ಟಿಕೆಟ್‌ ಸಿಕ್ಕರೆ ಅಭಿನಂದನಾ ಸಮಾವೇಶ, ಸಿಗದಿದ್ದರೆ ಯದ್ವಾತದ್ವಾ ಬೈಯುವ ಪ್ರೋಗ್ರಾಂ!

ಹಾವೇರಿ/ರಾಮನಗರ/ಮಂಗಳೂರು(ಮಾ.28): ಡಿಬೆಟ್‌ ಶೋಗಾಗಿ ಕಾಂಗ್ರೆಸ್‌ ಮುಖಂಡರ ಸಹಿತ ನೂರಾರು ಕಾರ್ಯಕರ್ತರು ಆಗಮಿಸಿದರೆ, ಬಿಜೆಪಿ ಪರವಾಗಿ 50 ರಿಂದ 60 ಮಂದಿ ಪಾಲ್ಗೊಂಡಿದ್ದರು. ಜೆಡಿಎಸ್‌ನಿಂದ ಕೇವಲ ಮೂವರು ಮುಖಂಡರಷ್ಟೇ ಬಂದಿದ್ದರು. ಅವರ ಪರವಾಗಿ ಯಾರಾದರೂ ಬೇಕಲ್ಲ, ಹೀಗಾಗಿ ಮೂವರು ಪತ್ರಕರ್ತರನ್ನು ಜೊತೆಗೆ ಕೂರಿಸಿಕೊಂಡರು. ಆ ಮೂವರೂ ಕೊನೆಗೆ ಪಕ್ಷಾಂತರ ಮಾಡಿದರು!

ಹಾವೇರಿ: ನಮ್ಮ ಹಾವೇರಿಯ ಹಳ್ಳಿಗಳು ಈಗ ಹೇಗಾಗಿವೆ ಗೊತ್ತಾ. ಮನೆ ಮಕ್ಕಳೆಲ್ಲ ಬೇಸಾಯ ಮಾಡಲಾಗದೆ, ಮಾಡಿದರೂ ಲಾಭ ಮಾಡಲಾಗದೆ, ಹಳ್ಳಿ ಬದುಕಿನಲ್ಲಿ ಭವಿಷ್ಯವಿಲ್ಲ ಎಂದು ಬೆಂದಕಾಳೂರು ಸೇರಿಕೊಳ್ಳಲು ಮುಂದಾಗಿದ್ದಾರೆ. ಇದಾಗಿ, ಹಳ್ಳಿಗಳು ಹಿರಿಯರ ಆಶ್ರಯ ತಾಣಗಳು ಹಾಗೂ ವ್ಯಾಸಂಗ ಮಾಡುವ ಮಕ್ಕಳ ನೆಲೆತಾಣಗಳಾಗಿ ಬದಲಾಗಿವೆ. ಆದರೆ, ಚುನಾವಣೆ ಬರುತ್ತಿದ್ದಂತೆ ಹಠಾತ್‌ ಮನೆ ಮಕ್ಕಳು ಹಳ್ಳಿಗಳಿಗೆ ದಾಂಗುಡಿಯಿಡುತ್ತಿದ್ದಾರೆ.
ಅಷ್ಟೇ ಅಲ್ಲ, ಪ್ರತಿ ಮನೆಯ ಬಾಗಿಲು ತಟ್ಟಿನಾನು ನಿಮ್ಮ ಮನೆ ಮಗ ಎಂದು ಕಿರಿಕಿರಿ ಮಾಡತೊಡಗಿದ್ದಾರೆ. ಬಾಗಿಲು ತೆಗೆಯಲಿಲ್ಲ ಎಂದರೆ, ನಾನು ನಿಮ್ಮ ಮನೆ ಮಗ ಎಂಬ ಕರಪತ್ರ ಬಾಗಿಲಡಿ ದೂಡಿ ಮಾಯವಾಗುತ್ತಿದ್ದಾರೆ.
ಅಂದ ಹಾಗೆ ಈ ಹೊಸ ಮನೆ ಮಕ್ಕಳು ವಿವಿಧ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು. ನಾನು ನಿಮ್ಮ ಮನೆ ಮಗ, ಮನೆ ಮಗನಿಗೆ ಒಮ್ಮೆ ಅವಕಾಶ ಕೊಡಿ, ನಿಮ್ಮ ಮಗನೆಂದು ತಿಳಿದು ಬೆಂಬಲಿಸಿ...

50 ಸ್ಥಾನ ಗೆಲ್ಲೋದಲ್ಲ, ಸ್ಪಷ್ಟಬಹುಮತ ನಮ್ಮ ಗುರಿ, ಏ.10 ರವರೆಗೆ ಪಂಚರತ್ನ ಯಾತ್ರೆ ಮುಂದುವರಿಕೆ, ಎಚ್‌ಡಿಕೆ

ಹೀಗೆ ಬ್ಯಾನರ್‌, ಕರಪತ್ರದಲ್ಲಿ ವಿನಮ್ರವಾಗಿ ಮನವಿ ಮಾಡಿಕೊಂಡ ಆಕಾಂಕ್ಷಿಗಳು, ಮನೆ-ಮನೆಗೆ ಹೋಗಿ ಕರಪತ್ರ ವಿತರಿಸುತ್ತಿದ್ದಾರೆ. ಹಾವೇರಿ ಮೀಸಲು ಕ್ಷೇತ್ರವಾದ್ದರಿಂದ ರಾಜಕೀಯ ಭವಿಷ್ಯ ಹುಡುಕಿಕೊಂಡು ಹೊರಗಿನಿಂದ ಬಂದವರೇ ಹೆಚ್ಚು. ಈ ಹಿಂದೆ ಟಿಕೆಟ್‌ ಸಿಗದಿದ್ದವರು, ಒಂದು ಪಕ್ಷದಿಂದ ಜಿಗಿದು ಮತ್ತೊಂದು ಪಕ್ಷಕ್ಕೆ ಬಂದವರು ಈಗ ಒಂದೇ ಸಮನೆ ಓಡಾಡುತ್ತಿದ್ದಾರೆ. ಇವರನ್ನೆಲ್ಲ ನೋಡಿ ಹಳ್ಳಿ ಕಟ್ಟೆಗಳಲ್ಲಿ ಭಾರಿ ರಾಜಕೀಯ ಚರ್ಚೆ ಶುರುವಾಗಿದೆ.
ಇವರೆಲ್ಲ ನಮ್ಮ ಮನೆ ಮಕ್ಳಂತೆ ನೋಡ್ರೊ, ಮನ್ಯಾಗ ಕೆಲ್ಸ ಮಾಡೋದ ಬಿಟ್ಟು ಊರೂರು ಅಲೆದು ನಮ್ಮ ಮನೆ ಮಕ್ಳು ಹಾಳಾಗಬಾರ್ದು, ಅದ್ಕಾಗಿ ಚುನಾವಣೆ ಹೊತ್ತಲ್ಲಿ ಬರೋ ಮನೆ ಮಕ್ಳನ್ನ ಒಳಗೆ ಸೇರಿಸಬೇಡಿ.. ಎಂದು ಹರಟೆ ಕಟ್ಟೆಯಲ್ಲಿ ಫರ್ಮಾನು ಹೊರಡಿಸಿದ್ದಾರೆ.

ಪತ್ರಕರ್ತರ ಪಕ್ಷಾಂತರ!!!

ರಾಮನಗರ: ಚುನಾವಣೆ ಬಂತೆಂದರೆ ಸಾಕು ಶಕ್ತಿ ಪ್ರದರ್ಶನದ್ದೇ ಮಾತು. ಟೀ ಹೋಟೆಲ್‌, ಅರಳಿಕಟ್ಟೆ, ಪಾರ್ಕ್‌ ಹೀಗೆ ಯಾವುದೇ ಸ್ಥಳವಿರಲಿ ಅಲ್ಲೊಂದು ರಾಜಕೀಯ ಚರ್ಚೆ ನಡೆಯುವಾಗ ಶಕ್ತಿ ಪ್ರದರ್ಶನ ಮಾಮೂಲಿ. ಇತ್ತೀಚೆಗೆ ಟೀವಿ ಡಿಬೆಟ್‌ ಶೋ ವೇಳೆ ಪಕ್ಷವೊಂದರ ಮುಖಂಡರು ರಾಜಕೀಯ ಶಕ್ತಿ ಪ್ರದರ್ಶಿಸಲು ಹೋಗಿ ಮುಜುಗರ ಅನುಭವಿಸಿದರು.

ರಾಮನಗರ ವಿಧಾನಸಭಾ ಕ್ಷೇತ್ರ ವಿಚಾರವಾಗಿ ಖಾಸಗಿ ವಾಹಿನಿಯೊಂದು ಮಧ್ಯಾಹ್ನದ ವೇಳೆಗೆ ಡಿಬೆಟ್‌ ಶೋ ಆಯೋಜನೆ ಮಾಡಿತ್ತು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಾಗೂ ಕೆಆರ್‌ಎಸ್‌ ಪಕ್ಷದ ಮುಖಂಡರಿಗೂ ಆಹ್ವಾನ ನೀಡಲಾಗಿತ್ತು. ಡಿಬೆಟ್‌ ಶೋಗಾಗಿ ಕಾಂಗ್ರೆಸ್‌ ಮುಖಂಡರ ಸಹಿತ ನೂರಾರು ಕಾರ್ಯಕರ್ತರು ಆಗಮಿಸಿದರೆ, ಬಿಜೆಪಿ ಪರವಾಗಿ 50 ರಿಂದ 60 ಮಂದಿ ಪಾಲ್ಗೊಂಡಿದ್ದರು. ಇನ್ನು ಜೆಡಿಎಸ್‌ನಿಂದ ಕೇವಲ ಮೂವರು ಮುಖಂಡರಷ್ಟೇ ಬಂದು ಕಾರ್ಯಕರ್ತರ ಬರುವಿಕೆಯನ್ನು ಎದುರು ನೋಡುತ್ತಿದ್ದರು. ಯಾರೂ ಬರಲಿಲ್ಲ, ಸೋ ಡಿಬೇಟ್‌ ವೀಕ್ಷಣೆಗೆ ಬಂದ ಮೂವರು ಪತ್ರಕರ್ತರನ್ನು ತಮ್ಮ ಜೊತೆಯಲ್ಲಿ ಕೂರಿಸಿಕೊಂಡರು.

ಜತೆಗೆ, ಕುಮಾರಣ್ಣರವರ ಪಂಚರತ್ನ ಯಾತ್ರೆ ಹೋದ ಕಡೆಯೆಲ್ಲ ಜನಸಾಗರ, ಶಕ್ತಿ ಪ್ರದರ್ಶನ ಆಗುತ್ತಿದೆ. ಕಾಂಗ್ರೆಸ್‌-ಬಿಜೆಪಿ ನಾಯಕರ ಸಮಾವೇಶಗಳಲ್ಲಿ ಜನರನ್ನು ಹಣ ಕೊಟ್ಟು ಕರೆತರುವ ಪರಿಸ್ಥಿತಿ ಇದೆ ಎಂದು ಮುಖಂಡರು ಕೊಚ್ಚಿಕೊಂಡರು. ಈ ಮಾತನ್ನು ಕೇಳಿಸಿಕೊಂಡ ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ತಮ್ಮ ನಾಯಕರ ಕಿವಿಗೆ ತುಂಬಿದ. ತಕ್ಷಣವೇ ಆ ನಾಯಕ ಜೆಡಿಎಸ್‌ ಮುಖಂಡರೊಂದಿಗೆ ಹರಟೆ ಹೊಡೆಯುತ್ತಿದ್ದ ಮೂವರು ಪತ್ರಕರ್ತರನ್ನು ತಮ್ಮತ್ತ ಕರೆದು ಕೂರಿಸಿಕೊಂಡರು.

ಸೋ, ಜೆಡಿಎಸ್‌ ಪಾಳೆಯ ಖಾಲಿಯಾಯ್ತು. ಇದರಿಂದಾಗಿ ಜೆಡಿಎಸ್‌ನ ಮೂವರು ಮುಖಂಡರು ಪೆಚ್ಚಾದರೆ, ಚುನಾವಣೆ ಮುಗಿದ ನಂತರ ನಿಮ್ಮ ಕಡೆಯಿಂದ ಗೆಲ್ಲುವವರು ಕೊನೆಯದಾಗಿ ಮಾಡುವುದು ಇದನ್ನೇ (ಪಕ್ಷದಿಂದ ಪಕ್ಷಕ್ಕೆ ಜಿಗಿತ) ಎಂದು ರಾಷ್ಟ್ರೀಯ ಪಕ್ಷಗಳ ನಾಯಕರು ಜೆಡಿಎಸ್‌ ಮುಖಂಡರನ್ನು ಆಡಿಕೊಂಡರು. ಇದಕ್ಕೆ ‘ಏ, ಬಿಡ್ರಿ ನಮ್‌ ಕಡೆಯಿಂದ ನಿಮ್ಮ ಕಡೆಗೆ ಈಗ ಬಂದಿದ್ದು ಕಾರ್ಯಕರ್ತರಲ್ಲ, ಪತ್ರಕರ್ತರು...’ ಎಂದು ಜೆಡಿಎಸ್‌ ಮುಖಂಡರು ಹೇಳಿಬಿಡುವುದೇ...?’

ಸಮಾವೇಶವೆಂಬ ರೋಷಾವೇಶ

ಮಂಗಳೂರು: ದ.ಕ. ಎಂಬ ದಕ್ಷಿಣ ಕನ್ನಡದಲ್ಲಿ ಈಗ ಚುನಾವಣೆ ಎಫೆಕ್ಟ್ ಹೇಗಿದೆಯೆಂದರೆ, ಇಲ್ಲಿ ಯಾವುದು ಅಭಿನಂದನಾ ಸಮಾವೇಶ, ಯಾವುದು ರೋಷಾವೇಶ, ಯಾವುದು ನಾಮಾವಶೇಷ ಎಂಬುದೇ ಗೊತ್ತಾಗುತ್ತಿಲ್ಲ. ಏಕೆಂದರೆ, ರಾಷ್ಟ್ರೀಯ ಪಕ್ಷಗಳಿಗೆ ಇಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ವಿಪರೀತವಿದೆ. ಈ ಆಕಾಂಕ್ಷಿಗಳು ಭೇಟಿಯಾಗಬಾರದವರನ್ನು ಭೇಟಿಯಾಗಬಾರದ ಜಾಗದಲ್ಲಿ ಭೇಟಿಯಾಗಿ, ಕೈ ಸಿಕ್ಕರೆ ಕೈ ಹಿಡಿದು, ಕಾಲು ಸಿಕ್ಕರೆ ಅವುಗಳಿಗೆ ಕಮಲಾರ್ಚನೆಗೈದು ಹೀಗೆ ಬೇಕಾದ್ದು ಮಾಡಿ ಟಿಕೆಟ್‌ ಭರವಸೆ ಪಡೆದು ಬರುತ್ತಾರೆ. ಬಂದವರೇ ಟಿಕೆಟ್‌ ಕೊಡಿಸಿದವರಿಗಾಗಿ ದೊಡ್ಡ ಸಮಾವೇಶ ಆಯೋಜಿಸಲು ಮುಂದಾಗುತ್ತಾರೆ. ಇನ್ನೇನು ಸಮಾವೇಶ ಆರಂಭವಾಗಬೇಕು ಅನ್ನೋ ಹೊತ್ತಿಗೆ ಟಿಕೆಟ್‌ ಕೈ ತಪ್ಪುವ ಸುದ್ದಿ ಬರುತ್ತದೆ.

ಬಿಎಸ್‌ವೈ ಮನೆಗೆ ಕಲ್ಲು ಕಾಂಗ್ರೆಸ್‌ ಪಿತೂರಿ: ಸಿಎಂ ಬೊಮ್ಮಾಯಿ

ಸೋ, ಅಭಿನಂದನೆ ಮಾಡಿಸಿಕೊಳ್ಳಬೇಕಾದವರೂ ಮಾಯವಾಗಿಬಿಡುತ್ತಾರೆ. ಪರಿಣಾಮ ಅಭಿನಂದನಾ ಸಮಾವೇಶದ ಸ್ವರೂಪ ಬದಲಾಗಿ ಅದು ರೋಷಾವೇಶದ ಸಮಾವೇಶವಾಗಿಬಿಡುತ್ತದೆ. ಮೊನ್ನೆ ಸುಳ್ಯದಲ್ಲೂ ಇಂತಹದೊಂದು ಘಟನೆ ನಡೆಯಿತು. ಇಲ್ಲಿ ಒಂದು ಪಕ್ಷ ಈಗಾಗಲೇ ಟಿಕೆಟ್‌ ಘೋಷಿಸಿದರೆ, ಇನ್ನೊಂದು ಪಕ್ಷ ಹಾಲಿ ಜನಪ್ರತಿನಿಧಿಯನ್ನು ಮತ್ತೆ ಕಣಕ್ಕೆ ಇಳಿಸುವುದೋ ಇಲ್ಲವೇ ಹೊಸ ಅಭ್ಯರ್ಥಿಯನ್ನು ಹುಡುಕುವುದೋ ಎಂದು ತಲೆ ಕೆರೆದುಕೊಳ್ಳುತ್ತಿದೆ. ಅದು ಇನ್ನೂ ನಿರ್ಧಾರವಾಗಿಲ್ಲ.

ಹೀಗಾಗಿ ಟಿಕೆಟ್‌ಗಾಗಿ ಹೋರಾಟ ನಡೆಸಿದ ಆಕಾಂಕ್ಷಿಗಳಿಗೆ ಭರ್ಜರಿ ಭರವಸೆಯೂ ದೊರಕಿತ್ತು. ಅದಕ್ಕೆ ಸಮಾವೇಶ ಆಯೋಜಿಸುವ ಮೂಡ್‌ನಲ್ಲೂ ಅವರಿದ್ದರು. ಆದರೆ, ಹಠಾತ್‌ ಟಿಕೆಟ್‌ ಘೋಷಣೆಯಾಗಿ, ಈ ಆಕಾಂಕ್ಷಿಗೆ ಅದು ತಪ್ಪಿದೆ. ಸೋ, ಟಿಕೆಟ್‌ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗೆ, ಅವರ ಹಿಂಬಾಲಕರಿಗೆ ಭಾರೀ ಬೇಸರ ಆಗಿದೆ. ಈ ಬೇಸರ ವಿರೋಧವಾಗಿ ಮಾರ್ಪಟ್ಟಿದ್ದು, ದಿಢೀರನೆ ತಮ್ಮ ಬೆಂಬಲಿಗರ ಸಮಾವೇಶವನ್ನು ಬೃಹತ್‌ ಆಗಿ ಆಯೋಜಿಸಲು ಹೊರಟಿದ್ದಾರೆ. ದಿನಾಂಕವನ್ನೂ ಫಿಕ್ಸ್‌ ಮಾಡಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಅಲ್ಲಿ, ಟಿಕೆಟ್‌ ಕೊಡಿಸುವ ಭರವಸೆ ನೀಡಿ ಯಾಮಾರಿಸಿದವರಿಗೆ ಭರ್ಜರಿ ಮರ್ಯಾದೆ ಮಾಡುವವರಿದ್ದಾರೆ ಎಂಬ ಗುಸುಗುಸು ಇದೆ.

ಎಂ.ಅಫ್ರೋಜ್‌ ಖಾನ್‌
ನಾರಾಯಣ ಹೆಗಡೆ
ಆತ್ಮಭೂಷಣ್‌