ನಾನು ಜೆಡಿಎಸ್‌ಗೆ ಯಾಕೆ ಹೋಗಬೇಕು. ಇದೆಲ್ಲಾ ಸುಳ್ಳು ಸುದ್ದಿ. ನಾನು ಜೆಡಿಎಸ್‌ ಸೇರುವ ಪ್ರಶ್ನೆಯೇ ಇಲ್ಲ ಮತ್ತು ಕಾಂಗ್ರೆಸ್‌ನಿಂದಲೇ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಹೇಳಿದರು.

ಕೊಪ್ಪಳ (ಜೂ.28): ನಾನು ಜೆಡಿಎಸ್‌ಗೆ ಯಾಕೆ ಹೋಗಬೇಕು. ಇದೆಲ್ಲಾ ಸುಳ್ಳು ಸುದ್ದಿ. ನಾನು ಜೆಡಿಎಸ್‌ ಸೇರುವ ಪ್ರಶ್ನೆಯೇ ಇಲ್ಲ ಮತ್ತು ಕಾಂಗ್ರೆಸ್‌ನಿಂದಲೇ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಹೇಳಿದರು. ಬಸಾಪುರ ವಿಮಾನ ತಂಗುದಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ಜೆಡಿಎಸ್‌ ಸೇರುವುದಿಲ್ಲ ಮತ್ತು ಅದು ಮುಗಿದ ಅಧ್ಯಾಯ ಎಂದರು. ನನಗೆ ಟಿಕೆಟ್‌ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಕಾಂಗ್ರೆಸ್‌ ಸದಸ್ಯತ್ವ ಅಭಿಯಾನದಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ಸದಸ್ಯತ್ವ ಮಾಡಿಸಿದ್ದೇನೆ. 

80 ಸಾವಿರ ಸದಸ್ಯರು ನೋಂದಣಿಯಾಗಿದ್ದಾರೆ. ಹೀಗಿರುವಾಗ ನಾನೇಕೆ ಜೆಡಿಎಸ್‌ಗೆ ಹೋಗಲಿ ಎಂದು ಪ್ರಶ್ನಿಸಿದರು. ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ ಅವರು ಸೇರಿದಂತೆ ಯಾರು ಸಹ ನನ್ನನ್ನು ಬಿಟ್ಟುಕೊಡುವುದಿಲ್ಲ. ಅವರ ಬೆಂಬಲ ನನಗೆ ಇರುವುದರಿಂದ ಟಿಕೆಟ್‌ ಸಿಕ್ಕೆ ಸಿಗುತ್ತದೆ. ನನಗೆ ಜು. 3ರಂದು ಬೆಂಗಳೂರಿಗೆ ಬಾ ಎಂದು ಹೇಳಿದ್ದಾರೆ. ಅಂದು ನಡೆಯುವ ಸಭೆಯಲ್ಲಿ ಭಾಗವಹಿಸಲು ಸೂಚಿಸಿದ್ದಾರೆ. ಹೀಗಾಗಿ ಅಂದು ಬೆಂಗಳೂರಿಗೆ ಹೋಗುತೇನೆ. ಮುಸ್ಲಿಂ ಸಮುದಾಯ ಕಾಂಗ್ರೆಸ್‌ ಜತೆಗೆ ಇದೆ. ಇದು ಕಾಂಗ್ರೆಸ್‌ಗೂ ಗೊತ್ತಿದೆ ಎಂದರು.

Karnataka Politics: ಮತ್ತೆ ರಾಜ್ಯದ ಸಿಎಂ ಆಗುವೆ: ಎಚ್‌.ಡಿ.ಕುಮಾರಸ್ವಾಮಿ

ಡಿಕೆಶಿ ಎದುರು ಗಂಗಾವತಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಹೈಡ್ರಾಮಾ: ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗಾಗಿ ಹಲವು ನಾಯಕರು ಕಸರತ್ತು ನಡೆಸಿದ್ದು, ಪೈಪೋಟಿಗೆ ಇಳಿದಿದ್ದಾರೆ. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಎದುರಿನಲ್ಲಿಯೇ ಬಹಿರಂಗವಾಯಿತು. ಸೋಮವಾರ ತಾಲೂಕಿನ ಬಸಾಪುರ ವಿಮಾನ ತಂಗುದಾಣಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರನ್ನು ಖದ್ದು ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರು ಭೇಟಿಯಾಗಿ ಮಾತುಕತೆ ನಡೆಸಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಇಕ್ಬಾಲ್‌ ಅನ್ಸಾರಿ ಅವರು ಪ್ರತ್ಯೇಕವಾಗಿ ಕೆಲಹೊತ್ತು ಮಾತನಾಡಿದರು. 

ಈ ವೇಳೆ ಗಂಗಾವತಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಚರ್ಚೆಯಾಯಿತಲ್ಲದೆ ಟಿಕೆಟ್‌ ವಿಷಯವೂ ಚರ್ಚೆಗೆ ಬಂದಿದೆ ಎನ್ನಲಾಗಿದೆ. ಇಕ್ಬಾಲ್‌ ಅನ್ಸಾರಿ ಅವರ ಮಾತನ್ನು ಕೇಳಿದ ಡಿಕೆಶಿ ಅವರು ಆಯ್ತು ಎನ್ನುವಂತೆ ಬೆನ್ನು ಚಪ್ಪರಿಸಿದರು. ಈ ವೇಳೆ ಶಿವರಾಜ ತಂಗಡಗಿ ಅವರು ಅನ್ಸಾರಿ ಅವರ ಪರ ಬ್ಯಾಟ್‌ ಬೀಸುತ್ತಿರುವಂತೆ ಮಾತನಾಡುತ್ತಿರುವುದು ವಿಡಿಯೋ ದೃಶ್ಯದಲ್ಲಿ ದಾಖಲಾಗಿದೆ. ಆದರೆ, ಏನು ಮಾತನಾಡಿದರು ಎನ್ನುವುದು ಗುಪ್ತ್ ಗುಪ್ತ್ ಆಗಿದೆ.

ಸಿದ್ದರಾಮಯ್ಯ ಸಾಮರ್ಥ್ಯ ಡಬಲ್‌ ಎಂಜಿನ್‌ಗಿಲ್ಲ: ಡಿ.ಕೆ.ಶಿವಕುಮಾರ್‌

ಬೆಂಬಲಿಗರ ಮನವಿ: ಈ ನಡುವೆ ಗಂಗಾವತಿ ಮಾರ್ಗವಾಗಿ ತೆರಳುವ ವೇಳೆ ಇಕ್ಬಾಲ್‌ ಅನ್ಸಾರಿ ಅವರ ಬೆಂಬಲಿಗರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಕಾರನ್ನು ನಿಲ್ಲಿಸಿ, ಟಿಕೆಟ್‌ ಘೋಷಿಸುವಂತೆ ಆಗ್ರಹಿಸಿದರು. ಇಕ್ಬಾಲ್‌ ಅನ್ಸಾರಿ ಅವರಿಗೆ ಟಿಕೆಟ್‌ ಕೊಡಬೇಕು ಎಂದು ಸಹ ಘೋಷಣೆ ಕೂಗುತ್ತಿರುವುದು ಕೇಳಿಬಂದಿತು. ಇದಾದ ಮೇಲೆ ಮರಳಿ ಬರುವ ಸಮಯದಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರ ಬೆಂಬಲಿಗರು ಸಹ ಡಿಕೆಶಿ ಅವರಿಗೆ ಮನವಿ ಮಾಡಿದರು. ಮಲ್ಲಿಕಾರ್ಜುನ ನಾಗಪ್ಪ ಅವರ ಪರವಾಗಿ ಘೋಷಣೆ ಹಾಕಿದ್ದು, ಅಲ್ಲದೆ ಟಿಕೆಟ್‌ ನೀಡುವಂತೆ ಆಗ್ರಹಿಸಿದರು. ಇದೆಲ್ಲವನ್ನು ಆಲಿಸಿದ ಡಿಕೆಶಿ ಅವರು ಇದ್ಯಾವುದಕ್ಕೂ ನೇರವಾಗಿ ಉತ್ತರ ನೀಡಲಿಲ್ಲ. ಆದರೆ, ಜು. 3ರಂದು ಬೆಂಗಳೂರಿಗೆ ಆಗಮಿಸುವಂತೆ ಇಕ್ಬಾಲ್‌ ಅನ್ಸಾರಿ ಅವರಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ.