Asianet Suvarna News Asianet Suvarna News

ಟಿಕೆಟ್‌ ಕೊಟ್ರೂ ಕಷ್ಟ, ಬಿಟ್ಟರೂ ಕಷ್ಟ: ಬಿಜೆಪಿಗೆ ಬಿಸಿತುಪ್ಪವಾದ ಜನಾರ್ದನ ರೆಡ್ಡಿ..!

ರೆಡ್ಡಿ ದಿಢೀರನೇ ಚಟುವಟಿಕೆ ಆರಂಭಿಸಿದ್ದರಿಂದ ಬಿಜೆಪಿ ವಿಚಲಿತ, ಟಿಕೆಟ್‌ ಕೊಟ್ರೆ ರೆಡ್ಡಿ ಮೇಲಿನ ಆರೋಪಗಳು ಬಿಜೆಪಿಗೆ ಮುಳುವು, ಕೊಡದಿದ್ದರೆ ಬಂಡಾಯ ಎದ್ದು ಪಕ್ಷಕ್ಕೆ ಹೊಡೆತ ನೀಡೋದು ಖಚಿತ, ಕರೆದು ಮಾತುಕತೆ ನಡೆಸಿ: ವರಿಷ್ಠರಿಗೆ ನಾಯಕರ ಮನವಿ. 

Janardhana Reddy's Move Created Anxiety in the BJP grg
Author
First Published Dec 14, 2022, 8:30 AM IST

ಬೆಂಗಳೂರು(ಡಿ.14):  ಸುದೀರ್ಘ ವನವಾಸದ ನಂತರ ಸಕ್ರಿಯ ರಾಜಕಾರಣಕ್ಕೆ ಮರಳಲು ತವಕಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ನಡೆ ಆಡಳಿತಾರೂಢ ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ರೆಡ್ಡಿ ಅವರು ಸದ್ಯ ಪಕ್ಷದಲ್ಲಿದ್ದರೂ ಅದು ನಾಮ್‌ ಕಾ ವಾಸ್ತೆ ಮಾತ್ರ ಎನ್ನುವಂತಾಗಿದೆ. ಅವರಿಗೆ ಯಾವುದೇ ಜವಾಬ್ದಾರಿ ಇಲ್ಲ. ಅವರ ಮಾತಿಗೂ ಮನ್ನಣೆ ಇಲ್ಲ. ಹೀಗಾಗಿಯೇ ಮತ್ತೆ ಸಕ್ರಿಯ ರಾಜಕಾರಣಕ್ಕೆ ಹಿಂದಿರುಗುವ ಮೂಲಕ ತಮ್ಮ ಮೊದಲಿನ ಪ್ರಭಾವ ಪಡೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಬಳ್ಳಾರಿಗೆ ಅಂಟಿಕೊಂಡಿರುವ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮನೆ ಮಾಡಿ ಓಡಾಟ ಆರಂಭಿಸುವ ಮೂಲಕ ತಮ್ಮ ಕಾರ್ಯಾಚರಣೆಗೆ ನಾಂದಿ ಹಾಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದಾದರೊಂದು ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ಮತ್ತೆ ಚುನಾವಣಾ ರಾಜಕಾರಣಕ್ಕೆ ಧುಮುಕುವ ಕಸರತ್ತು ನಡೆಸಿರುವ ರೆಡ್ಡಿ ಅವರು ಬಿಜೆಪಿಯಿಂದ ಅವಕಾಶ ಸಿಗದಿದ್ದಲ್ಲಿ ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸಲು ಸಿದ್ಧತೆಯನ್ನೂ ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ಬಳ್ಳಾರಿ, ಕೊಪ್ಪಳ, ಗದಗ, ರಾಯಚೂರು, ಯಾದಗಿರಿ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ತಮ್ಮ ಬೆಂಬಲಿಗರನ್ನು ಕರೆದು ಮಾತುಕತೆ ಆರಂಭಿಸಿರುವುದು ಆ ಭಾಗದ ಬಿಜೆಪಿ ಪಾಳೆಯದಲ್ಲಿ ಆತಂಕ ಮೂಡಿಸಿದೆ.

Koppal: ಜನಾರ್ಧನ ರೆಡ್ಡಿಯಿಂದ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಸ್ಥಾಪನೆ?

ಕೊಟ್ರೂ ಕಷ್ಟ, ಬಿಟ್ಟರೂ ಕಷ್ಟ:

ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರಿಗೆ ಬಿಜೆಪಿಯಿಂದ ಟಿಕೆಟ್‌ ನೀಡಿದರೂ ಕಷ್ಟ, ಬಿಟ್ಟರೂ ಕಷ್ಟ ಎನ್ನುವಂತಾಗಿದೆ. ಟಿಕೆಟ್‌ ನೀಡಿದಲ್ಲಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಪಕ್ಷ ಇದನ್ನೇ ಗುರಿಯಾಗಿಸಿಕೊಂಡು ಬಿಜೆಪಿ ವಿರುದ್ಧ ಚುನಾವಣಾ ಪ್ರಚಾರ ನಡೆಸಲಿದೆ. ಹೆಚ್ಚೂ ಕಡಮೆ ಮರೆತು ಹೋಗಿದ್ದ ಗಣಿ ಅಕ್ರಮವನ್ನೇ ಮತ್ತೆ ಕೆದಕುವ ಪ್ರಯತ್ನ ನಡೆಸಲಿದೆ. ರೆಡ್ಡಿ ವಿರುದ್ಧದ ಅನೇಕ ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ. ತಮ್ಮ ವಿರುದ್ಧದ ಆರೋಪಗಳಿಂದ ರೆಡ್ಡಿ ಪೂರ್ಣ ಪ್ರಮಾಣದಲ್ಲಿ ಮುಕ್ತರಾಗಿಲ್ಲ. ಇದು ಸಹಜವಾಗಿಯೇ ತಮಗೆ ಮುಳುವಾಗಬಹುದು ಎಂಬ ಆತಂಕ ಪಕ್ಷದಲ್ಲಿದೆ.

ಹಾಗಂತ ಅವರನ್ನು ಕಡೆಗಣಿಸಿ ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸಲು ಬಿಟ್ಟರೆ ಅದರಿಂದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೇ ಹೊಡೆತ ಬೀಳಬಹುದು ಎಂಬ ಆತಂಕವೂ ಬಿಜೆಪಿ ನಾಯಕರನ್ನು ಬಲವಾಗಿ ಕಾಡುತ್ತಿದೆ. ರೆಡ್ಡಿ ಅವರು ಹೊಸ ಪಕ್ಷ ಸ್ಥಾಪಿಸಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಲ್ಲಿ, ಅವರು ಗೆಲ್ಲದಿದ್ದರೂ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗುವ ಸಾಧ್ಯತೆಯನ್ನು ಬಿಜೆಪಿ ನಾಯಕರು ಅಲ್ಲಗಳೆಯುವುದಿಲ್ಲ. ಇದು ಪರೋಕ್ಷವಾಗಿ ಪ್ರತಿಪಕ್ಷ ಕಾಂಗ್ರೆಸ್‌ಗೆ ಅನುಕೂಲವಾಗಬಹುದು. ಹೀಗಾಗಿ, ಪಕ್ಷದ ರಾಷ್ಟ್ರೀಯ ನಾಯಕರು ಜನಾರ್ದನ ರೆಡ್ಡಿ ಅವರನ್ನು ಕರೆದು ಮಾತುಕತೆ ನಡೆಸುವ ಮೂಲಕ ಅವರ ಮನವೊಲಿಸುವ ಪ್ರಯತ್ನ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಬಿಜೆಪಿಯ ಹಲವು ರಾಜ್ಯ ನಾಯಕರು ಹೊಂದಿದ್ದಾರೆ.

ಈಗಿನ ಸನ್ನಿವೇಶದಲ್ಲಿ ಬಿಜೆಪಿಯ ರಾಜ್ಯ ನಾಯಕರು ಜನಾರ್ದನ ರೆಡ್ಡಿ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ಅದು ಯಶಸ್ಸು ಸಿಗುವ ಸಾಧ್ಯತೆ ಕಡಮೆ. ಅದರ ಬದಲು ರಾಷ್ಟ್ರೀಯ ನಾಯಕರೇ ಮುಂದಾಳತ್ವ ವಹಿಸಿ ಚುನಾವಣಾ ಕಾವು ಆರಂಭವಾಗುವ ಮೊದಲೇ ರೆಡ್ಡಿ ಅವರೊಂದಿಗೆ ಸಂಧಾನ ನಡೆಸುವುದು ಸೂಕ್ತ. ವಿಳಂಬ ಮಾಡುವುದು ಬೇಡ ಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.
 

Follow Us:
Download App:
  • android
  • ios