ರಾಜ್ಯದಲ್ಲಿ ಪ್ರಬಲ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯಾಗಬೇಕಾದರೇ ವೀರಶೈವ ಲಿಂಗಾಯತ ಸಮಾಜ ಬಾಂಧವರು ಒಗ್ಗಟ್ಟಿನಿಂದ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಶಾಸಕ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಮಾಜ ಬಾಂಧವರಲ್ಲಿ ಮನವಿ ಮಾಡಿದರು. 

ಮೂಡಲಗಿ (ಮಾ.18): ರಾಜ್ಯದಲ್ಲಿ ಪ್ರಬಲ ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯಾಗಬೇಕಾದರೇ ವೀರಶೈವ ಲಿಂಗಾಯತ ಸಮಾಜ ಬಾಂಧವರು ಒಗ್ಗಟ್ಟಿನಿಂದ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಶಾಸಕ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಮಾಜ ಬಾಂಧವರಲ್ಲಿ ಮನವಿ ಮಾಡಿದರು. ತಾಲೂಕಿನ ನಾಗನೂರ ಪಟ್ಟಣದ ಹೊರವಲಯದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಜರುಗಿದ ಅರಭಾವಿ ಮತಕ್ಷೇತ್ರದ ವೀರಶೈವ ಲಿಂಗಾಯತ ಸಮಾಜದ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಬರುವ ಚುನಾವಣೆಯಲ್ಲಿ ಸಮಾಜ ಬಾಂಧವರು ಒಂದಾಗಿ ಒಗ್ಗಟ್ಟಿನಿಂದ ಮತಗಳು ಬೇರೆ ಪಕ್ಷಗಳಿಗೆ ಹೋಗದಂತೆ ನೋಡಿಕೊಂಡು ಬಿಜೆಪಿಗೆ ಮತ ನೀಡಿದರೇ ನಿಮ್ಮ ಸಮುದಾಯದವರೊಬ್ಬರು ಮುಖ್ಯಮಂತ್ರಿಯಾಗುವ ಅವಕಾಶವು ಮತ್ತೊಮ್ಮೆ ಕೂಡಿ ಬರಲಿದೆ ಎಂದರು. ರಾಜ್ಯದಲ್ಲಿ ವೀರಶೈವ ಲಿಂಗಾಯತರು ಅತ್ಯಧಿಕ ಪ್ರಮಾಣದಲ್ಲಿದ್ದರೇ 2ನೇ ಸ್ಥಾನದಲ್ಲಿ ಒಕ್ಕಲಿಗರಿದ್ದಾರೆ. ಕುರುಬ ಸಮುದಾಯ 3ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಪ್ರಮುಖವಾಗಿದ್ದು ಇದರಲ್ಲಿ ವೀರಶೈವ ಲಿಂಗಾಯತ ಸಮಾಜದವರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಕೇವಲ ಬಿಜೆಪಿ ಮಾತ್ರ. 

ನಾನು ನಿಮಿತ್ತ ಮಾತ್ರ, ಎಲ್ಲವೂ ಯಡಿ​ಯೂ​ರ​ಪ್ಪ​ನ​ವ​ರೇ: ಸಿಎಂ ಬೊಮ್ಮಾ​ಯಿ

ಉಳಿದ ಪಕ್ಷಗಳು ಈ ಸಮುದಾಯಕ್ಕೆ ಸೇರಿರುವ ಯಾರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ. ಆದ್ದರಿಂದ ಏಪ್ರಿಲ್‌-ಮೇ ತಿಂಗಳನಲ್ಲಿ ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾದ್ದಲ್ಲಿ ಮತ್ತೆ 5 ವರ್ಷಗಳ ಕಾಲ ನಮ್ಮ ಪಕ್ಷವು ಸರ್ಕಾರ ರಚನೆ ಮಾಡುತ್ತದೆ ಎಂದು ತಿಳಿಸಿದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ಕಲ್ಪಿಸಿಕೊಡುವಂತೆ ಈಗಾಗಲೇ ಪಕ್ಷಾತೀತವಾಗಿ ಹೋರಾಟಗಳು ನಡೆಯುತ್ತಿವೆ. ಈ ಹೋರಾಟಕ್ಕೆ ನಾವು ಕೂಡಾ ಬೆಂಬಲ ನೀಡಿದ್ದೇವೆ. ಪಂಚಮಸಾಲಿ ಸಮಾಜಕ್ಕೆ ಶೈಕ್ಷಣಿಕವಾಗಿ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿಯನ್ನು ನೀಡುವಂತೆಯೂ ನಾನು ಕೂಡಾ ಮುಖ್ಯಮಂತ್ರಿಗಳೊಂದಿಗೆ ಸಾಕಷ್ಟು ಬಾರಿ ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇನೆ. 

ಮುಂದೆಯೂ ಸಹ ಮೀಸಲಾತಿ ಹೋರಾಟದಲ್ಲಿ ಸಕ್ರೀಯವಾಗಿ ಭಾಗಿಯಾಗುತ್ತೇನೆ. ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಸಮಾಜದ ಸ್ವಾಮಿಜಿಗಳೊಂದಿಗೆ ಹೋರಾಟಕ್ಕೂ ಸಿದ್ಧನಿದ್ದೇನೆ. ಸಮಾಜದ ಸ್ವಾಮಿಜಿಗಳು ಹಾಗೂ ಮುಖಂಡರ ನಿಯೋಗದೊಂದಿಗೆ 2ಎ ಮೀಸಲಾತಿ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಚುನಾವಣೆ ನೀತಿ ಸಂಹಿತೆ ಒಳಗಾಗಿ ಭೇಟಿ ಮಾಡಿ ಅವರಲ್ಲಿ ಒತ್ತಡ ಹೇರುವ ಕೆಲಸವನ್ನು ಮಾಡುತ್ತೇನೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಟ್ಟರೇ ಅದು ಬಿಜೆಪಿಯವರೇ ಕೊಡಬೇಕು ಎಂದು ತಿಳಿಸಿದರು. 

ಸಮಾವೇಶದ ಸಾನ್ನಿಧ್ಯವನ್ನು ಅರಭಾವಿ ದುರದುಂಡೀಶ್ವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಗೋಕಾಕದ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಹುಣಶ್ಯಾಳ ಪಿ.ಜಿ.ಯ ನಿಜಗುಣ ದೇವರು, ಭಾಗೋಜಿಕೊಪ್ಪದ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಘಟಪ್ರಭಾ ಜೆಜಿಕೋ ಆಸ್ಪತ್ರೆಯ ಅಧ್ಯಕ್ಷ ಬಿ.ಆರ್‌.ಪಾಟೀಲ(ನಾಗನೂರ) ವಹಿಸಿದ್ದರು.

ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಸುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ಕೂಡಲೇ ವಜಾಗೊಳಿಸಿ: ಸಿದ್ದರಾಮಯ್ಯ

ವೇದಿಕೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಯುವ ಧುರೀಣ ಸರ್ವೋತ್ತಮ ಭೀಮಶಿ ಜಾರಕಿಹೊಳಿ, ಪ್ರಭಾ ಶುಗರ ಅಧ್ಯಕ್ಷ ಅಶೋಕ ಪಾಟೀಲ, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬಿ.ಡಿ.ಪಾಟೀಲ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸುಭಾಶ ಢವಳೇಶ್ವರ, ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಬಸವಪ್ರಭು ನಿಡಗುಂದಿ, ಕೆಂಚನಗೌಡ ಪಾಟೀಲ, ಶಿವನಗೌಡ ಪಾಟೀಲ, ಸುಭಾಶ ಕುರಬೇಟ, ಶಿವಪ್ಪ ಹೊಸಮನಿ, ಎಸ್‌.ಎಲ್‌.ಹೊಸಮನಿ, ಬಸವನಗೌಡ ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಿಕೊಡಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಮಾಜದ ಪ್ರಮುಖರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಇದೇ ಸಂದರ್ಭದಲ್ಲಿ ಮನವಿ ಅರ್ಪಿಸಿದರು. ನೀಲಪ್ಪ ಕೇವಟಿ ಸ್ವಾಗತಿಸಿದರು. ಸುಭಾಸ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಾ ಕೊಕ್ಕರಿ ನಿರೂಪಿಸಿದರು.