* ಶೀಘ್ರ ದಾವಣಗೆರೆಯಲ್ಲಿ ಜೆಡಿಎಸ್ ಸೇರುವೆ* ಯಾವ ಕಾಂಗ್ರೆಸಿಗರೂ ನನ್ನ ಸಂಪರ್ಕಿಸಿಲ್ಲ, ಹೀಗಾಗಿ ನಿರ್ಧಾರ ಬದಲಿಲ್ಲ* ಸಿದ್ದು, ಬಿಎಸ್‌ವೈ ಕೂಡ ಪಕ್ಷ ಬಿಟ್ಟು ಬರಲಿ
ಬೆಂಗಳೂರು(ಫೆ.06): ಕಾಂಗ್ರೆಸ್(Congress) ಪಕ್ಷ ತೊರೆಯುವ ತಮ್ಮ ನಿರ್ಧಾರವನ್ನು ಗಟ್ಟಿಗೊಳಿಸಿರುವ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ(CM Ibrahiim) ಸದ್ಯದಲ್ಲೇ ದಾವಣಗೆರೆಯಲ್ಲಿ ಜೆಡಿಎಸ್(JDS) ಪಕ್ಷ ಸೇರ್ಪಡೆಯಾಗುತ್ತೇನೆ ಎಂದು ಘೋಷಿಸಿದ್ದಾರೆ.
ಇದೇ ವೇಳೆ ಬಿಜೆಪಿಯಿಂದ ಬಿ.ಎಸ್. ಯಡಿಯೂರಪ್ಪ(BS Yediyurappa) ಹಾಗೂ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ(Siddaramaiah) ಹೊರಬರಬೇಕು ಎಂದು ಸಲಹೆ ನೀಡಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಗೆ(Rahul Gandhi) ರಾಜಕೀಯ ಬುದ್ಧಿ ಶಕ್ತಿ ಇಲ್ಲ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗುವ ಮೊದಲು ಯಾರು ಅವರು ಯಾರು ಎಂಬುದೇ ರಾಹುಲ್ ಗಾಂಧಿಗೆ ಗೊತ್ತಿರಲಿಲ್ಲ. ದಿನೇಶ್ ಗುಂಡೂರಾವ್ ಯಾರು ಎಂದು ರಾಹುಲ್ ಗಾಂಧಿ ನನ್ನನ್ನೇ ಕೇಳಿದ್ದರು. ಅವರಿಗೆ ಅವರ ತಂದೆ ರಾಜೀವ್ ಗಾಂಧಿಯಷ್ಟು ಚಾಣಾಕ್ಷತೆಯಿಲ್ಲ. ಇನ್ನು ಕಾಂಗ್ರೆಸ್ ನಾಯಕರು ಯಾರೂ ನನ್ನ ಸಂಪರ್ಕ ಮಾಡಿಲ್ಲ. ಹೀಗಾಗಿ ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದರು.
Karnataka Congress ಪಾಟೀಲ್ ಜೊತೆಗಿನ ಮಿಟಿಂಗ್ 100%. ಸಕ್ಸಸ್ ಫುಲ್, ಸಂಚಲನ ಮೂಡಿಸಿದ ಇಬ್ರಾಹಿಂ ಹೇಳಿಕೆ
ನಾನು ಜೆಡಿಎಸ್ ಪಕ್ಷ ಸೇರಲು ನಿರ್ಧರಿಸಿದ್ದೇನೆ. ಸಮಯವನ್ನು ಆದಷ್ಟು ಶೀಘ್ರವಾಗಿ ಘೋಷಿಸುತ್ತೇನೆ. ಆದರೆ ಪರ್ಯಾಯ ರಂಗದ ನಾಯಕತ್ವವನ್ನು ನಾನು ವಹಿಸುವುದಿಲ್ಲ. ನಾನು ಈ ನಿಟ್ಟಿನಲ್ಲಿ ಒಬ್ಬ ಕೆಲಸಗಾರ ಮಾತ್ರ. ಜೆಡಿಎಸ್ ಮುಂದಿನ ಬಾರಿಗೆ ಅಧಿಕಾರಕ್ಕೆ ಬರಲಿದೆ. ಕುಮಾರಸ್ವಾಮಿ ಹಣೆಬರಹದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಬರೆದಿದ್ದರೆ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಇನ್ನು ಒಂದು ವರ್ಷಕ್ಕೆ ಕಾಂಗ್ರೆಸ್‌ನವರೇ ನಮ್ಮ (ಜೆಡಿಎಸ್) ಬಳಿಗೆ ನಿಮ್ಮ ಸಹಾಯ ಬೇಕು ಎಂದು ಬರುತ್ತಾರೆ ಎಂದು ಭವಿಷ್ಯ ನುಡಿದರು.
ಎಚ್.ಡಿ. ದೇವೇಗೌಡರ ಬುದ್ಧಿವಂತಿಕೆ ಏನೆಂದರೆ ಅವರು ನೀರಿಗಾಗಿ ಅಣೆಕಟ್ಟು ನಿರ್ಮಿಸಲು ಹೋಗಲ್ಲ. ಸೋರುವ ನೀರಿಗೆ ಬಕೆಟ್ ಹಿಡಿಯುತ್ತಾರೆ. ಆ ನೀರಿನಲ್ಲೇ ಕೊಡ ತುಂಬಿಸಿಕೊಳ್ಳುತ್ತಾರೆ ಎಂದು ಜೆಡಿಎಸ್ ಪಕ್ಷ ಕಟ್ಟುವ ರೀತಿಯ ಬಗ್ಗೆ ಹೇಳಿದರು.
ಬಿಎಸ್‌ವೈ, ಸಿದ್ದು ಪಕ್ಷಗಳಿಂದ ಹೊರಬರಲಿ:
ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಸ್ಥಿತಿ ನೀರಿನಲ್ಲಿ ಬಿದ್ದ ಸೋಪ್ ರೀತಿ ಆಗಿದೆ. ಸೋಪು ಬಳಕೆ ಆಗಲ್ಲ, ನೀರೂ ಬಳಕೆಯಾಗಿಲ್ಲ. ಹೀಗಾಗಿ ನಾನು ಧೈರ್ಯ ತೋರಿಸಿ ಪಕ್ಷದಿಂದ ಹೊರ ಬನ್ನಿ ಎಂದು ಸಲಹೆ ನೀಡುತ್ತೇನೆ. ಅವರು ಹೊರ ಬಂದರೆ ಅವರಿಗೆ ಬೆಂಬಲಿಸುವ ದೊಡ್ಡ ವರ್ಗವೇ ಇದೆ.
Karnataka Politics: ಸಿಎಂ ಇಬ್ರಾಹಿಂ ಮನವೊಲಿಸ್ತಾರಾ ಸಿದ್ದರಾಮಯ್ಯ.? ಬಿರಿಯಾನಿ ಪಾಲಿಟಿಕ್ಸ್!
ಇನ್ನು ಸಿದ್ದರಾಮಯ್ಯ ಸಹ ಕಾಂಗ್ರೆಸ್‌ನಲ್ಲಿ ನೆಮ್ಮದಿಯಾಗಿಲ್ಲ. ಅವರ ಪಕ್ಕದಲ್ಲಿ ಕೂತಿದ್ದ ಮಾಜಿ ಶಾಸಕ ಅಶೋಕ್ ಪಟ್ಟಣ್‌ಗೆ ನೋಟಿಸ್ ಕೊಟ್ಟಿದ್ದಾರೆ. ಸಲೀಂ ಅವರನ್ನು ಅಮಾನತು ಮಾಡಿಬಿಟ್ಟಿದ್ದಾರೆ. ಮಾಜಿ ಸಂಸದ ಉಗ್ರಪ್ಪ ಎಲ್ಲಿ ಹೋದನೋ ಗೊತ್ತಾಗುತ್ತಿಲ್ಲ. ಒಂದು ಕಾಲು ಅಲ್ಲಿ ಮತ್ತೊಂದು ಕಾಲು ಇಲ್ಲಿ ಇಟ್ಟುಕೊಂಡಿದ್ದಾನೆ. ಈಗ ಯಾವ ಆರ್ಟಿಕಲ್ಲೂ ಇಲ್ಲ ಸೆಕ್ಷನ್ನೂ ಇಲ್ಲ . ಹೀಗಾಗಿ ಸಿದ್ದರಾಮಯ್ಯ ಅವರೂ ಯೋಚನೆ ಮಾಡಲಿ ಎಂದು ಸಲಹೆ ನೀಡಿದರು.
ಡಿಕೇಶಿ ಆರೇ ಎಂದರೆ ಕ್ಯಾರೇ ಎನ್ನುತ್ತೇನೆ
ಡಿ.ಕೆ.ಶಿವಕುಮಾರ್ ಅವರದು ಏನ್ರೀ ಅದು ಬಾಡಿ ಲಾಂಗ್ವೆಜ್? ಆ ಸಲೀಂನ ಕಳಿಸಿಯೇಬಿಟ್ಟರು. ನಲಪಾಡ್‌ನ ಹೇಗೆ ನಡೆಸಿಕೊಂಡರು? ಅವರಿಗೆ ಚುಪ್ ಅಂದರೆ ಗಪ್‌ಚುಪ್ ಆಗಿ ಇರಬೇಕು. ಆರೆ ಅಂದರೆ ಬರಬೇಕು. ನಾನು ಆರೆ ಎಂದರೆ ಕ್ಯಾರೆ ಎನ್ನುತ್ತೀನಿ. ಅದಕ್ಕೇ ನಾನು ಅವರಿಗೆ ಬೇಡವಾಗಿದ್ದೇನೆ ಅಂತ ಕಾಂಗ್ರೆಸ್ ಶಾಸಕ ಸಿ.ಎಂ. ಇಬ್ರಾಹಿಂ ತಿಳಿಸಿದ್ದಾರೆ.
