Karnataka Politics: ಕಾಂಗ್ರೆಸ್ಸಿಗರು ನಮ್ಮ ಮನೆ ಬಾಗಿಲು ಕಾಯುತ್ತಾರೆ: 2023 ಕ್ಕೆ ಇದೆ ಉತ್ತರ
- ಜೆಡಿಎಸ್‌ಅನ್ನು ಬಿಜೆಪಿಯ ಬಿ ಟೀಂ ಅಂತ ಕರೆಯುವ ಕಾಂಗ್ರೆಸ್ಸಿಗರು ಹೊಂದಾಣಿಕೆಗಾಗಿ ನಮ್ಮ ಮನೆ ಬಾಗಿಲು ಕಾಯುತ್ತಾರೆ
- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಕೋಲಾರ(ಡಿ.04) : ಜೆಡಿಎಸ್‌ಅನ್ನು (JDS) ಬಿಜೆಪಿಯ ಬಿ ಟೀಂ ಅಂತ ಕರೆಯುವ ಕಾಂಗ್ರೆಸ್ಸಿಗರು (congress) ಹೊಂದಾಣಿಕೆಗಾಗಿ ನಮ್ಮ ಮನೆ ಬಾಗಿಲು ಕಾಯುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy ) ವಾಗ್ದಾಳಿ ನಡೆಸಿದರು. ವಿಧಾನ ಪರಿಷತ್ ಚುನಾವಣೆ (MLC Election ) ಹಿನ್ನೆಲೆಯಲ್ಲಿ ಕೋಲಾರದಲ್ಲಿ (Kolar) ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ (Congress) ಮುಖಂಡರು ಜೆಡಿಎಸ್ ಪಕ್ಷ ಬಿಜೆಪಿಯ (BJP) ಬಿ ಟೀಂ ಎಂದು ಬರೆದು ಕತ್ತೆಗೆ ಸ್ಲೇಟ್ ಕಟ್ಟಿಕೊಂಡು ಓಡಾಡಲಿ. ಇವರ ಇತಿಹಾಸ, ನಡವಳಿಕೆ ಎಲ್ಲವೂ ಜನರಿಗೆ ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಜೆಡಿಎಸ್(JDS) ವಿರುದ್ಧ ನಿರಂತರ ಆರೋಪ: 2018 ರಿಂದಲೇ ಕಾಂಗ್ರೆಸ್ (Congress) ಪಕ್ಷ ಜೆಡಿಎಸ್ ವಿರುದ್ದ ಈ ಆರೋಪ ಮಾಡುತ್ತಲೆ ಬರುತ್ತಿದೆ, ಆದರೆ ಅಗತ್ಯವಾದಲ್ಲಿ ನಮ್ಮ ಮನೆ ಕಾವಲು ಕಾಯಲು ಇವರು ಸಿದ್ದರಿರುತ್ತಾರೆ. ಇವರ ನಡವಳಿಕೆ ಕುರಿತು ನಿರ್ಧರಿಸಲು ನಾಡಿನ ಜನತೆಯ ಮುಂದಿಟ್ಟಿದ್ದೇನೆ ಎಂದರು.
ದೇವೇಗೌಡರು(Devegowda) ಒಬ್ಬ ಜನಪ್ರತಿನಿಧಿಯಾಗಿ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ, ಮೋದಿ ಈ ದೇಶದ ಪ್ರಧಾನಿಯಾಗಿದ್ದಾರೆ, ಅವರನ್ನು ಭೇಟಿ ಮಾಡುವುದು ತಪ್ಪೇ, ಜನರ ಸಮಸ್ಯೆಗಳ ಕುರಿತು ಪಿಎಂ ಜತೆ ಚರ್ಚಿಸುವುದೂ ತಪ್ಪಾ. ದೇವೇಗೌಡರು - ಪ್ರಧಾನಿ ಭೇಟಿ ಕುರಿತು ಕಾಂಗ್ರೆಸ್ಸಿಗರು ರಾಜಕೀಯ ಬೆರೆಸಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ಸಿನ (Congress) ಕೆಲವು ಮುಖಂಡರಿಗೆ ನಮ್ಮ ಬಗ್ಗೆ ಮಾತನಾಡುವುದೇ ಉದ್ಯೋಗ ಎಂದರು.
2023ರಲ್ಲಿ ಪಕ್ಷದ ಶಕ್ತಿ ಪ್ರದರ್ಶನ : ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ (BJP) ಹಣದ ಮುಂಖಾತರ ಗೆಲ್ಲುವ ಅನುಭವಕ್ಕೆ ಪ್ರಯತ್ನಿಸುತ್ತಿದೆ, ರಾಜ್ಯದ ಸಂಪತ್ತುನ್ನು ಲೂಟಿ ಮಾಡಿ ಚುನವಣೆ ಮಾಡುವುದು ಅವರಿಗೆ ಅಭ್ಯಾಸವಾಗಿದೆ, ಈ ಕುರಿತು ಜನರೇ ತೀರ್ಮಾನ ಕೈಗೊಳ್ಳುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್‌ಅನ್ನು ಮುಗಿಸಲು ನಿರಂತರ ಪ್ರಯತ್ನ ನಡೆಸಿವೆ, ಅದು ಅವರಿಂದ ಸಾಧ್ಯವಾಗದು, ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ (JDS) ಪಕ್ಷ ಏನೆಂದು ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತೋರಿಸುತ್ತೇವೆ ಎಂದು ಕಿಡಿಕಾರಿದರು.
ಒಮಿಕ್ರೋನ್ ವೈರಸ್ ಹರಡುವಿಕೆ ತಡೆಗಟ್ಟಲು ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಕೇವಲ ಸಭೆಗಳಿಗೆ ಸೀಮಿತವಾದರೆ ಪ್ರಯೋಜನವಿಲ್ಲ, ಈಗಾಗಲೇ 2ನೇ ಅಲೆಯಿಂದ ಪಾಠ ಕಲಿತಿದ್ದೇವೆ. ಜನರ ಸುರಕ್ಷತೆಗೆ ಒತ್ತು ನೀಡುವ ಹೊಣೆ ಸರ್ಕಾರದ್ದಾಗಿದೆ ಎಂದರು.
ಕಾಂಗ್ರೆಸ್ ಪರ ಪ್ರಚಾರ : ವಿಧಾನ ಪರಿಷತ್ ಚುನಾವಣೆ(Vidhan Parishat Election) ಹಿನ್ನೆಲೆ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವ ಬಗ್ಗೆ ಬಿರುಸಿನ ಚರ್ಚೆಗಳು ನಡೆದಿರುವ ಮಧ್ಯೆಯೇ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ(NH Konareddy) ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿದ್ದಾರೆ.
ಅತ್ತ ಮೈತ್ರಿ(Alliance) ವಿಷಯವಾಗಿ ಇತ್ತೀಚೆಗೆ ಪ್ರಧಾನಿ ಮೋದಿ(Narendra Modi) ಹಾಗೂ ಮಾಜಿ ಪ್ರಧಾನಿ ದೇವೇಗೌಡರು(HD Devegowda) ಪರಸ್ಪರ ಚರ್ಚೆ ನಡೆಸಿದ್ದರು. ಇತ್ತ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ(BS Yediyurappa) ಹಾಗೂ ಎಚ್.ಡಿ. ಕುಮಾರಸ್ವಾಮಿ(HD Kumaraswamy) ನಡುವೆಯೂ ಮಾತುಕತೆಯ ಪ್ರಸ್ತಾವನೆ ಇದೆ. ಬಹುತೇಕ ಮೈತ್ರಿ ವಿಷಯ ಅಂತಿಮ ರೂಪ ಪಡೆದಿದೆ. ಇನ್ನೆರಡು ದಿನಗಳಲ್ಲಿ ಮೈತ್ರಿ ಆಗಿರುವ ಸುದ್ದಿ ಹೊರಬರುವ ಸಾಧ್ಯತೆಯೂ ಇದೆ. ಆದರೆ, ಅವಿಭಜಿತ ಧಾರವಾಡ(Dharwad) ಜಿಲ್ಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಕಾಂಗ್ರೆಸ್(Congress) ಅಭ್ಯರ್ಥಿ ಸಲೀಂ ಅಹ್ಮದ(Saleem Ahmed) ಪರವಾಗಿ ಪ್ರಚಾರವನ್ನೂ ಶುರು ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಸಣ್ಣದಾಗಿ ಅಲ್ಲಲ್ಲಿ ಪ್ರಚಾರ(Campaign) ಮಾಡುತ್ತಿದ್ದ ಕೋನರಡ್ಡಿ ಇದೀಗ ಬಹಿರಂಗವಾಗಿ ಸಲೀಂ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ತಾವೇ ಅಭ್ಯರ್ಥಿಯೆಂಬಂತೆ ಬೆಳಗ್ಗೆಯಿಂದ ರಾತ್ರಿಯವರೆಗೂ ನವಲಗುಂದ, ನರಗುಂದ ಕ್ಷೇತ್ರಗಳಲ್ಲಿ ಸಂಚರಿಸುತ್ತಾ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ನವಲಗುಂದ ಕ್ಷೇತ್ರದ ಪ್ರತಿ ಹಳ್ಳಿಹಳ್ಳಿಗೂ ಕಾಂಗ್ರೆಸ್ ಮುಖಂಡರಾದ ವಿನೋದ ಅಸೂಟಿ ಸೇರಿದಂತೆ ಮತ್ತಿತರರೊಂದಿಗೆ ಸಂಚರಿಸುತ್ತಾ ಕೋನರಡ್ಡಿ ಪ್ರಚಾರ ನಡೆಸುತ್ತಿದ್ದಾರೆ.