ಮೀಸಲಾತಿ ವಿಚಾರದಲ್ಲಿ ನಾನು ಸ್ವಾಮೀಜಿಗಳಿಗೆ ಒತ್ತಡ ಹಾಕಿಲ್ಲ: ಸಿಎಂ ಬೊಮ್ಮಾಯಿ
ನನ್ನ ಮೇಲೆ ಆರೋಪ ಮಾಡಿದ ಒಂದು ಪಕ್ಷದ ಅಧ್ಯಕ್ಷರಿಂದಲೇ ‘ಬಿಜೆಪಿ ಮೀಸಲಾತಿ ಕೊಟ್ಟರೆ ಒಪ್ಪಿಕೊಳ್ಳಬೇಡಿ’ ಎಂಬ ಒತ್ತಡ ಸ್ವಾಮೀಜಿ (ಬಸವಜಯ ಮೃತ್ಯುಂಜಯ ಶ್ರೀ) ಮೇಲೆ ಇತ್ತು. ಈ ಕಾರಣಕ್ಕಾಗಿ ಮೀಸಲಾತಿ ಘೋಷಣೆ ತಡವಾಯಿತು.
ಹಾವೇರಿ (ಮಾ.27): ‘ನನ್ನ ಮೇಲೆ ಆರೋಪ ಮಾಡಿದ ಒಂದು ಪಕ್ಷದ ಅಧ್ಯಕ್ಷರಿಂದಲೇ ‘ಬಿಜೆಪಿ ಮೀಸಲಾತಿ ಕೊಟ್ಟರೆ ಒಪ್ಪಿಕೊಳ್ಳಬೇಡಿ’ ಎಂಬ ಒತ್ತಡ ಸ್ವಾಮೀಜಿ (ಬಸವಜಯ ಮೃತ್ಯುಂಜಯ ಶ್ರೀ) ಮೇಲೆ ಇತ್ತು. ಈ ಕಾರಣಕ್ಕಾಗಿ ಮೀಸಲಾತಿ ಘೋಷಣೆ ತಡವಾಯಿತು. ಸ್ವಾಮೀಜಿಗೆ ಕರೆ ಮಾಡಿ ಒತ್ತಡ ಹಾಕುವ ಕೆಲಸವನ್ನು ನಾನು ಮಾಡಿಲ್ಲ. ಆ ಕೆಲಸವನ್ನು ಯಾರು ಮಾಡಿದ್ದಾರೋ ಅವರಿಗೇ ಬಿಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸರ್ಕಾರದಿಂದ ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಮೃತ್ಯುಂಜಯ ಸ್ವಾಮೀಜಿಗಳು, ನಿರ್ಮಲಾನಂದ ಸ್ವಾಮೀಜಿಗಳಿಗೆ ಸರ್ಕಾರದವರು 20-25 ಬಾರಿ ಕರೆ ಮಾಡಿ ಇದನ್ನು ಒಪ್ಪಿಕೊಳ್ಳಿ ಎಂದು ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ತಿರುಗೇಟು ನೀಡಿದ ಬೊಮ್ಮಾಯಿಯವರು, ಡಿ.ಕೆ.ಶಿವಕುಮಾರ ಅವರ ಹೆಸರು ಪ್ರಸ್ತಾಪಿಸದೇ ತಿರುಗೇಟು ನೀಡಿದ್ದಾರೆ.
ಮೀಸಲಾತಿ ಒಪ್ಪುವಂತೆ ಶ್ರೀಗಳಿಗೆ ಸರ್ಕಾರದ ಬೆದರಿಕೆ: ಡಿ.ಕೆ.ಶಿವಕುಮಾರ್
‘ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ನ್ಯಾಯಸಮ್ಮತವಾಗಿ ಮೀಸಲಾತಿ ನೀಡಲಾಗಿದೆ. ಯಾವುದೇ ಒತ್ತಡದಿಂದ ಈ ಕೆಲಸ ಮಾಡಿಲ್ಲ. ನನ್ನ ಸ್ವಂತ ಚಿಂತನೆಯಿಂದ, ಬದ್ಧತೆಯಿಂದ ಮಾಡಿದ್ದೇನೆ. ಚುನಾವಣಾ ಲಾಭಕ್ಕಾಗಿ ರಾಜಕಾರಣ ಮಾಡುವುದಿಲ್ಲ’ ಎಂದರು. ಇತರರಿಗೆ ಅನ್ಯಾಯವಾಗದಂತೆ ನ್ಯಾಯಸಮ್ಮತವಾಗಿ ಮೀಸಲಾತಿ ನೀಡಲಾಗಿದೆ. ವಚನಾನಂದ ಶ್ರೀ ಸೈದ್ಧಾಂತಿಕವಾಗಿ ಮಾರ್ಗದರ್ಶನ ಮಾಡಿದ್ದಾರೆ. ಭಿನ್ನಮತ ವ್ಯಕ್ತವಾದಾಗ ಎಲ್ಲರಿಗೂ ಮನವರಿಕೆ, ಮಾರ್ಗದರ್ಶನ ಮಾಡಿದ್ದಾರೆ. ಬಸವಜಯ ಮೃತ್ಯುಂಜಯ ಶ್ರೀಯವರು ತಮ್ಮ ದಿಟ್ಟಹೋರಾಟದಿಂದ ಸಮಾಜ ಹಾಗೂ ಸರ್ಕಾರದ ಮೇಲೆ ಜಾಗೃತಿ ಮೂಡಿಸಿದರು.
ಸರಿಯಾದ ಸಂದರ್ಭದಲ್ಲಿ ಸರಿಯಾದ ತೀರ್ಮಾನ ಕೈಗೊಂಡಿದ್ದೇನೆ. ಇದನ್ನು ಜಾರಿಗೆ ತರಲು ಯಾರಿಗೂ ಹೆದರುವುದಿಲ್ಲ ಎಂದರು. ನವ ಕರ್ನಾಟಕದಲ್ಲಿ ದೀನ ದಲಿತರು ಆರ್ಥಿಕವಾಗಿ ಸಬಲರಾಗಬೇಕು. ವಿದ್ಯಾವಂತರಾಗಿ, ಸ್ವಾಭಿಮಾನದ ಬದುಕು ಬದುಕಬೇಕು ಎಂಬುದು ನಮ್ಮ ಇಚ್ಛೆ. ಹಿಂದಿನವರು ಮಾಡಿದ ಅನ್ಯಾಯ ಸರಿಪಡಿಸಲಾಗಿದೆ. ಇದು 30 ವರ್ಷಗಳ ಬೇಡಿಕೆಯಾಗಿದ್ದು, ಸಮಸ್ಯೆಬಗೆಹರಿಸಲಾಗಿದೆ. ಸಮುದಾಯದ ಬೆಂಬಲ ನಮ್ಮ ಮೇಲಿದೆ. ಮೀಸಲಾತಿಯ ಮೂಲಕ ಸಮುದಾಯದ ಕಟ್ಟಕಡೆಯ ಬಡವನಿಗೆ ನ್ಯಾಯ ಕೊಡುವ ಕೆಲಸ ಮಾಡಲಾಗಿದೆ ಎಂದರು.
ಸಮನ್ವಯ ಸಂಕೇತ: ಶಿಗ್ಗಾಂವಿ ತಾಲೂಕು ಅಭಿವೃದ್ಧಿ, ಎಲ್ಲ ಸಮುದಾಯಗಳ ಸಮನ್ವಯ ಸಂಕೇತ. ವಚನಾನಂದ ಶ್ರೀಗಳು ಪೀಠಕ್ಕೆ ಬಂದ ನಂತರ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ಭಕ್ತರ ಹತ್ತಿರಕ್ಕೆ ಪೀಠ ತೆಗೆದುಕೊಂಡು ಹೋಗಿದ್ದಾರೆ. ಹೊಸ ವೈಚಾರಿಕ ಚಿಂತನೆಯನ್ನು ಸಮುದಾಯದಲ್ಲಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮುದಾಯ ವಿಸ್ತರಿಸಿ ನಾವೆಲ್ಲರೂ ಕನ್ನಡ ನಾಡಿನ ಮಕ್ಕಳು ಒಂದಾಗಬೇಕು ಎಂದು ಹೇಳಿದ್ದಾರೆ. ದೇಶವಿದೇಶಗಳಲ್ಲಿ, ಹಿಮಾಲಯದಲ್ಲಿ ಯೋಗ ಸಾಧನೆಯಿಂದ ದೊಡ್ಡ ಹೆಸರು ಮಾಡಿರುವುದು ಹೆಮ್ಮೆ ಎಂದರು.
ಅನ್ನದಾತನಿಗೆ ಆರ್ಥಿಕ ಸುರಕ್ಷಾ ಚಕ್ರ: ರೈತ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯನ್ನು ರಾಜ್ಯದ 11ಲಕ್ಷ ವಿದ್ಯಾರ್ಥಿಗಳಿಗೆ 818 ಕೋಟಿ ಒದಗಿಸಲಾಗಿದೆ. ರೈತ ಕಾರ್ಮಿಕ ಮಹಿಳೆಗೆ ಪ್ರತಿ ತಿಂಗಳು .1000 ನೀಡುವ ಯೋಜನೆ ಘೋಷಿಸಲಾಗಿದೆ. ಯಶಸ್ವಿನಿ ಯೋಜನೆ ಮರು ಪ್ರಾರಂಭಿಸಿ .300 ಕೋಟಿ ನೀಡಲಾಗಿದೆ. ರೈತರಿಗಾಗಿ ಜೀವನಜ್ಯೋತಿ ಜೀವವಿಮಾ ಪ್ರಾರಂಭ ಮಾಡಿ 180 ಕೋಟಿ ಮೀಸಲಿರಿಸಿದೆ. ಕಳೆದ ವರ್ಷ ರೈತ ಶಕ್ತಿ ಯೋಜನೆಗೆ 380 ಕೋಟಿ ವೆಚ್ಚ ಮಾಡಲಾಗಿದೆ. 57 ಲಕ್ಷ ರೈತರಿಗೆ ತಲುಪಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ 2 ಸಾವಿರ ಕೋಟಿಯನ್ನು 57 ಲಕ್ಷ ರೈತರಿಗೆ ನೀಡಲಾಗುತ್ತದೆ. ಶೂನ್ಯ ಬಡ್ಡಿ ದರದಲ್ಲಿ ನೀಡುವ ಸಾಲವನ್ನು 5 ಲಕ್ಷಕ್ಕೆ ಏರಿಸಲಾಗಿದೆ. ಅನ್ನದಾತನಿಗೆ ಆರ್ಥಿಕ ಸುರಕ್ಷಾ ಚಕ್ರ ನೀಡಿ ದೇಶಕ್ಕೆ ಸಲ್ಲುವ ಕೆಲಸ ಮಾಡಲಾಗಿದೆ ಎಂದರು.