ನಮ್ಮದೇ ಮೂಲ ಜನತಾದಳ, ಎಚ್‌ಡಿಡಿ ತಂದೆ ಸಮಾನ: ಸಿ.ಎಂ.ಇಬ್ರಾಹಿಂ
ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಜೆಡಿಎಸ್‌ನ ವಿವಿಧ ರಾಜ್ಯಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಗುರುವಾರ ಮಧ್ಯಾಹ್ನ ಸಭೆ ನಡೆಸಿ ಚರ್ಚಿಸಲಾಗುವುದು.

ನವದೆಹಲಿ (ಅ.26): ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಜೆಡಿಎಸ್‌ನ ವಿವಿಧ ರಾಜ್ಯಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಗುರುವಾರ ಮಧ್ಯಾಹ್ನ ಸಭೆ ನಡೆಸಿ ಚರ್ಚಿಸಲಾಗುವುದು. ಒಂದು ವೇಳೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮೈತ್ರಿ ವಿಚಾರವಾಗಿ ತಮ್ಮ ನಿಲುವು ಬದಲಿಸದಿದ್ದರೆ ಪಕ್ಷಕ್ಕೆ ಹೊಸ ರಾಷ್ಟ್ರಾಧ್ಯಕ್ಷರ ನೇಮಕ ಅನಿವಾರ್ಯ ಎಂದು ಜೆಡಿಎಸ್‌ನ ಉಚ್ಚಾಟಿತ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ಬುಧವಾರ ದೆಹಲಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಜನತಾದಳದ ವಿವಿಧ ರಾಜ್ಯದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇರಳ, ಮಹಾರಾಷ್ಟ್ರ, ಬಿಹಾರ ರಾಜ್ಯದ ಜನತಾದಳದ ನಾಯಕರ ಜೊತೆ ಸಭೆ ಮಾಡುತ್ತಿದ್ದೇನೆ. ನಮ್ಮದೇ ಮೂಲ ಜನತಾದಳ ಎಂದರು.
ವಾಜಪೇಯಿ ಬೆಂಬಲ ಕೊಡುತ್ತೇನೆ ಅಂದಾಗಲೇ ದೇವೇಗೌಡರು ಪ್ರಧಾನಿ ಹುದ್ದೆ ಬಿಟ್ಟು ಬಂದವರು. ಈಗ ಮೂರು ಸೀಟಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದೆ ಕುಮಾರಸ್ವಾಮಿ ಅವರು ದೇವೇಗೌಡರನ್ನು ಅಡ ಇಡುತ್ತಿದ್ದಾರೆ ಎಂದು ಆರೋಪಿಸಿದ ಇಬ್ರಾಹಿಂ, ಈಗ ನಾವು ಸ್ವತಂತ್ರವಾಗಿ ಸ್ಪರ್ಧಿಸಿದರೂ ಮೂರು ಸ್ಥಾನ ಗೆಲ್ಲುತ್ತೇವೆ. ಬಿಜೆಪಿ ಜತೆಗೆ ಹೋದರೆ ಒಂದು ಸ್ಥಾನವನ್ನೂ ಗೆಲ್ಲಲ್ಲ ಎಂದರು. ನೀವು ಹಿರಿಯರಿದ್ದೀರಿ, ನಿಮ್ಮನ್ನು ನಾವು ತಂದೆ ಸ್ಥಾನದಲ್ಲಿ ನೋಡುತ್ತಿದ್ದೇವೆ. ಕರ್ನಾಟಕದಿಂದ ಪ್ರಧಾನಿಯಾದ ಏಕೈಕ ನಾಯಕ ಮಕ್ಕಳ ಮಾತು ಕೇಳಿ ಹಾಳಾಗಬೇಡಿ. ನಮಗೆ ದೇಶ ಮುಖ್ಯ ಎಂದು ದೇವೇಗೌಡರಿಗೆ ಹೇಳುತ್ತೇವೆ ಎಂದರು.
ತಲೆ ತಗ್ಗಿಸುವ ಯಾವ ಕೆಲಸ ಮಾಡಿಲ್ಲಾ, ಅಮ್ಮ ನೀಡಿದ ಹಳೆಯ ಲಾಕೆಟ್ ಎಂದಿದ್ದೇನೆ: ಪಾಚ್ಕೊಳಿ ಎಂದ ನಟ ಜಗ್ಗೇಶ್!
ಇದೇ ವೇಳೆ ಜೆಡಿಎಸ್‌ನ ಚುನಾಯಿತ ಅಧ್ಯಕ್ಷನಾದ ತಮ್ಮನ್ನು ಸುಮ್ಮನೆ ಉಚ್ಚಾಟನೆ ಮಾಡಲು ಆಗಲ್ಲ. ಅವಿಶ್ವಾಸ ತಂದು ಅದಕ್ಕೆ ಒಪ್ಪಿಗೆ ಸಿಗಬೇಕು. ಇನ್ನೂ ಗಂಡ ಸತ್ತೇ ಇಲ್ಲ, ಆಗಲೇ ಎರಡನೇ ಮದುವೆಗೆ ಸಿದ್ಧ ಮಾಡಿದರೆ ಹೇಗೆ? ಈ ವಿಚಾರದಲ್ಲಿ ಕೋರ್ಟ್ ಗೆ ಹೋಗೋ ಅವಶ್ಯಕತೆ ಬೀಳಲ್ಲ ಎಂದು ನಾನು ಅಂದುಕೊಂಡಿದ್ದೇನೆ. ಚುನಾವಣಾ ಆಯೋಗವೇ ಆ ಕುರಿತು ತೀರ್ಮಾನ ಮಾಡಲಿದೆ ಎಂದರು. ದೇವೇಗೌಡರ ಜತೆ ಯಾರೂ ಇಲ್ಲ. ಗೌಡರಿಗೆ ಅವಮಾನ ಆಗಲು ಬಿಡಬಾರದು. ಅವರಿಗೆ ಗೌರವ ಕೊಡಬೇಕು. ಅವರು ತಂದೆ ಸಮಾನ ಎಂದ ಇಬ್ರಾಹಿಂ, ನೀವು ತಂದೆ ಸಮಾನ ನಮ್ಮ ಜತೆಗೆ ನೀವೇ ನಾಯಕರಾಗಿ ಮುಂದುವರೆಯಿರಿ ಎಂದು ಕೇಳುತ್ತೇವೆ. ಅವರು ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದರು.