Asianet Suvarna News Asianet Suvarna News

ಜನರ ಕನಸು ಸಾಕಾರಗೊಳಿಸಲು ಬಿಜೆಪಿ ಸೇರಿದೆ, ವೈಯಕ್ತಿಕ ಲಾಭಕ್ಕಾಗಿ ಅಲ್ಲ: ಸಚಿವ ಬಿ.ಸಿ.ಪಾಟೀಲ್‌

ತಾಲೂಕಿನ ಜನತೆ ಕಂಡ ಕನಸನ್ನು ನನಸು ಮಾಡಲು ಹೊರಟಿದ್ದೇನೆ, ನಾನು ಹಲವಾರು ಪಕ್ಷ ಬದಲಾವಣೆ ಮಾಡಿದ್ದೇನೆ. ಹಿಂದೆ ಪಕ್ಷದಲ್ಲಿ ಜನತೆಗೆ ಬರಿ ಸುಳ್ಳು ಭರವಸೆಗಳನ್ನು ನೀಡುವುದೇ ಆಗಿತ್ತು. 

I have joined BJP to realize peoples dreams says Minister BC Patil gvd
Author
First Published Dec 18, 2022, 10:13 PM IST

ಹಿರೇಕೆರೂರ (ಡಿ.18): ತಾಲೂಕಿನ ಜನತೆ ಕಂಡ ಕನಸನ್ನು ನನಸು ಮಾಡಲು ಹೊರಟಿದ್ದೇನೆ, ನಾನು ಹಲವಾರು ಪಕ್ಷ ಬದಲಾವಣೆ ಮಾಡಿದ್ದೇನೆ. ಹಿಂದೆ ಪಕ್ಷದಲ್ಲಿ ಜನತೆಗೆ ಬರಿ ಸುಳ್ಳು ಭರವಸೆಗಳನ್ನು ನೀಡುವುದೇ ಆಗಿತ್ತು. ಆದರೆ, ಬಿಜೆಪಿ ಸೇರಿ ಗೆದ್ದು ಮಂತ್ರಿಯಾಗಿ ತಾಲೂಕಿನ ಎಲ್ಲ ಬೇಡಿಕೆಗಳನ್ನು ಈಡೇರಿಸಿ ತಾಲೂಕನ್ನು ಅಭಿವೃದ್ಧಿಯತ್ತ ತಂದಿದ್ದೇನೆ. ಜನತೆ ಕಂಡ ಕನಸನ್ನು ಈಡೇರಿಸುವ ಸಲುವಾಗಿ ಬಿಜೆಪಿ ಸೇರಿಕೊಂಡೆ ಹೊರತು ಯಾವುದೇ ವೈಯಕ್ತಿಕ ಲಾಭಕ್ಕಾಗಿ ಅಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಹಿರೇಕೆರೂರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ನನಗೆ ರಾಜಕೀಯ ಶಕ್ತಿ ತಂದು ಕೊಟ್ಟವರು ಹಿರೇಕೆರೂರ ಮತ್ತು ರಟ್ಟಿಹಳ್ಳಿ ತಾಲೂಕಿನ ಜನತೆ. ಜನರ ಋುಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ನಾನು ಮಾಡಿದ ಪ್ರಗತಿ ನನ್ನ ಹೆಸರು ಹೇಳುತ್ತಿವೆ. ಹಿರೇಕೆರೂರ ಇತಿಹಾಸದಲಿ ಬೃಹತ್‌ ಬದಲಾವಣೆ ಆಗಿದೆ. ಅಭಿವೃದ್ಧಿ ಎಲ್ಲೆಲ್ಲೂ ಎದ್ದು ಕಾಣುತ್ತಿದೆ. ಆದರೆ ತಾಲೂಕಿನ ಅಭಿವೃದ್ಧಿಯನ್ನು ಯು.ಬಿ. ಬಣಕಾರ ಸಹಿಸದೇ ಬಿ.ಸಿ. ಪಾಟೀಲ ಕಿರುಕುಳ ಕೊಟ್ಟರು ಎಂಬ ಆಪಾದನೆ ಕೊಟ್ಟರು. 

ಚಿತ್ರದುರ್ಗ ಜಿಲ್ಲೆಯ ರೈತರಿಗೆ 223 ಕೋಟಿ ಬೆಳೆ ಪರಿಹಾರ: ಸಚಿವ ಬಿ.ಸಿ.ಪಾಟೀಲ್‌

ಅವರು, ನಾವು ಯಡಿಯೂರಪ್ಪ ಅವರ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು, ರಾಜ್ಯದ ಅಭಿವೃದ್ಧಿಯ ಜೊತೆಗೆ ತಾಲೂಕಿನ ಅಭಿವೃದ್ಧಿಯಾಗಬೇಕು ಎಂದು ಜೊತೆ ಜೊತೆಯಾಗಿ ನಡೆದವು. ಸರಕಾರದ ಎಲ್ಲ ಅಧಿಕಾರ ಹಾಗೂ ಸೌಲಭ್ಯಗಳನ್ನು ಪಡೆದು ನಂತರ ಕಾಂಗ್ರೆಸ್‌ ಸೇರಿ ನನ್ನ ಮೇಲೆ ಆಪಾದನೆ ಕೊಟ್ಟರು. ಯಾವ ಪಕ್ಷ ಅನ್ನ ಕೊಟ್ಟಿತ್ತು,ಯಾವ ಪಕ್ಷ ಅಧಿಕಾರ ಕೊಟ್ಟಿತ್ತು, ಆ ಪಕ್ಷದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡಬಾರದು. ಯಾವ ಪಕ್ಷ ದೇಶದ್ರೋಹ ಬೆಂಬಲಿಸುತ್ತಿದೆಯೋ ಆಂತಹ ಪಕ್ಷ ಸೇರಿದ್ದಾರೆ. ಅವರಿಗೆ ತಾಲೂಕಿನ ಜನರ ಹಿತಬೇಡ, ಇದನ್ನು ಜನತೆ ತೀರ್ಮಾನ ಮಾಡುತ್ತಾರೆ, ನಿಮಗೆ ತಾಕತ್ತು ಇದ್ದರೆ ನಿಮ್ಮ ಸಾಧನೆಯನ್ನು ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.

ನನಗೆ ಮತ ನೀಡಿದ ಜನತೆಗೆ ದ್ರೋಹ ಮಾಡುವುದಿಲ್ಲ. ಮತ್ತೆ 2023ರ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದು ಮತ್ತೆ ನಿಮ್ಮ ಸೇವೆ ಮಾಡುತ್ತೇನೆ. ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳದೇ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಕರೆ ನೀಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ದೇಶದಲ್ಲಿ ಗಟ್ಟಿಪಾರ್ಟಿ ಇದ್ದರೆ ಅದು ಬಿಜೆಪಿ. ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ಇದ್ದಾರೆ. ಗುಜರಾತ ರಾಜ್ಯದಲ್ಲಿ ಹೇಗೆ ವಿಜಯದ ಪತಾಕೆ ಹಾರಿಸಲಾಯಿತೋ ಹಾಗೆ ಕರ್ನಾಟಕದಲ್ಲಿ 2023ನೇ ಚುನಾವಣೆಯಲ್ಲಿ ವಿಜಯದ ಪತಾಕೆ ಹಾರಿಸಬೇಕಾಗಿದೆ. ಆದ್ದರಿಂದ ಕಾರ್ಯಕರ್ತರು ಈಗಿನಿಂದಲೇ ಸನ್ನದ್ಧರಾಗಬೇಕು ಎಂದರು.

ಗ್ರಾಮ ವಾಸ್ತವ್ಯದಿಂದ ಜನರಿಗೆ ಸೌಲಭ್ಯ: ಶಾಸಕ ರೇಣುಕಾಚಾರ್ಯ

ಜಿಲ್ಲಾ ಬಿಜೆಪಿ ಉಸ್ತುವಾರಿ ಎಲ್‌.ಎನ್‌. ಕಲ್ಲೇಶ ಮಾತನಾಡಿ, ಜನರಿಗೆ ಅವಶ್ಯವಿರುವ ಸೌಲಭ್ಯಗಳನ್ನು ಎರಡು ಸರಕಾರಗಳು ಒದಗಿಸಿಕೊಟ್ಟಿವೆ. ಬಿಜೆಪಿ ಅಧಿಕಾರಕ್ಕೆ ಬರಲು ಕಾರ್ಯಕರ್ತರಿಂದ ಮಾತ್ರ ಸಾಧ್ಯ ಎಂದರು. ಈ ಸಂದರ್ಭದಲ್ಲಿ ವನಜಾ ಪಾಟೀಲ, ಪಾಲಾಕ್ಷಗೌಡ ಪಾಟೀಲ, ಎನ್‌.ಎಂ. ಈಟೇರ, ಪ.ಪಂ. ಅಧ್ಯಕ್ಷ ಕಂಠಾಧರ ಅಂಗಡಿ, ಲಿಂಗರಾಜ ಚಪ್ಪರದಹಳ್ಳಿ, ಜಗದೀಶ ತಂಬಾಕದ, ದೊಡ್ಡಗೌಡ ಪಾಟೀಲ, ಸೃಷ್ಟಿಪಾಟೀಲ, ಆರ್‌.ಎನ್‌. ಗಂಗೋಳ, ಜಿ.ಪಿ. ಪ್ರಕಾಶಗೌಡ, ಮಹೇಶ ಗುಬ್ಬಿ, ಹನುಮಂತಗೌಡ ಭರಮಗೌಡ್ರ, ಪರಮೇಶಪ್ಪ ಹಲಗೇರಿ, ಶಿವಕುಮಾರ ತಿಪ್ಪಶೆಟ್ಟಿ, ದೇವರಾಜ ನಾಗಣ್ಣನವರ, ಆನಂದಪ್ಪ ಹಾದಿಮನಿ, ಜಾಪರ ಖಾಜಿ, ಮಂಜುಳಾ ರವಿಶಂಕರ ಬಾಳಿಕಾಯಿ, ಗೀತಾ ದಂಡಿಗಿಹಳ್ಳಿ, ರೇಣುಕಪ್ಪ ಭರಮಗೌಡ್ರ, ಬಸವರಾಜ ಚಿಂದಿ, ಅಲ್ತಪಖಾನ್‌ ಪಠಾಣ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Follow Us:
Download App:
  • android
  • ios