ಕಾಂಗ್ರೆಸ್‌ನಲ್ಲಿ ಎಲ್ರಿಗೂ ಸಿಎಂ ಕುರ್ಚಿ ಮೇಲೆ ಕಣ್ಣು: ಅವಕಾಶ ಸಿಕ್ಕರೆ ನಾನು ಮುಖ್ಯಮಂತ್ರಿ ಆಗುವೆ ಎಂದ ಪಿಟಿಪಿ
ಮುಖ್ಯಮಂತ್ರಿಯಾಗುವ ಆಸೆ ಬಿಚ್ಚಿಟ್ಟ ಹೂವಿನಹಡಗಲಿ ಶಾಸಕ ಪರಮೇಶ್ವರ ನಾಯ್ಕ್
ಕೊಪ್ಪಳ(ಜು.23): ನಾನು ಕೂಡಾ ಪಕ್ಷಕ್ಕಾಗಿ ದುಡಿದಿದ್ದೇನೆ. ಅವಕಾಶ ಸಿಕ್ಕರೆ ಸಿಎಂ ಆಗುವ ಆಸೆ ಇದೆ ಎಂದು ಮಾಜಿ ಸಚಿವ, ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್ ತಮ್ಮ ಆಸೆಯನ್ನು ಹೊರಹಾಕಿದ್ದಾರೆ.
ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ. ಮತ್ತೆ ಕೂಡಾ ಗೆದ್ದು ಶಾಸಕನಾಗುತ್ತೇನೆ. ಸತತ ಪಕ್ಷದ ಸೇವೆ ಮಾಡುತ್ತಾ ಬಂದಿದ್ದೇನೆ. ಅವಕಾಶ ಸಿಕ್ಕರೆ ಸಿಎಂ ಆಗುತ್ತೇನೆ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಪಿ.ಟಿ. ಪರಮೇಶ್ವರ ನಾಯ್ಕ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಗುವುದನ್ನು ನಾನೊಬ್ಬನೇ ನಿರ್ಧಾರ ಮಾಡುವುದಲ್ಲ. ಬಿಜೆಪಿಯವರು ಸಿಎಂ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್‌ನಲ್ಲಿ ಗೊಂದಲವಿದೆ ಎಂದು ಸುಖಾಸುಮ್ಮನೆ ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಖುರ್ಚಿಗಾಗಿ ಗುದ್ದಾಟ ಇಲ್ಲ ಎಂದರು.
ಕಾಂಗ್ರೆಸ್‌ನವರು ಕೂಸು ಹುಟ್ಟುವ ಮುಂಚೆ ಕುಲಾಯಿ ಹೊಲಿಸಿದ್ರು ಎಂಬಂತಾಡ್ತಿದ್ದಾರೆ - BSY ವ್ಯಂಗ್ಯ
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಇಬ್ಬರೂ ನಮ್ಮ ನಾಯಕರು. ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಿಎಂ ಯಾರೆಂದು ಶಾಸಕಾಂಗÜ ಪಕ್ಷದ ಸದಸ್ಯರು ಹಾಗೂ ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ಸೋನಿಯಾ ಗಾಂಧಿಯವರದು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತಪ್ಪಿಲ್ಲ. ಕಾಂಗ್ರೆಸ್ ಹತ್ತಿಕ್ಕುವ ಕುತಂತ್ರ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಡೆಯುತ್ತಿದೆ. ಮೋದಿಯವರು 2011ರ ಪ್ರಕರಣವನ್ನು ಇದೀಗ ಮುನ್ನೆಲೆಗೆ ತಂದಿದ್ದಾರೆ. ಇದು ಬಿಜೆಪಿಯವರ ಕುತಂತ್ರ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ಸಿದ್ದರಾಮಯ್ಯನವರು ರಾಜ್ಯದ ಎಲ್ಲಿಯೇ ನಿಂತರೂ ಗೆಲ್ಲುತ್ತಾರೆ. ಅವರಿಗೆ ಕ್ಷೇತ್ರ ಹುಡುಕಬೇಕಾದ ಪರಿಸ್ಥಿತಿ ಬಂದಿಲ್ಲ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಿದ್ದರೂ ರಾಜ್ಯದ ಹಿತಕ್ಕೆ ಶ್ರಮಿಸುತ್ತಿದ್ದಾರೆ. ಬಾದಾಮಿಯನ್ನು ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ. ಹಾಗಾಗಿ ಎಲ್ಲರೂ ಅವರನ್ನು ತಮ್ಮ ಕ್ಷೇತ್ರಕ್ಕೆ ಬನ್ನಿ ಎಂದು ಆಮಂತ್ರಿಸುತ್ತಿದ್ದಾರೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಸಿದ್ದರಾಮಯ್ಯನವರನ್ನು ಕೊಪ್ಪಳಕ್ಕೆ ಆಹ್ವಾನ ಮಾಡಿದ್ದೇವೆ. ಅವರು ಬಂದರೆ ಕ್ಷೇತ್ರ ಬಿಟ್ಟು ಕೊಟ್ಟು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡುವೆ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯರಾದ ಕರಿಯಣ್ಣ ಸಂಗಟಿ, ಎಚ್.ಆರ್. ಶ್ರೀನಾಥ, ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಇತರರಿದ್ದರು.