ರಾಯಚೂರು, (ನ.28): ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಇನ್ನೂ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಇದರ ಹಿಂದೆ ರಹಸ್ಯ ವಿಡಿಯೋ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಮತ್ತೊಂದೆಡೆ ಎನ್.ಆರ್. ಸಂತೋಷ್ ಪ್ರತಿಕ್ರಿಯಿಸಿ, ಯಾವುದೇ ಕುಟುಂಬ ಕಲಹ ಇಲ್ಲ. ರಾಜಕೀಯ ಒತ್ತಡ ಇತ್ತು ಎಂದು ಹೇಳಿಕೆ ನೀಡಿದ್ದು, ಈ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಸಂತೋಷ್ ವಿರುದ್ಧ ವಿಡಿಯೋ ಇದ್ರೆ ಬಿಡುಗಡೆ ಮಾಡಲಿ ನೋಡೋಣ : ಡಿಕೆಶಿಗೆ ಈಶ್ವರಪ್ಪ ಸವಾಲ್

ಇನ್ನು ಈ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಾಯಚೂರಿನಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣವನ್ನು ಸಮಗ್ರ ತನಿಖೆ ನಡೆಸಲಾಗುವುದು. ಅವರು, ಎನ್.ಆರ್. ಸಂತೋಷ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ನಾನು ನಿನ್ನೆ (ಶುಕ್ರವಾರ) ಬೆಂಗಳೂರಿನಲ್ಲಿ ಇರಲಿಲ್ಲ. ಘಟನೆ ಕುರಿತು ಸದಾಶಿವ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಳ್ಳಲಾಗುವುದು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಬಳಿ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋಗಳಿದ್ದರೆ ನೀಡಲಿ.  ಸಂಪೂರ್ಣ ತನಿಖೆ ಮಾಡಲಾಗುವುದು ಎಂದು ಹೇಳಿದರು. 

 ಬಿ. ಎಸ್. ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಸಂತೋಷ್ ನಿದ್ದೆ ಮಾತ್ರೆಯಿಂದ  ಆತ್ಮಹತ್ಯೆಗೆ ಯತ್ನಿಸಿದ್ದು, ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದಾಶಿವನಗರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.