Asianet Suvarna News Asianet Suvarna News

ಆ. 28ರಿಂದ ಸರ್ಕಾರದ ಜನೋತ್ಸವ: ದೊಡ್ಡಬಳ್ಳಾಪುರದಲ್ಲಿ ಮೊದಲ ರ‍್ಯಾಲಿ

ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ ತುಂಬಿದ ಹಿನ್ನೆಲೆ ಜನೋತ್ಸವ

Jatotsava Will Be Held on August 28th in Doddaballapur by Karnataka BJP Government  grg
Author
Bengaluru, First Published Aug 13, 2022, 6:43 AM IST

ಬೆಂಗಳೂರು(ಆ.13):  ಪಕ್ಷದ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ರದ್ದುಪಡಿಸಿದ್ದ ‘ಜನೋತ್ಸವ’ ಕಾರ್ಯಕ್ರಮಕ್ಕೆ ಸರ್ಕಾರ ಮತ್ತೆ ಸಜ್ಜಾಗಿದ್ದು, ರಾಜ್ಯದ ಐದಾರು ಕಡೆ ಜನೋತ್ಸವ ನಡೆಸಿ ನಂತರ ದೊಡ್ಡ ಮಟ್ಟದಲ್ಲಿ ಸಮಾರೋಪ ಸಮಾರಂಭ ಆಯೋಜಿಸಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಆಗಸ್ಟ್‌ 28ರಂದು ದೊಡ್ಡಬಳ್ಳಾಪುರದಲ್ಲಿ ಮೊದಲ ಹಂತದ ಕಾರ್ಯಕ್ರಮ ನಡೆಸಲು ನಿರ್ಧಾರ ಕೈಗೊಂಡಿದೆ. ಈ ಮಧ್ಯೆ, ಸಮಾರೋಪ ಸಮಾರಂಭವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಅಮೃತಮಹೋತ್ಸವ ನಡೆದ ದಾವಣಗೆರೆಯಲ್ಲೇ ನಡೆಸಲು ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್‌ ಅವರು ‘ಜನೋತ್ಸವ’ ಕಾರ್ಯಕ್ರಮ ಆಯೋಜನೆ ಬಗ್ಗೆ ಖಚಿತ ಮಾಹಿತಿ ನೀಡಿದರು.

ಮೊದಲನೇ ಸಭೆ ದೊಡ್ಡಬಳ್ಳಾಪುರ:

ಇದೇ ಆಗಸ್ಟ್‌ 28ರಂದು ದೊಡ್ಡಬಳ್ಳಾಪುರದಲ್ಲೇ ಜನೋತ್ಸವ ಕಾರ್ಯಕ್ರಮ ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಅನುಮತಿ ನೀಡಿದ್ದಾರೆ. ನಮ್ಮ ಪಕ್ಷ ಕೂಡ ಹೇಳಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಸೀಮಿತವಾಗಿ ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಶುಕ್ರವಾರ ಮಧ್ಯಾಹ್ನವಷ್ಟೇ ಯಡಿಯೂರಪ್ಪ ಅವರು, ಮುಖ್ಯಮಂತ್ರಿ ಅವರು ಪಕ್ಷದ ಅಧ್ಯಕ್ಷರ ಜೊತೆ ಚರ್ಚಿಸಿ ದಿನಾಂಕ ನಿಗದಿಪಡಿಸಿ ನನಗೆ ಹೇಳಿದ್ದಾರೆ. ಇದರ ರೂಪುರೇಷೆಯನ್ನು ಇನ್ನು 2-3 ದಿನಗಳಲ್ಲಿ ಸಿದ್ಧಪಡಿಸಲಾಗುವುದು ಎಂದರು.

ಸಿಎಂ ಬದಲಾವಣೆ ಯಾವುದೇ ಚಿಂತನೆಯಿಲ್ಲ: ಕೇಂದ್ರ ಸಚಿವ ಜೋಶಿ

ಇನ್ನೂ 5-6 ಕಡೆ:

ಇದಾದ ನಂತರ ರಾಜ್ಯದ ಇನ್ನೂ ಐದಾರು ಕಡೆ ಇದೇ ರೀತಿ ಜನೋತ್ಸವ ಕಾರ್ಯಕ್ರಮ ನಡೆಸಿ ಕೊನೆಯಲ್ಲಿ ಒಂದು ಕಡೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಬೇಕೆಂದು ಚಿಂತನೆ ನಡೆದಿದೆ. ಇದನ್ನು ಪಕ್ಷದ ನಾಯಕರು, ಹಿರಿಯರು ನಿರ್ಧಾರ ಮಾಡುತ್ತಾರೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಎರಡು ವರ್ಷಗಳ ಆಡಳಿತ ಮತ್ತು ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರ ಒಂದು ವರ್ಷದ ಅಧಿಕಾರಾವಧಿ ಸೇರಿ ಬಿಜೆಪಿ ಸರ್ಕಾರ ಮೂರು ವರ್ಷಗಳ ಯಶಸ್ವಿ ಆಡಳಿತ ಪೂರ್ಣಗೊಳಿಸಿದೆ. ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲೂ ಸಮರ್ಥವಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಪ್ರಜಾಪ್ರಭುತ್ವ ಅಂದರೆ ಜನರ ಹಬ್ಬ. ಅದು ಬಿಜೆಪಿ ನಂಬಿಕೆ. ಆ ನಿಟ್ಟಿನಲ್ಲಿ ಜನೋತ್ಸವ ಎಂದು ಕರೆದಿದ್ದೇವೆ. ಹೆಸರು ಬದಲಿಸುವುದಾದರೆ ಅದನ್ನು ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದರು.

ಕರ್ನಾಟಕ ಸಿಎಂ ಬದಲಾವಣೆ ಚರ್ಚೆ ಹೈಕಮಾಂಡ್ ಕಿವಿಗೆ: ದಿಲ್ಲಿಯಿಂದ ಬಂತು ಸ್ಪಷ್ಟನೆ

ಸಮಾರೋಪವನ್ನು ದಾವಣಗೆರೆಯಲ್ಲೇ ಮಾಡಲು ನಿರ್ಧರಿಸಲಾಗಿದೆಯಂತೆ ನಿಜವೇ ಎಂಬ ಪ್ರಶ್ನೆಗೆ, ಇನ್ನೂ ಆ ಬಗ್ಗೆ ನಿರ್ಧಾರ ಆಗಿಲ್ಲ. ಅದನ್ನು ಪಕ್ಷದ ನಾಯಕರು ನಿರ್ಧರಿಸುತ್ತಾರೆ ಎಂದರು.

ನೆರೆ ಸಂದರ್ಭದಲ್ಲಿ ಸಿದ್ದರಾಮೋತ್ಸವ ಆಯೋಜನೆಯನ್ನು ಬಿಜೆಪಿ ಟೀಕಿಸಿತ್ತು, ಜನೋತ್ಸವದ ಬಗ್ಗೆ ಕಾಂಗ್ರೆಸ್‌ ಕೂಡ ಟೀಕಿಸಿದೆಯಲ್ಲಾ ಎಂಬ ಪ್ರಶ್ನೆಗೆ, ಜನೋತ್ಸವವನ್ನು ನಾವು ಸಿದ್ದರಾಮೋತ್ಸವಕ್ಕೆ ಮೊದಲೇ ಆಯೋಜಿಸಿದ್ದೆವು. ಜು.28ಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು, ಆದರೆ ಜು.27ಕ್ಕೆ ದಕ್ಷಿಣ ಕನ್ನಡದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರೊಬ್ಬರ ಹತ್ಯೆಯಾದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿತ್ತು. ಕಳೆದ ಹತ್ತು ದಿನಗಳಿಂದ ಕಂದಾಯ ಸಚಿವರು ಸೇರಿದಂತೆ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿದ್ದು ನೆರೆಯಿಂದ ಸಂಕಷ್ಟಕ್ಕೊಳಗಾದವರಿಗೆ ಪರಿಹಾರ ಒದಗಿಸುವ ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಿದ್ದಾರೆ. ಅಲ್ಲದೆ, ಈಗ ಜನೋತ್ಸವ ನಡೆಸುತ್ತಿರುವ ಜಿಲ್ಲೆಯಲ್ಲಿ ಅಂತಹ ನೆರೆಯಾಗಲಿ, ದೊಡ್ಡ ಅನಾಹುತವಾಗಲಿ ಸಂಭವಿಸಿಲ್ಲ ಎಂದು ಸಚಿವ ಸುಧಾಕರ್‌ ಸಮರ್ಥಿಸಿಕೊಂಡರು.
 

Follow Us:
Download App:
  • android
  • ios