ಚಿಕ್ಕೋಡಿ, (ಅ.25): ಕೇಂದ್ರ ಸಚಿವ ಸುರೇಶ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧ ಎಂದು ಕಾಂಗ್ರೆಸ್ ನಾಯಕ ಪ್ರಕಾಶ ಹುಕ್ಕೇರಿ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದರು.

 ಚಿಕ್ಕೋಡಿ ತಾಲೂಕಿನ ಪ್ಯಾಕ್ಟರಿ ಕ್ರಾಸ್ ಬಳಿ ರವಿವಾರ ಪೆಟ್ರೋಲ್ ಬಂಕ್ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿ. ಸುರೇಶ ಅಂಗಡಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿದರೆ ನಾನು ಯಾವ ಪಕ್ಷದಿಂದಲೂ ಟಿಕೆಟ್ ಕೇಳುದಿಲ್ಲ. ಅಂಗಡಿ ಕುಟುಂಬ ಹೊರತು ಪಡಿಸಿ ಟಿಕೆಟ್ ನೀಡಿದರೆ ನಾನು ಸ್ಪರ್ಧಿಸಲು ಸಿದ್ದನಿದ್ದೇನೆ. ಕಾಂಗ್ರೆಸ್ ಅಥವಾ ಬಿಜೆಪಿ ಯಾರೇ ಟಿಕೆಟ್ ಕೊಟ್ಟರೂ ಸ್ಪರ್ಧಿಸಲು ಸೈ ಎಂದರು.

ಬೆಳಗಾವಿ ಟಿಕೆಟ್‌ ಅಂಗಡಿ ಕುಟುಂಬಕ್ಕೆ ನೀಡಲು ಲಾಬಿ, ಅಂಗಡಿ ಪುತ್ರಿ ಪರ ಶೆಟ್ಟರ್‌!

ಸುರೇಶ ಅಂಗಡಿ ಬಿಜೆಪಿಯಲ್ಲಿ ಇದ್ದಾಗ ನಾನು ಕಾಂಗ್ರೆಸ್ ನಲ್ಲಿ ಇದ್ದೇನೆ. ಆದರೆ ಇಬ್ಬರೂ ನಾವು ಗಳಸ್ಯ ಕಂಟಸ್ಯ ಸ್ನೇಹಿತರು. ಇಂದು ಸ್ನೇಹಿತ ನಮ್ಮ ಜೊತೆ ಇಲ್ಲದೇ ಇರುವುದು ದುಃಖದ ಸಂಗತಿ ಎಂದು ಹೇಳಿದರು.

ನಾನು ರಾಜಕೀಯದಿಂದ ನಿವೃತ್ತಿಯಾಗಿಲ್ಲ. ಜನಸೇವೆ ಮಾಡುವ ಶಕ್ತಿಯನ್ನು ಭಗವಂತ ನೀಡಿದ್ದಾನೆ. ಬೆಳಗಾವಿ ಲೋಕಸಭೆ ಕ್ಷೇತ್ರ ನನಗೇನೂ ಹೊಸದೇನಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ, ವಿಧಾನ ಪರಿಷತ್ ಸದಸ್ಯನಾಗಿ ಸಾಕಷ್ಟು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ಪಕ್ಷದಿಂದ ದಿ.ಸುರೇಶ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ನಾನೇ ಜವಾಬ್ದಾರಿ ಹೊತ್ತುಕೊಂಡು ಗೆಲುವಿಗೆ ಶ್ರಮೀಸುತ್ತೇನೆ ಎಂದು ಹೇಳಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.