ಲೋಕಸಭೆ ಚುನಾವಣೆ 2024: ಅಭ್ಯರ್ಥಿ ಯಾರೂ ಎಂದು ನನಗೂ ಗೊತ್ತಿಲ್ಲ, ಸಚಿವೆ ಶೋಭಾ ಕರಂದ್ಲಾಜೆ

ಭಿನ್ನಮತ ಇದೆ, ಶಮನವಾಗುತ್ತದೆ. ಯಾಕೆಂದರೆ ಅದು ಪೂರ್ವ ನಿಯೋಜಿತ ಭಿನ್ನಮತ, ಹಣ ಇದ್ದವರು ಹಣ ಕೊಟ್ಟು ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದ್ದಾರೆ ಎಂದವರು ತನ್ನ ವಿರುದ್ಧ ಭಿನ್ನಮತದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ 

I Do Not Know who is the Candidate for Udupi Chikkamagaluru Says Shobha Karandlaje grg

ಉಡುಪಿ(ಫೆ.29):  ಬಿಜೆಪಿಯಲ್ಲಿ ಅಭ್ಯರ್ಥಿ ಯಾರೂ ಎನ್ನುವುದು ಮುಖ್ಯವಲ್ಲ, ಎಲ್ಲ ಕಡೆಗೂ ಮೋದಿಯೇ ಕ್ಯಾಂಡಿಡೇಟ್ ಎಂದು ರಾಷ್ಟ್ರೀಯ ಅಧಿವೇಶನದಲ್ಲಿ ಪ್ರಧಾನಿಯವರೇ ಹೇಳಿದ್ದಾರೆ. ಉಡುಪಿ-ಚಿಕ್ಕಮಗಳೂರಿಗೂ ಅಭ್ಯರ್ಥಿ ಯಾರು ಅನ್ನೋದು ನನಗೂ ಗೊತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಿನ್ನಮತ ಇದೆ, ಶಮನವಾಗುತ್ತದೆ. ಯಾಕೆಂದರೆ ಅದು ಪೂರ್ವ ನಿಯೋಜಿತ ಭಿನ್ನಮತ, ಹಣ ಇದ್ದವರು ಹಣ ಕೊಟ್ಟು ಏನು ಬೇಕಾದರೂ ಮಾಡಬಹುದು ಎಂದು ಭಾವಿಸಿದ್ದಾರೆ ಎಂದವರು ತನ್ನ ವಿರುದ್ಧ ಭಿನ್ನಮತದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದರು.

ರಾಜಕೀಯ ವ್ಯಭಿಚಾರಕ್ಕೆ ಸೋಮಶೇಖರ್ ಸಾಕ್ಷಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಹಣದ ದರ್ಪದಿಂದ ಚುನಾವಣೆ ಮಾಡಲು ಆಗುವುದಿಲ್ಲ. ಹಣ ಇದ್ದವರೇ ಈ ದೇಶದಲ್ಲಿ ಪ್ರಧಾನಿ ಆಗಬೇಕು, ಸಂಸದರಾಗಬೇಕು, ಮುಖ್ಯಮಂತ್ರಿ ಆಗಬೇಕು ಅಂತಿದ್ದರೆ, ಟಾಟಾ ಬಿರ್ಲಾ, ಅದಾನಿ, ಅಂಬಾನಿ ಅಂಥವರೇ ಆಗುತ್ತಿದ್ದರು. ಆದರೆ ಒಬ್ಬ ಚಾ ಮಾರುವವರು ದೇಶದ ಪ್ರಧಾನಿಯಾಗಿದ್ದಾರೆ. ನನ್ನಂಥ ಸಾಮಾನ್ಯ ಕುಟುಂಬದಿಂದ ಬಂದವರು ದುಡ್ಡು ಇಲ್ಲದವರು ಕೂಡ ಸಂಸದರಾಗಿದ್ದಾರೆ. ಕ್ಷೇತ್ರದ ಗುತ್ತಿಗೆದಾರರ ಜೊತೆ ಮಾತನಾಡದೆ ಇದ್ದವರು ಕೂಡ ಸಂಸದರಾಗಬಹುದು ಎಂದರೆ ಇದು ಪ್ರಜಾತಂತ್ರ ವ್ಯವಸ್ಥೆಯ ದೊಡ್ಡತನ. ಕಾರ್ಯಕರ್ತರು, ಜನರು ಭಾರತೀಯ ಜನತಾ ಪಕ್ಷದ ಕೈ ಹಿಡಿಯುತ್ತಾರೆ ಎಂದು ಹೇಳಿದರು.

ಚಿಕ್ಕಮಗಳೂರಿನಲ್ಲಿ ಗೋ ಬ್ಯಾಕ್ ಶೋಭಾ ಪತ್ರ ಅಭಿಯಾನಕ್ಕೆ ಪ್ರತಿಕ್ರಿಯಿಸಿದ ಶೋಭಾ, ಒಂದೇ ಕೈ ಬರಹದಲ್ಲಿ ಸುಮಾರು 41 ಪತ್ರಗಳನ್ನು ಬರೆದಿದ್ದಾರೆ. ಅವುಗಳನ್ನು ಕೇವಲ ನಾಲ್ಕೇ ಜನರಿಂದ ಅಂಚೆಗೆ ಹಾಕಿದ್ದಾರೆ, ಒಬ್ಬೊಬ್ಬರು 10-15 ಪತ್ರಗಳನ್ನು ಅಂಚೆಗೆ ಹಾಕಿದ್ದಾರೆ ಎಂದವರು ಹೇಳಿದರು.

ಚುನಾವಣೆಗೆ ಪೂರ್ಣ ತಯಾರಿ ನಡೆಸಿದ್ದೇನೆ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ, ಅಂಚೆ ಇಲಾಖೆ, ರೈಲ್ವೆ ಇಲಾಖೆಯಲ್ಲಿ ಉತ್ತಮ ಕಾರ್ಯಕ್ರಮ ನೀಡಿದ್ದೇನೆ. ಶೇ.80-90 ರಷ್ಟು ಜನಕ್ಕೆ ಕೇಂದ್ರ ಸರ್ಕಾರದ ಯೋಜನೆಗಳು ತಲುಪಿವೆ. ಆದರೆ ಪ್ರಚಾರದಲ್ಲಿ ಹಿಂದೆ ಬಿದ್ದಿದ್ದೇನೆ ಎಂದವರು ಹೇಳಿದರು.

ಪಾಕ್ ಪರ ಘೋಷಣೆ ಎನ್‌ಐಎ ತನಿಖೆ ಮಾಡಿಸಿ: ಶೋಭಾ

ವಿಧಾನಸೌಧದೊಳಗೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣವನ್ನು ಎನ್‌ಐಎ ತನಿಖೆ ಮಾಡಿದರೆ ಸತ್ಯಾಸತ್ಯತೆ ಹೊರ ಬರುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧಕ್ಕೆ ಪಾಸ್ ಇಲ್ಲದೇ ಒಳಗೆ ಹೋಗುವಂತಿಲ್ಲ. ಆದರೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಪಾಸ್ ಇಲ್ಲದೆ ಹೇಗೆ ಒಳಗೆ ಹೋದರು, ಇದಕ್ಕೆ ನಜೀರ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಶೋಭಾ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಲ್ಲಿ ಮತ್ತೆ ಬಿಜೆಪಿಗರಿಂದಲೇ ‘ಶೋಭಾ ಗೋ ಬ್ಯಾಕ್‌’ ಚಳವಳಿ..!

ನಜೀರ್‌ಗೆ ಯಾರ ಜೊತೆ ಸಂಪರ್ಕ ಇದೆ, ಪಾಕಿಸ್ತಾನ್ ಪರ ಘೋಷಣೆ ಕೂಗಿದ ಯುವಕರಿಗೆ ಯಾರ ಸಂಪರ್ಕ ಇದೆ ಎಂಬ ಬಗ್ಗೆ ಉನ್ನತ ತನಿಖೆ ನಡೆಯಬೇಕು. ಇದರ ಹಿಂದೆ ಬಹಳ ದೊಡ್ಡ ಷಡ್ಯಂತ್ರದ ಗುಮಾನಿ ಇದೆ, ಭಾರತವನ್ನು ವಿಭಜನೆ ಮಾಡುವ ಮಾತನ್ನು ಕಾಂಗ್ರೆಸ್ ಆಡುತ್ತಿದೆ. ದೇಶದಲ್ಲಿ ಗೊಂದಲ ನಿರ್ಮಾಣ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ನಾನು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದವರು ಹೇಳಿದರು.

ಯಾರನ್ನೋ ಓಲೈಕೆ ಮಾಡುವ ಉದ್ದೇಶದಿಂದ ಕಚೇರಿ, ಮನೆಯೊಳಗೆ ಸಿದ್ದರಾಮಯ್ಯ ಯಾರನ್ನು ಬೇಕಾದರೂ ಬಿಟ್ಟುಕೊಳ್ಳುತ್ತಿದ್ದಾರೆ. ಯಾವುದೇ ಸರ್ಕಾರಗಳು, ಅಧಿಕಾರಗಳು ಪರ್ಮನೆಂಟ್ ಅಲ್ಲ. ಈ ಪ್ರಕರಣದ ಹಿಂದಿರುವ ಶಕ್ತಿಯನ್ನು ಪೊಲೀಸರು ಪತ್ತೆ ಮಾಡಬೇಕು, ಆರೋಪಿಗಳನ್ನು ಬಂಧಿಸಬೇಕು ಎಂದು ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆರೋಪಿಯನ್ನು ಬಂಧಿಸುವಂತೆ ಕೇಳಿಕೊಂಡಿದ್ದೇನೆ ಎಂದರು.

Latest Videos
Follow Us:
Download App:
  • android
  • ios