ಬೆಂಗಳೂರು[ನ.26]: ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿದ್ದು, ನನ್ನ ಸ್ವಾರ್ಥಕ್ಕಾಗಿ ಅಲ್ಲ. ಬದಲಾಗಿ ನನ್ನ ಕ್ಷೇತ್ರದ ಜನತೆಗೆ ಆಗುತ್ತಿದ್ದ ಅನ್ಯಾಯವನ್ನು ತಡೆಯುವುದಕ್ಕಾಗಿ ಎಂದು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಹೇಳಿದ್ದಾರೆ

ಕ್ಷೇತ್ರದಲ್ಲಿ ಸೋಮವಾರ ಪಕ್ಷದ ಹಿರಿಯ ನಾಯಕರೊಂದಿಗೆ ಅವರೊಂದಿಗೆ ಪ್ರಚಾರ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದವರು ಮತ್ತು ಎದುರಾಳಿಗಳು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಮತದಾರರ ಕಿವಿಗೊಡಬಾರದು. ಹಾಗೆಯೇ ಪಕ್ಷದ ಕಾರ್ಯಕರ್ತರೂ ಮತದಾರರಿಗೆ ಸತ್ಯವನ್ನು ಮನವರಿಕೆ ಮಾಡಿಕೊಡಬೇಕು ಎಂದು ವಿನಂತಿಸಿದರು.

ಈ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಬೇಕೆನ್ನುವ ಹೆಬ್ಬಯಕೆ ನನ್ನದಾಗಿತ್ತು. ಇದನ್ನು ಮುಂದಿನ ದಿನಗಳಲ್ಲಿ ಸಾಧಿಸಿ ತೋರಿಸುತ್ತೇನೆ. ಜನತೆ ಮತ ಹಾಕುವ ಮೂಲಕ ಸಹಕಾರ ನೀಡಬೇಕು. ನನಗೆ ಮತ ಹಾಕುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರ ಕೈಯನ್ನು ಬಲಪಡಿಸಿದಂತಾಗುತ್ತದೆ ಎಂದು ಹೇಳಿದರು

ಇದಕ್ಕೂ ಮುನ್ನ ಅವರು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಬಿಜೆಪಿಯ ರಾಜ್ಯ ಉಸ್ತುವಾರಿ ಮುರುಳಿಧರ ರಾವ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರು ಗೋಪಾಲಯ್ಯ ಪರವಾಗಿ ಕ್ಷೇತ್ರದ ಪ್ರಮುಖ ಬೀದಿ ಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಉಸ್ತು ವಾರಿ ಮುರುಳಿಧರರಾವ್, ಬಿಜೆಪಿ ಅಭ್ಯರ್ಥಿಯಾಗಿ ರುವ ಗೋಪಾಲಯ್ಯ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಇದನ್ನು ಕಾರ್ಯಕರ್ತರು ಮತದಾ ರರಿಗೆ ಮನವರಿಕೆ ಮಾಡಿಕೊಡಬೇಕು ಎಂದರು

ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ಈ ಕ್ಷೇತ್ರದಲ್ಲಿ ಗೋಪಾಲಯ್ಯ ಅವರು ಗೆಲವು ಸಾಧಿಸುವುದು ಖಚಿತ. ನಂತರದಲ್ಲಿ ಕ್ಷೇತ್ರ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯಾಗುವುದೂ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.