ಹಾನಗಲ್ ಬೈ ಎಲೆಕ್ಷನ್: ಜೆಡಿಎಸ್ ಅಧಿಕೃತ ಅಭ್ಯರ್ಥಿ ಇವರೇ, ಬಿ ಫಾರಂ ನೀಡಿದ ಕುಮಾರಸ್ವಾಮಿ
* ಹಾನಗಲ್ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಘೋಷಣೆ
* ಬಿ ಫಾರಂ ನೀಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ
* ಅ. 30ರಂದು ನಡೆಯಲಿರುವ ಮತದಾನ
ಬೆಂಗಳೂರು, (ಸೆ.30): ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆ ಘೋಷಣೆ ಬೆನ್ನಲ್ಲೇ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಫೈನಲ್ ಮಾಡಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ನಿಯಾಜ್ ಶೇಕ್ ಅವರಿಗೆ ಜೆಡಿಎಸ್ ಈ ಬಾರಿ ಟಿಕೆಟ್ ನೀಡಿದೆ.
ಹಾನಗಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಿಯಾಜ್ ಶೇಕ್ ಅವರ ಹೆಸರನ್ನು ಈ ಹಿಂದೆಯೇ ಕುಮಾರಸ್ವಾಮಿಯವರು ಘೋಷಣೆ ಮಾಡಿದ್ದರು. ಅದರಂತೆಯೇ ಇಂದು (ಸೆ.30) ನಿಯಾಜ್ ಶೇಕ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆ ಮಾಡುವುದರ ಜತೆಗೆ ಬಿ ಫಾರಂ ನೀಡಿದರು.
ಹಾನಗಲ್ ಬೈ ಎಲೆಕ್ಷನ್ ದಿನಾಂಕ ಘೋಷಣೆ ಮುನ್ನವೆ ಅಭ್ಯರ್ಥಿ ಪ್ರಕಟಿಸಿದ ಜೆಡಿಎಸ್?
ಹಾವೇರಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ನಿಯಾಜ್ ಶೇಕ್ ಅವರು ಇತ್ತೀಚೆಗಷ್ಟೇ ಜೆಡಿಎಸ್ ಸೇರಿದ್ದರು. ಹಾನಗಲ್ ಉಪಚುನಾವಣೆಯ ಟಿಕೆಟ್ ಕನ್ಫರ್ಮ್ ಮಾಡಿಕೊಂಡು ಜೆಡಿಎಸ್ ಸೇರಿದ್ದರು.
ಅಭ್ಯರ್ಥಿ ಹುಡುಕಾಟದಲ್ಲಿ ಬಿಜೆಪಿ
ಬಿಜೆಪಿ ಮತ್ತು ಕಾಂಗ್ರೆಸ್ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಹುಡುಕಾಡುತ್ತಿದೆ. ಬಿಜೆಪಿಯಲ್ಲಿ ಸಂಸದ ಶಿವಕುಮಾರ್ ಉದಾಸಿ ಪತ್ನಿ ರೇವತಿ, ವಿಧಾನಪರಿಷತ್ ಮಾಜಿ ಸದಸ್ಯ ಶಿವರಾಜ್ ಸಜ್ಜನರ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮತ್ತು ಕೃಷ್ಣ ಇಳಿಗೇರ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ
ಕಾಂಗ್ರೆಸ್‌ನಲ್ಲಿ ಟಿಕೆಟ್ ಫೈಟ್
ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲು ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮತ್ತು ಮಾಜಿ ಸಚಿವ ಮನೋಹರ ತಹಶೀಲ್ದಾರ್ ನಡುವೆ ಟಿಕೆಟ್ ಪೈಪೋಟಿ ನಡೆದಿದೆ. ಮಾಜಿ ಶಾಸಕ ಮನೋಹರ ತಹಶೀಲ್ದಾರ್ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ.
2018ರ ಚುನಾವಣೆಯಲ್ಲಿ ಹಾನಗಲ್ಲ ಕ್ಷೇತ್ರದಿಂದ ಗೆದ್ದಿದ್ದ ಸಿ.ಎಂ. ಉದಾಸಿ ಅವರು ಕಳೆದ ಜೂ. 8ರಂದು ನಿಧನರಾದ ಹಿನ್ನೆಲೆಯಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಅ. 30ರಂದು ಮತದಾನ ನಡೆಯಲಿದೆ.