ಹುಬ್ಬಳ್ಳಿಗೆ ಬಂದಾಗ ಮೋದಿ ಸಿಟ್ಟಾಗಿದ್ದೇಕೆ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Feb 2019, 10:03 AM IST
India Gate The Reason For The Dissatisfaction Of Modi At Hubli Rally
Highlights

ದಿಲ್ಲಿಯಲ್ಲಿ ಸಾಹಿತಿಗಳ ಪಾನಗೋಷ್ಠಿ ಘಟನೆ ನಡೆದ ಮರುದಿನ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಅಷ್ಟೂ ಸಂಸದರು ಪತ್ರಿಕಾಗೋಷ್ಠಿಗೆ ಜಾಗ ಕೊಡಿ ಎಂದು ಎಷ್ಟೇ ದುಂಬಾಲು ಬಿದ್ದರೂ ಕರ್ನಾಟಕ ಭವನದ ಅಧಿಕಾರಿಗಳು ಒಂದು ಕೋಣೆ ಕೊಡಲಿಲ್ಲ. ಈ ಬಾರಿ ಫಾರ್‌ ಎ ಚೇಂಜ್‌ ‘ಸಾಹಿತಿಗಳ ಚೆಲ್ಲಾಟ ರಾಜಕಾರಣಿಗಳ ಪರದಾಟ’ಕ್ಕೆ ಕಾರಣವಾಯಿತು.

ಕಾಂಗ್ರೆಸ್‌ನ ಅತೃಪ್ತ ಶಾಸಕರು ಒಂದುವೇಳೆ ಸರ್ಕಾರ ಕೆಡವಲು ಯಶಸ್ವಿಯಾದರೆ ಬಿಜೆಪಿ ಸರ್ಕಾರ ರಚಿಸಲು ಮೋದಿ ಮತ್ತು ಅಮಿತ್‌ ಶಾ ಜನವರಿಯಲ್ಲಿಯೇ ಹಸಿರು ನಿಶಾನೆ ತೋರಿಸಿದ್ದರು. ಆದರೆ 16 ಶಾಸಕರನ್ನು ಜೋಡಿಸಲು ಆಗದ ಕಾರಣ ಪಿಯೂಷ್‌ ಗೋಯಲ್ ಹಾಗೂ ಯಡಿಯೂರಪ್ಪ ಎದುರು ನೋಡುತ್ತಿದ್ದ ಗಳಿಗೆ ಕೂಡಿಬಂದಿರಲಿಲ್ಲ. ಆದರೆ ಈಗಿನ ಯಡಿಯೂರಪ್ಪ ಪ್ರಯತ್ನದಲ್ಲಿ ಹೈಕಮಾಂಡ್‌ನಿಂದ ಯಾವುದೇ ನಾಯಕರು ಭಾಗವಹಿಸಿಲ್ಲ. ಹಾಗಂತ ದಿಲ್ಲಿ ನಾಯಕರು ಸರ್ಕಾರ ಕೆಡವಲು ಹೋಗಬೇಡಿ ಎಂದು ಸ್ಪಷ್ಟಸೂಚನೆಯನ್ನು ಕೊಡುವ ಗೊಡವೆಗೂ ಹೋಗಿರಲಿಲ್ಲ. ಹಾಗಾಗಿ, ಕುಮಾರಸ್ವಾಮಿಯವರ ಆಡಿಯೋ ಖೆಡ್ಡಾದಲ್ಲಿ ಯಡಿಯೂರಪ್ಪ ಬಿದ್ದಿದ್ದರು.

ಮೊದಲು ಇದು ಮಿಮಿಕ್ರಿ ಎಂದು ಯಡಿಯೂರಪ್ಪ ವಾದಿಸಿದರೂ, ಹುಬ್ಬಳ್ಳಿಯಲ್ಲಿ ಮೋದಿಯವರ ಪ್ರಚಾರ ಸಭೆಯ ದಿನವೇ ಬೆಳಿಗ್ಗೆ ಯಡಿಯೂರಪ್ಪ ಮಾತನಾಡಿ, ತಾನು ಜೆಡಿಎಸ್‌ ಶಾಸಕನ ಭೇಟಿ ಆಗಿದ್ದು ನಿಜ ಎಂದು ಒಪ್ಪಿಕೊಂಡಿದ್ದು, ಅದರಲ್ಲಿನ ಧ್ವನಿ ತನ್ನದೇ ಎಂದು ಹೇಳಿದ್ದು ಪ್ರಧಾನಿ ಮುಜುಗರಕ್ಕೆ ಕಾರಣವಾಗಿದೆಯಂತೆ. ಹುಬ್ಬಳ್ಳಿಗೆ ಮೋದಿ ಹೋಗಿ ಇಳಿದಾಗಿನಿಂದ ಸಿಟ್ಟಿನಲ್ಲೇ ಇದ್ದರಂತೆ. ಅಷ್ಟೇ ಅಲ್ಲ, ಬಹಿರಂಗವಾಗಿ ವೇದಿಕೆ ಕಾರ್ಯಕ್ರಮ ಬಿಟ್ಟರೆ ಯಾರೊಂದಿಗೂ ಹೆಚ್ಚು ಮಾತನಾಡಿಲ್ಲವಂತೆ.

ಪ್ರಧಾನಿ ಮೂಡ್‌ ಎಷ್ಟೊಂದು ಆಫ್‌ ಆಗಿತ್ತೆಂದರೆ ಹುಬ್ಬಳ್ಳಿಯಿಂದ ಬರುವಾಗ ವಿಶೇಷ ವಿಮಾನದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಮತ್ತು ಉಳಿದ ಸಂಸದರೊಂದಿಗೆ ಒಂದು ಅಕ್ಷರವೂ ಮಾತನಾಡಿಲ್ಲವಂತೆ. ಮೋದಿ ಕರ್ನಾಟಕ ರಾಜಕಾರಣದ ಬಗ್ಗೆ ಸ್ಥಳೀಯ ನಾಯಕರೊಂದಿಗೆ ಜಾಸ್ತಿ ಮಾತನಾಡದೇ ಹೋದರೂ ದಿಲ್ಲಿ ಆಪ್ತರು ಹೇಳುವ ಪ್ರಕಾರ, ಸಿ.ಡಿ. ಎಪಿಸೋಡ್‌ ಪ್ರಧಾನಿ ಅಸಮಾಧಾನಕ್ಕೆ ಕಾರಣವಾಗಿದೆ.

ಈಗಾಗಲೇ ಎಲ್ಲ ರಾಜ್ಯಗಳು ಲೋಕಸಭೆ ಚುನಾವಣೆಯ ತಯಾರಿ ಆರಂಭಿಸಿದರೂ ಕರ್ನಾಟಕದಲ್ಲಿ ಮಾತ್ರ ಏನೂ ಆಗಿಲ್ಲ ಎಂದು ಅಮಿತ್‌ ಶಾ ಕೂಡ ಕೋಪಿಸಿಕೊಂಡಿದ್ದಾರೆ. ಆದರೆ ಯಡಿಯೂರಪ್ಪ ಮಾತ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆದರೆ ಲೋಕಸಭೆಯಲ್ಲಿ 20 ಸೀಟು ಗೆಲ್ಲಬಹುದು, ಇಲ್ಲವಾದರೆ 10 ಕೂಡ ಕಷ್ಟಎಂಬ ತರ್ಕದೊಂದಿಗೆ ಮುಂದುವರೆದಿದ್ದಾರೆ. ಕರ್ನಾಟಕದ ಆಡಿಯೋ ಪಾಲಿಟಿಕ್ಸ್‌ ಬಗ್ಗೆ ಕೇಳಿದಾಗ ಪತ್ರಕರ್ತರೊಂದಿಗೆ ಆಫ್‌ ದಿ ರೆಕಾರ್ಡ್‌ ಮಾತನಾಡುತ್ತಿದ್ದ ಕೇಂದ್ರದ ನಾಯಕರೊಬ್ಬರು, ‘ಯಡಿಯೂರಪ್ಪ ಅವರಿಗೆ ಹೇಳೋರು ಯಾರು? ಅಧಿಕಾರ ಪಲ್ಲಟ ಒಂದು ರಾತ್ರಿಯಲ್ಲಿ ನಡೆದುಬಿಡಬೇಕು, 40- 50 ದಿನದಲ್ಲಿ ಅಲ್ಲ’ ಎಂದು ಅಲವತ್ತುಕೊಳ್ಳುತ್ತಿದ್ದರು.

[ಪ್ರಶಾಂತ್ ನಾತುರವರ 'ಇಂಡಿಯಾ ಗೇಟ್' ಅಂಕಣದ ಆಯ್ದ ಭಾಗ]

loader