ಸಂಜೆಯೊಳಗೆ ಸಿಎಂ ಯಾರೆಂದು ನಿರ್ಧಾರ: ನಿತೀಶ್ ಕುಮಾರ್ ಕೈತಪ್ಪುತ್ತಾ ಕುರ್ಚಿ?
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ| ಜೆಡಿಯುಗಿಂತಲೂ ಬಿಜೆಪಿಗೆ ಹೆಚ್ಚು ಕ್ಷೇತ್ರದಲ್ಲಿ ಮುಂಚೂಣಿ| ಸಂಜೆಯೊಳಗೆ ಸಿಎಂ ಯಾರೆಂದು ನಿರ್ಧರಿಸುತ್ತೇವೆಂದ ಬಿಜೆಪಿ
ಪಾಟ್ನಾ(ನ.10): ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಬರಲಾರಂಭಿಸಿದೆ. ಈವರೆಗಿನ ಫಲಿತಾಂಶ ಗಮನಿಸಿದರೆ ಎನ್‌ಡಿಗೆ ಮುನ್ನಡೆ ಸಾಧಿಸಿ ಸರ್ಕಾರ ರಚಿಸುವ ಸುಳಿವು ಸಿಕ್ಕಿದೆ. ಹೀಗಿದ್ದರೂ ಮತ್ತೊಮ್ಮೆ ಸಿಎಂ ಆಗುವ ನಿತೀಶ್ ಕುಮಾರ್ ಕನಸು ಮಾತ್ರ ಬಿಜೆಪಿ ನಿರ್ಧಾರದ ಮೇಲಿದೆ. ಸದ್ಯದ ಟ್ರೆಂಡ್ ಅನ್ವಯ ಬಿಜೆಪಿ ಜೆಡಿಯುಗಿಂತಲೂ ಹೆಚ್ಚು ಮತಗಳನ್ನು ಪಡೆದಿದೆ.
ಇನ್ನು ಖುದ್ದು ನಿತೀಶ್ ಕುಮಾರ್ ಪ್ರದರ್ಶನ ನಿರೀಕ್ಷೆಗಿಂತಲೂ ಕಡಿಮೆ ಇದೆ ಹಾಗೂ ಮೊದಲ ಬಾರಿ ಅವರು ಮೋದಿ ನೇತೃತ್ವದ ಬಿಜೆಪಿ ಪಕ್ಷದೊಂದಿಗೆ ಮೈತ್ರಿಯ ಜೂನಿಯರ್ ಪಾರ್ಟ್ನರ್‌ನಂತೆ ಕಂಡು ಬಂದಿದ್ದಾರೆ. ಹೀಗಿದ್ದರೂ ಬ್ರಾಂಡ್ ನಿತೀಶ್ ಇನ್ನೂ ತನ್ನ ಕಳೆ ಕಳೆದುಕೊಂಡಿಲ್ಲ ಎಂಬುವುದು ಹಾಲಿ ಸಿಎಂ ಆಪ್ತರ ಮಾತಾಗಿದೆ.
ಇನ್ನು ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ 'ಮೋದಿಯವರ ಫೇಮ್ ನಮ್ಮನ್ನು ಈ ಚುನಾವಣೆಯಲ್ಲಿ ಮುನ್ನಡೆ ಸಾಧಿಸುವಂತೆ ಮಾಡಿದೆ. ನಾನು ಸಂಜೆಯೊಳಗೆ ಸರ್ಕಾರ ರಚನೆ ಹಾಗೂ ನೇತೃತ್ವದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ' ಎಂದಿದ್ದಾರೆ. ಅವರ ಈ ಹೇಳಿಕೆಯಿಂದ ಬಿಜೆಪಿಯು ಬಿಹಾರದಲ್ಲಿ ಹೊಸ ನಾಯಕತ್ವದ ಬಗ್ಗೆ ಚರ್ಚೆ ನಡೆಸುತ್ತಿದೆಯೇನೋ ಎಂಬ ಅನುಮಾನ ಹುಟ್ಟಿಸಿದೆ. ಈ ಸಂಬಂಧ ಅವರನ್ನು ಪ್ರಶ್ನಿಸಿದಾಗ ಸಮೀಕ್ಷೆಯಂತೆ ಫಲಿತಾಂಶ ಬಂದರೆ ಬಿಜೆಪಿ ನಿತೀಶ್ ಕುಮಾರ್‌ರನ್ನು ಸಿಎಂ ಆಗಿ ಮಾಡುವ ಮಾತನ್ನು ಪರಿಪಾಲಿಸುತ್ತದೆ ಎಂದಿದ್ದಾರೆ.
ಇತ್ತ ನಿತೀಶ್ ಕುಮಾರ್ ತಂಡ ಚುನಾವಣೆಯಲ್ಲಿ ಜೆಡಿಯು ಪಕ್ಷದ ಕಳಪೆ ಪ್ರದರ್ಶನಕ್ಕೆ ಕೊರೋನಾ ಹಾಗೂ ಚಿರಾಗ್ ಪಾಸ್ವಾನ್‌ರವರ ನಡೆಯೇ ಕಾರಣವೆಂದು ಆರೋಪಿಸಿದೆ.