ, ಚಿಕ್ಕಣ್ಣ, ಪುರಸಭೆ ಸದಸ್ಯರಾದ ಸಿದ್ದರಾಜು, ಟಿ.ನಂದಕುಮಾರ್ ಇದ್ದರು.

Follow Us:
Download App:
  • android
  • ios