ಈ ಹಿಂದೆ ಹಲವು ಬಾರಿ ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇದೀಗ 90 ವರ್ಷವಾದರೂ ಇದೇ ಉತ್ಸಾಹದಲ್ಲಿ ಶ್ರಮಿಸುವೆ ಎಂದು ಘೋಷಿಸಿದ್ದಾರೆ.

ಬೆಳಗಾವಿ(ಜೂ.08): ನಿರಂತರ ರಾಜ್ಯಪ್ರವಾಸ ನಡೆಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಈ ಹಿಂದೆ ಹಲವು ಬಾರಿ ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇದೀಗ 90 ವರ್ಷವಾದರೂ ಇದೇ ಉತ್ಸಾಹದಲ್ಲಿ ಶ್ರಮಿಸುವೆ ಎಂದು ಘೋಷಿಸಿದ್ದಾರೆ. ನನಗೆ ವಯಸ್ಸಾಗಿಲ್ಲ, ಇನ್ನೂ 10 ವರ್ಷ ರಾಜ್ಯ ಪ್ರವಾಸ ಮಾಡುವೆ ಎಂದು ತಿಳಿಸಿದ್ದಾರೆ.

ವಿಜಯಪುರದಲ್ಲಿ ವಿಧಾನ ಪರಿಷತ್‌ ಚುನಾವಣೆ ಪ್ರಚಾರ ಸಭೆ ಮತ್ತು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಅವರು ಈ ವಿಷಯ ತಿಳಿಸಿದರು. ನನಗೆ ವಯಸ್ಸಾಗಿಲ್ಲ. 90 ವರ್ಷಗಳಾದರೂ ಇದೇ ಉತ್ಸಾಹದಲ್ಲಿ ಶ್ರಮಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಕಾರ್ಯಕರ್ತರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ಎಲ್ಲರೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಇದಲ್ಲದೆ ಬರುವ ವಿಧಾನಸಭೆ ಚುನಾವಣೆಯಲ್ಲಿಯೂ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮ ವಹಿಸಬೇಕಿದೆ ಎಂದು ಕರೆ ನೀಡಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಖಂಡತ್ವ ಪ್ರಶ್ನೆಯೇ ಇಲ್ಲ. ಸಾಮೂಹಿಕ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು. ಮುಂಬರುವ ಎಲ್ಲ ಚುನಾವಣೆ ಗೆಲ್ಲಲು ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮತದಾರರು ಮೋದಿ ಮತ್ತು ಬಿಜೆಪಿ ಜೊತೆ ಇರುವುದರಿಂದ ಯಾವುದೇ ಆತಂಕವಿಲ್ಲ. ಯಾವಾಗ ಎಲ್ಲಿ ಕರೆದರೂ ನಾನು 24 ಗಂಟೆಯೂ ಪ್ರವಾಸ ಮಾಡಲು ಸಿದ್ಧನಿದ್ದೇನೆ. ಇನ್ನೂ ಹತ್ತು ವರ್ಷ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬಲಪಡಿಸುವ ಪ್ರಯತ್ನ ಮಾಡುವೆ ಎಂದು ಹೇಳಿದರು