ಅಭಿಮಾನಿಗಳತ್ತ ನಿಂಬೆ ಹಣ್ಣು ಉರುಳಿಸುತ್ತಾ ರಹಸ್ಯವೊಂದನ್ನು ಹೇಳಿದ ರೇವಣ್ಣ
* ಮತ್ತೆ ಕೈಯಲ್ಲಿ ನಿಂಬೆಹಣ್ಣು ಹಿಡಿದು ಬಂದ ರೇವಣ್ಣ
* ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿಂಬೆಹಣ್ಣು ವಿತರಣೆ
* ರೇವಣ್ಣ ನಿಂಬೆಹಣ್ಣು ನೀಡುತ್ತಿರುವುದನ್ನು ನೋಡಿ ನಗೆಬೀರಿದ್ರು ಶಾಸಕ ಶಿವಲಿಂಗೇಗೌಡ.
ಹಾಸನ, (ಫೆ.11): ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಹಾಗೂ ನಿಂಬೆಹಣ್ಣಿಗೂ (Lemon) ಏನೋ ಒಂದು ಅವಿನಾಭಾವ ಸಂಬಂಧವಿದ್ದಂತೆಯ.ಶುಭ ಸಂಭ್ರಮದ ಸಮಯ ಅಂತಲ್ಲ, ಕಷ್ಟದ ಸಮಯ ಅಂತಲ್ಲ. ಎಲ್ಲಾ ಸಮಯದಲ್ಲೂ ಅವರು ನಿಂಬೆ ಹಣ್ಣಿನ ಮೊರೆ ಹೋಗ್ತಾರೆ. ಸದ್ಯ ಈಗ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ರೇವಣ್ಣ ನಿಂಬೆಹಣ್ಣು ವಿತರಿಸಿದ್ದಾರೆ.
ಹೌದು..ಜಿಲ್ಲೆಯ ಅರಸೀಕೆರೆ ತಾಲೂಕಿನ ನಾಗರಹಳ್ಳಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ರೇವಣ್ಣ ವೇದಿಕೆ ಮೇಲಿಂದ ನಿಂಬೆ ಹಣ್ಣು ಉರುಳಿಸಿದ್ದಾರೆ. ಶಾಸಕ ಶಿವಲಿಂಗೇಗೌಡರು ರೇವಣ್ಣಗೆ ಒಂದಷ್ಟು ಲಿಂಬೆಹಣ್ಣುಗಳನ್ನು ನೀಡಿದ್ದಾರೆ. ಆ ಲಿಂಬೆಹಣ್ಣುಗಳನ್ನು ರೇವಣ್ಣ ಒಂದೊಂದಾಗಿ ಅಭಿಮಾನಿಗಳತ್ತ ಎಸೆದಿದ್ದು, ಅದನ್ನು ಅಭಿಮಾನಿಗಳು ಸಂಭ್ರಮದಿಂದಲೇ ಸ್ವೀಕರಿಸಿದರು. ಅಲ್ಲದೇ ರೇವಣ್ಣ ನಿಂಬೆಹಣ್ಣು ನೀಡುತ್ತಿರುವುದನ್ನು ನೋಡಿ ಶಾಸಕ ಶಿವಲಿಂಗೇಗೌಡ ನಗೆಬೀರಿದ್ರು.
ರೇವಣ್ಣರ ನಿಂಬೆಹಣ್ಣು ಕೆಲಸ ಮಾಡಿಲ್ಲ! ಸರ್ಕಾರ ಪತನಕ್ಕೆ ಬಿಜೆಪಿ ನಾಯಕ ವ್ಯಂಗ್ಯ
ಈ ವೇಳೆ ಮಾತನಾಡಿರುವ ರೇವಣ್ಣ, ಚುನಾವಣೆ ಸಂದರ್ಭದಲ್ಲಿ ತಮ್ಮ ಹಿಂದಿರುವ ದೇವರ ಕುರಿತು ಹೇಳಿಕೊಂಡಿದ್ದಾರೆ. ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿಯನ್ನು ನಂಬಿ ಕೆಟ್ಟವರಿಲ್ಲ. ಹಿಂದೆ ದೇವೇಗೌಡರಿಗೆ ಕಾಂಗ್ರೆಸ್ನಿಂದ ಟಿಕೆಟ್ ಕೈ ತಪ್ಪಿದಾಗ ಬೆಳಗ್ಗಿನ ಜಾವ ಮೂರು ಗಂಟೆಯಲ್ಲಿ ರಂಗನಾಥ ಸ್ವಾಮಿ ಕನಸಿನಲ್ಲಿ ಬಂದು ಅರ್ಜಿ ಹಾಕು ಅಂತ ಹೇಳಿದ್ದರು.
ರಂಗನಾಥ ಸ್ವಾಮಿ ಆಜ್ಞೆ ನಂತರವೇ ದೇವೇಗೌಡರು ಚುನಾವಣೆಗೆ ನಿಂತು ಗೆದ್ದಿದ್ದು, ಪ್ರತಿ ಚುನಾವಣೆಯಲ್ಲೂ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಅರ್ಜಿಯನ್ನು ಪೂಜಿಸಿ ನಂತರವೇ ಚುನಾವಣೆಗೆ ಹೋಗುವುದು ಪದ್ಧತಿ. ಒಮ್ಮೆ ರಂಗನಾಥ ಸ್ವಾಮಿಗೆ ಅರ್ಜಿ ಇಟ್ಟು ಪೂಜಿಸದೇ ಹೋದಾಗ ಆ ಸಲ ನಾವು ಸೋತೆವು ಎಂದು ರೇವಣ್ಣ ರಹಸ್ಯವೊಂದನ್ನು ಸಭೆಯಲ್ಲಿ ಬಿಚ್ಚಿಟ್ಟರು.
ಹಾಸನ ಜಿಲ್ಲೆ ಅರಸೀಕೆರೆ ನಾಗರಹಳ್ಳಿ ತಿರುಮಲ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಅರಸೀಕೆ ಶಾಸಕ ಶಿವಲಿಂಗೇಗೌಡ ಸೇರಿ ಹಲವರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನನಗೆ ಜನ್ಮ ಕೊಟ್ಟ ಜಿಲ್ಲೆ ಹಾಸನ, ರಾಜಕೀಯ ಜನ್ಮ ಕೊಟ್ಟ ಜಿಲ್ಲೆ ರಾಮನಗರ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದು ಯಾವ ಟಿವಿ ಹಾಕಿದ್ರು ಹಿಜಬ್-ಕೇಸರಿ ಶಾಲು ವಿವಾದ ಸುದ್ದಿ ನೋಡುತ್ತಿದ್ದೇವೆ. ಅದನ್ನು ಹಾಕಿಸಿದವರು ಯಾರು, ಇದು ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ನಡೆಯುತ್ತಿದೆ. ಆದ್ರೆ ಖಾಸಗಿ ಶಾಲೆಗಳಲ್ಲಿ ನಡೆಯುತ್ತಿದೆಯಾ ಎಂದು ಪ್ರಶ್ನೆ ಮಾಡಿದರು.
ಟ್ರೋಲ್ ಆದ್ರೂ ಬಿಡದ ರೇವಣ್ಣ
ಶುಭ, ಅಶುಭ ಕಾರ್ಯಕ್ರಮಗಳಲ್ಲಿ ತಪ್ಪದೇ ನಿಂಬೆಹಣ್ಣು ಇಟ್ಟುಕೊಂಡು ಬರುತ್ತಿರುವ ರೇವಣ್ಣ ಅವರನ್ನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪೇಜ್‌ಗಳು ಟ್ರೋಲ್ ಮಾಡಿವೆ. ರೇವಣ್ಣ ಹಾಗೂ ನಿಂಬೆಹಣ್ಣಿನ ಫೋಸ್ಟರ್ ಹಾಕಿ ಟ್ರೋಲ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.