ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನವು ಶಕ್ತಿ ಪ್ರದರ್ಶನ ಮಾಡುವ ವೇದಿಕೆ ಅಲ್ಲ. ಹತ್ತು ಇಲ್ಲವೇ, ಇಪ್ಪತ್ತು ಲಕ್ಷ ಜನರು ಸೇರಿದರೆ ಅದು ಶಕ್ತಿ ಪ್ರದರ್ಶನವಾಗುತ್ತದೆ. ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡರೆ ಅದು ಹೇಗೆ ಶಕ್ತಿ ಪ್ರದರ್ಶನ ಆಗುತ್ತದೆ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದ ಡಾ.ಶಾಮನೂರು ಶಿವಶಂಕರಪ್ಪ 

ದಾವಣಗೆರೆ(ಅ.07):  ನಾನು ಇದುವರೆಗೆ ಯಾವ ಬಾಂಬ್ ಹಾಕಲೂ ಹೋಗಿಲ್ಲ. ಯಾವ ಹೈಕಮಾಂಡ್‌ ನಿಂದಲೂ ನನಗೆ ನೋಟಿಸ್‌ ಬಂದಿಲ್ಲ. ನನಗೆ ಯಾವ ಹೈಕಮಾಂಡೂ ಇಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್‌ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.

ಬಾಪೂಜಿ ಎಂಬಿಎ ಗ್ರೌಂಡ್‌ನಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ, ನಿಮ್ಮ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆಗಿಲ್ಲ, ಸಮಸ್ಯೆ ಬಗೆಹರಿದಿದೆ, ಸಿದ್ದರಾಮಯ್ಯ ಜೊತೆ ತಂದೆ ಮಾತನಾಡುತ್ತಾರೆ. ಅದೆಲ್ಲಾ ಮುಗಿದ ಅಧ್ಯಾಯ ಎಂದು ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಾಮನೂರು ಶಿವಶಂಕರಪ್ಪ, ಅವರು ಹೇಳಿದ್ದಾರಲ್ವಾ. ಅವರೇ ಹೇಳಿದ ಮೇಲೆ ಮುಗಿಯಿತು. ಮತ್ತೇನೂ ಇಲ್ಲ ಎಂದು ತಿಳಿಸಿದರು.

ಶೇ.80ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದ್ರೂ ಇಬ್ರೇ ಮಿನಿಸ್ಟ್ರು! ಶಾಮನೂರಿಗೆ ರಾಠೋಡ್‌ 'ಸಾಮಾಜಿಕ ನ್ಯಾಯ'ದ ಪಾಠ

ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಯಾವಾಗ ಮಾತನಾಡುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನೀವು ಸಿದ್ದರಾಮಯ್ಯ ಅವರನ್ನೇ ಕೇಳಿ. ಒಂದು ವೇಳೆ ಸಿದ್ದರಾಮಯ್ಯ ಜೊತೆ ಮಾತನಾಡಿದರೂ ಅದೂ ಸಿಕ್ರೇಟ್ ಆಗಿರುತ್ತದೆ. ಅದನ್ನು ಬಹಿರಂಗವಾಗಿ ಹೇಳಲು ಆಗದು ಎಂದು ಸ್ಪಷ್ಟಪಡಿಸಿದರು.

ಇನ್ನು ಮಹಾಸಭಾ ಅಧಿವೇಶನ ಕುರಿತು ಮಾತನಾಡಿ, ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನವು ಶಕ್ತಿ ಪ್ರದರ್ಶನ ಮಾಡುವ ವೇದಿಕೆ ಅಲ್ಲ. ಹತ್ತು ಇಲ್ಲವೇ, ಇಪ್ಪತ್ತು ಲಕ್ಷ ಜನರು ಸೇರಿದರೆ ಅದು ಶಕ್ತಿ ಪ್ರದರ್ಶನವಾಗುತ್ತದೆ. ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಂಡರೆ ಅದು ಹೇಗೆ ಶಕ್ತಿ ಪ್ರದರ್ಶನ ಆಗುತ್ತದೆ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದರು.

ಡಿಸೆಂಬರ್ 23 ಮತ್ತು 24ರಂದು ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನ ನಡೆಯಲಿದೆ. ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಸಮಾಜದ ಬಂಧುಗಳು ಬರುತ್ತಾರೆ ಎಂದು ಹೇಳಿದರು.